ಪ್ರತಿ ಬಾರಿ ಸೇತುವೆ ಕುಸಿದಾಗ, ಕಳಪೆ ಕಾಮಗಾರಿಯಿಂದ ರಸ್ತೆ ಅಪಘಾತ ಸಂಭವಿಸಿದಾಗ, ಆಸ್ಪತ್ರೆಯ ನಿರ್ಲಕ್ಷ್ಯದಿಂದ ರೋಗಿಯೊಬ್ಬರು ಮೃತಪಟ್ಟಾಗ ಒಂದೇ ಪ್ರಶ್ನೆ ಮೂಡುತ್ತದೆ — ಸಾಮಾನ್ಯ ನಾಗರಿಕನ ಜೀವಕ್ಕೆ ಈ ದೇಶದಲ್ಲಿ ನಿಜವಾಗಿಯೂ ಬೆಲೆ ಇದೆಯೇ?

ಒಬ್ಬ ಬಡ ವ್ಯಕ್ತಿ ಸಣ್ಣ ತಪ್ಪು ಮಾಡಿದರೂ ಕಾನೂನಿನ ಮುಂದೆ ನಿಲ್ಲಬೇಕಾಗುತ್ತದೆ. ಆದರೆ ಭ್ರಷ್ಟಾಚಾರ, ಕರ್ತವ್ಯಲೋಪ ಅಥವಾ ನಿರ್ಲಕ್ಷ್ಯದಿಂದ ಜನರ ಜೀವಹಾನಿ ಸಂಭವಿಸಿದಾಗ, ಹೊಣೆಗಾರ ಅಧಿಕಾರಿಗಳು ಮತ್ತು ವೃತ್ತಿಪರರ ವಿರುದ್ಧ ಕಠಿಣ ಕ್ರಮಗಳು ಅಪರೂಪವಾಗಿ ಕಾಣಿಸುತ್ತವೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ.
ದೇಶ ಎಂದರೆ ಕೇವಲ ಕಟ್ಟಡಗಳು, ರಸ್ತೆಗಳು, ಪ್ರತಿಮೆಗಳು, ಯೋಜನೆಗಳು ಅಥವಾ ರಾಜಕೀಯ ಘೋಷಣೆಗಳಲ್ಲ. ದೇಶ ಅಂದರೆ ಜನರು. ಜನರ ಜೀವ, ಆರೋಗ್ಯ, ಸುರಕ್ಷತೆ ಮತ್ತು ಗೌರವವನ್ನು ಕಾಪಾಡುವ ವ್ಯವಸ್ಥೆಯೇ ನಿಜವಾದ ರಾಷ್ಟ್ರ ನಿರ್ಮಾಣ. ಜನರ ಜೀವಕ್ಕೆ ಬೆಲೆ ಇಲ್ಲದಿದ್ದರೆ ಅಭಿವೃದ್ಧಿಯ ಎಲ್ಲ ಘೋಷಣೆಗಳೂ ಅರ್ಥ ಕಳೆದುಕೊಳ್ಳುತ್ತವೆ.
ಕಳಪೆ ಕಾಮಗಾರಿಗೆ ಅನುಮೋದನೆ ನೀಡಿದ ಇಂಜಿನಿಯರ್, ಸುರಕ್ಷತಾ ನಿಯಮಗಳನ್ನು ಕಡೆಗಣಿಸಿದ ಅಧಿಕಾರಿಗಳು, ಗಂಭೀರ ನಿರ್ಲಕ್ಷ್ಯ ತೋರಿದ ವೈದ್ಯರು ಅಥವಾ ಆಡಳಿತದ ವೈಫಲ್ಯದಿಂದ ಜೀವಹಾನಿ ಸಂಭವಿಸಿದರೆ, ಅದನ್ನು ಕೇವಲ ಆಡಳಿತಾತ್ಮಕ ತಪ್ಪು ಎಂದು ಪರಿಗಣಿಸುವ ಕಾಲ ಮುಗಿಯಬೇಕು. ಜನರ ಜೀವಕ್ಕೆ ಹಾನಿ ಉಂಟುಮಾಡುವ ನಿರ್ಲಕ್ಷ್ಯವನ್ನು ಗಂಭೀರ ಅಪರಾಧವಾಗಿ ಪರಿಗಣಿಸುವ ಬಗ್ಗೆ ದೇಶವ್ಯಾಪಿ ಚರ್ಚೆ ನಡೆಯಬೇಕು.
ಹಾಗಾದರೆ ಪ್ರಶ್ನೆ ಏನೆಂದರೆ, ಜನರ ಜೀವಹಾನಿಗೆ ಕಾರಣವಾಗುವ ಇಂತಹ ಗಂಭೀರ ನಿರ್ಲಕ್ಷ್ಯದ ವಿರುದ್ಧ ವಿಶೇಷ ಮತ್ತು ಕಠಿಣ ಕಾನೂನುಗಳನ್ನು ತರಲು ಸರ್ಕಾರಗಳು ಯಾಕೆ ಹಿಂದೇಟು ಹಾಕುತ್ತಿವೆ? ಸಂಸತ್ತಿನಲ್ಲಿ ಮತ್ತು ವಿಧಾನಸಭೆಗಳಲ್ಲಿ ಈ ವಿಷಯಕ್ಕೆ ಅಗತ್ಯ ಆದ್ಯತೆ ಯಾಕೆ ಸಿಗುತ್ತಿಲ್ಲ? ಮುಖ್ಯಮಂತ್ರಿ, ಪ್ರಧಾನ ಮಂತ್ರಿ, ಸಂಸದರು ಮತ್ತು ಶಾಸಕರು ಜನರ ಜೀವದ ಭದ್ರತೆಯನ್ನು ರಾಜಕೀಯ ಲಾಭ-ನಷ್ಟಗಳಿಗಿಂತ ಮೇಲಿಟ್ಟುಕೊಂಡು ಚರ್ಚೆ ನಡೆಸಬೇಕಲ್ಲವೇ?
ಪ್ರಜಾಪ್ರಭುತ್ವದಲ್ಲಿ ಜನರೇ ಯಜಮಾನರು. ಆದ್ದರಿಂದ ಜನರು ಕೇವಲ ಮತದಾರರಾಗಿ ಉಳಿಯದೆ, ಜೀವಹಾನಿಗೆ ಕಾರಣವಾಗುವ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದ ವಿರುದ್ಧ ಕಠಿಣ ಶಿಕ್ಷೆ ಹಾಗೂ ತ್ವರಿತ ನ್ಯಾಯಕ್ಕಾಗಿ ಧ್ವನಿ ಎತ್ತಬೇಕು. ಜನರ ಜೀವ ಹೋದ ನಂತರ ಸಂತಾಪ ಸೂಚಿಸುವುದಕ್ಕಿಂತ, ಜೀವ ಉಳಿಸುವ ಕಾನೂನುಗಳನ್ನು ರೂಪಿಸುವುದು ಹೆಚ್ಚು ಮಹತ್ವದ್ದು.
ಇಂದು ದೇಶಕ್ಕೆ ಬೇಕಾಗಿರುವುದು ಕೇವಲ ಹೊಸ ಯೋಜನೆಗಳಲ್ಲ, ಜನರ ಜೀವದ ಮೌಲ್ಯವನ್ನು ಕಾಪಾಡುವ ಕಾನೂನುಗಳು. ಏಕೆಂದರೆ ದೇಶ ಅಂದರೆ ಚಿತ್ರ ವಿಚಿತ್ರಗಳಲ್ಲ, ದೇಶ ಅಂದರೆ ಜನರು. ಜನರ ಜೀವವೇ ದೇಶದ ನಿಜವಾದ ಸಂಪತ್ತು.
ಜನರ ಜೀವಕ್ಕೆ ಬೆಲೆ ಇದ್ದರೆ, ಜನರ ಜೀವ ಕಸಿದ ನಿರ್ಲಕ್ಷ್ಯಕ್ಕೂ ಕಾನೂನಿನ ಮುಂದೆ ಕಠಿಣ ಬೆಲೆ ಕಟ್ಟಲೇಬೇಕು.

