ಬೆಳ್ತಂಗಡಿ :- ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ವಿವಿಧ ಅರಣ್ಯ ಹಾಗೂ ಅರಣ್ಯದಂಚಿನ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಿಚಾರ ಇಂದು ಅತ್ಯಂತ ಮಹತ್ವದ ವಿಷಯವಾಗಿದೆ. ರಸ್ತೆ, ಕುಡಿಯುವ ನೀರು, ವಿದ್ಯುತ್, ಶಾಲೆ, ಆರೋಗ್ಯ ಕೇಂದ್ರ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆಯಿಂದ ಸಾವಿರಾರು ಕುಟುಂಬಗಳು ಇನ್ನೂ ಸಂಕಷ್ಟದ ಜೀವನ ನಡೆಸುತ್ತಿವೆ.

ಈ ಹಿನ್ನೆಲೆಯಲ್ಲಿ, ಅರಣ್ಯ ಹಕ್ಕು ಕಾಯ್ದೆ (Forest Rights Act)ಯ ಸೆಕ್ಷನ್ 3(2) ಅಡಿಯಲ್ಲಿ ಭೂ ಪರಿವರ್ತನೆ ಮಾಡಿ, ಫಾರೆಸ್ಟ್ ಕ್ಲಿಯರೆನ್ಸ್ ಹಾಗೂ ವನ್ಯಜೀವಿ ಮಂಡಳಿಯ ಪ್ರತ್ಯೇಕ ಅನುಮತಿ ಇಲ್ಲದೇ ಜಿಲ್ಲಾ ಅರಣ್ಯಾಧಿಕಾರಿ (DFO) ಹಂತದಲ್ಲೇ ಅನುಮತಿ ನೀಡುವ ಕುರಿತು ಕೇಂದ್ರ ಸರ್ಕಾರದ ಆದೇಶದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕನಗವಲ್ಲಿ ಅವರನ್ನು ಭೇಟಿ ಮಾಡಿ ಸೂಚನೆ ಪತ್ರ ಸಲ್ಲಿಸಲಾಗಿದೆ.
ಈ ಸೂಚನೆ ಪತ್ರ ಕೇವಲ ಬೆಳ್ತಂಗಡಿ ಕ್ಷೇತ್ರಕ್ಕೆ ಸೀಮಿತವಾಗಿರುವುದಿಲ್ಲ. ಸರ್ಕಾರದ ಹಂತದಿಂದ ಈ ಕುರಿತು ಸ್ಪಷ್ಟ ಆದೇಶಗಳು ಜಿಲ್ಲೆಯ ಅಧಿಕಾರಿಗಳಿಗೆ ತಲುಪಿದರೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಬುಡಕಟ್ಟು ಸಮುದಾಯಗಳಿಗೆ ಇದರ ಪ್ರಯೋಜನ ದೊರೆಯಲಿದೆ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ವೇಗಗೊಳ್ಳುವುದರ ಜೊತೆಗೆ, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಸಾವಿರಾರು ಕುಟುಂಬಗಳ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಲು ಸಾಧ್ಯವಾಗುತ್ತದೆ.
ಆದ್ದರಿಂದ ಈ ವಿಷಯವನ್ನು ಸಂಬಂಧಿತ ಸಚಿವರ ಗಮನಕ್ಕೆ ತಂದು, ಕರ್ನಾಟಕ ವಿಧಾನಸಭೆಯಲ್ಲಿ ಚರ್ಚೆಗೆ ಒಳಪಡಿಸುವುದು ಅಗತ್ಯವಾಗಿದೆ. ಜನಪ್ರತಿನಿಧಿಗಳು ಪಕ್ಷಾತೀತವಾಗಿ ಈ ವಿಷಯಕ್ಕೆ ಬೆಂಬಲ ನೀಡಿ, ಅರಣ್ಯದಂಚಿನ ಜನರಿಗೆ ಸಂವಿಧಾನಬದ್ಧ ಹಕ್ಕುಗಳು ಮತ್ತು ಮೂಲಭೂತ ಸೌಲಭ್ಯಗಳು ತಲುಪುವಂತೆ ಕ್ರಮ ಕೈಗೊಳ್ಳಬೇಕಿದೆ.

