ಬೆಂಗಳೂರು, ಮೇ 27: ಕರ್ನಾಟಕ ಕಾಂಗ್ರೆಸ್ ನಾಯಕತ್ವ ಬದಲಾವಣೆ ಪ್ರಕ್ರಿಯೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಸಿಎಂ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 10.30ಕ್ಕೆ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಲು ಸಿಎಂ ಕಚೇರಿಯಿಂದ ಸಮಯ ಕೋರಲಾಗಿದೆ. ಇದಕ್ಕೂ ಮುನ್ನ ದೆಹಲಿಯಲ್ಲಿ ಹೈಕಮಾಂಡ್ ನಡೆಸಿದ ಸುದೀರ್ಘ 7 ಗಂಟೆಗಳ ಮ್ಯಾರಥಾನ್ ಸಭೆಯಲ್ಲಿ, ರಾಹುಲ್ ಗಾಂಧಿ ಅವರೊಂದಿಗಿನ ಒನ್-ಟು-ಒನ್ ಮಾತುಕತೆ ಬಳಿಕ ಸಿದ್ದರಾಮಯ್ಯ ಅವರು ಅಧಿಕಾರ ಹಂಚಿಕೆ ಸೂತ್ರದಂತೆ ಹುದ್ದೆ ತ್ಯಾಗ ಮಾಡಲು ಒಪ್ಪಿಕೊಂಡಿದ್ದರು. ದೆಹಲಿಯಿಂದ ವಾಪಸ್ ಬಂದ ಬೆನ್ನಲ್ಲೇ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ನಾಳೆ ಬೆಳಗ್ಗೆ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಎಲ್ಲಾ ಸಚಿವರಿಗೆ ಉಪಾಹಾರ ಕೂಟ ಆಯೋಜಿಸಿದ್ದು, ವೈಯಕ್ತಿಕವಾಗಿ ಎಲ್ಲರಿಗೂ ಆಹ್ವಾನ ನೀಡಿದ್ದಾರೆ. ದೆಹಲಿಯಿಂದ ಗುರುವಾರ ಮುಂಜಾನೆ ಬೆಂಗಳೂರಿಗೆ ಮರಳಲಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಸಹ ಬ್ರೇಕ್ಫಾಸ್ಟ್ ಮೀಟ್ನಲ್ಲಿ ಭಾಗಿಯಾಗಲಿದ್ದಾರೆ.
ಮತ್ತೊಂದೆಡೆ, ಸಿಎಂ ರಾಜೀನಾಮೆ ಸುದ್ದಿ ಹೊರಬೀಳುತ್ತಿದ್ದಂತೆ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸಕ್ಕೆ ಆಪ್ತ ಸಚಿವರು ಹಾಗೂ ಶಾಸಕರು ದೌಡಾಯಿಸುತ್ತಿದ್ದಾರೆ. ಈಗಾಗಲೇ ಸಚಿವರಾದ ಜಮೀರ್ ಅಹ್ಮದ್ ಖಾನ್, ಎಂ.ಸಿ. ಸುಧಾಕರ್, ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಹಲವು ನಾಯಕರು ಸಿಎಂ ಭೇಟಿ ಮಾಡಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸುತ್ತಿದ್ದಾರೆ. ಗುರುವಾರ ಬೆಳಗ್ಗೆ ಉಪಾಹಾರ ಕೂಟ ಮುಗಿದ ತಕ್ಷಣವೇ ಸಿದ್ದರಾಮಯ್ಯ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

