ಸಂವಿಧಾನದ ಪರಿಚ್ಛೇದ 21ರಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ “ಬದುಕುವ ಹಕ್ಕು”ವನ್ನು ಭಾರತ ಸಂವಿಧಾನ ಖಾತ್ರಿ ಪಡಿಸಿದೆ. ಬದುಕುವ ಹಕ್ಕಿನ ಅರ್ಥ ಕೇವಲ ಜೀವಂತವಾಗಿರುವುದಲ್ಲ; ಮಾನವೀಯ ಗೌರವದೊಂದಿಗೆ ಆರೋಗ್ಯಕರ ಜೀವನ ನಡೆಸುವ ಹಕ್ಕು ಕೂಡ ಅದರ ಅವಿಭಾಜ್ಯ ಅಂಗವಾಗಿದೆ. ಈ ಹಿನ್ನೆಲೆಯಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ಒದಗಿಸುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಇತ್ತೀಚಿನ ಕಠಿಣ ನಿರ್ದೇಶನ ದೇಶಾದ್ಯಂತ ಮಹತ್ವದ ಚರ್ಚೆಗೆ ಕಾರಣವಾಗಿದೆ.

ಸರ್ಕಾರದಿಂದ ಕಡಿಮೆ ಬೆಲೆಗೆ ಜಾಗ, ಭೂಮಿ ಅಥವಾ ಇತರೆ ಸೌಲಭ್ಯಗಳನ್ನು ಪಡೆದುಕೊಂಡು ಕಾರ್ಯನಿರ್ವಹಿಸುತ್ತಿರುವ ಖಾಸಗಿ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳು ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ಉಚಿತ ಚಿಕಿತ್ಸೆ ನೀಡುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. “ದುಡ್ಡಿಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸುವುದು ಮಾನವೀಯತೆಯ ವಿರುದ್ಧವೂ, ಸಂವಿಧಾನದ ಆತ್ಮಕ್ಕೆ ವಿರುದ್ಧವೂ ಆಗಿದೆ” ಎಂಬ ತೀವ್ರ ಸಂದೇಶವನ್ನು ನ್ಯಾಯಾಲಯ ನೀಡಿದೆ.
ಸುಪ್ರೀಂ ಕೋರ್ಟ್ ಸೂಚಿಸಿರುವ ನಿಯಮಗಳ ಪ್ರಕಾರ, ಸರ್ಕಾರದ ಸಬ್ಸಿಡಿ ದರದಲ್ಲಿ ಜಾಗ ಪಡೆದ ಆಸ್ಪತ್ರೆಗಳು ಹೊರರೋಗಿ ವಿಭಾಗದಲ್ಲಿ (OPD) ಶೇ.25 ರಷ್ಟು ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕು. ಒಳರೋಗಿ ವಿಭಾಗದಲ್ಲಿ (IPD) ಶೇ.10 ರಷ್ಟು ಹಾಸಿಗೆಗಳನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಕಾಯ್ದಿರಿಸಬೇಕು. ಕೇವಲ ಹಾಸಿಗೆ ಅಥವಾ ವೈದ್ಯರ ಸಲಹೆ ಮಾತ್ರವಲ್ಲದೆ, ಔಷಧಿ, ಲ್ಯಾಬ್ ಪರೀಕ್ಷೆ, ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲಾ ವೈದ್ಯಕೀಯ ಸೇವೆಗಳು ಸಂಪೂರ್ಣ ಉಚಿತವಾಗಿರಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ಆದೇಶದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಾರ್ವಜನಿಕರಲ್ಲಿ ಹೆಚ್ಚಿನ ಕುತೂಹಲ ಮತ್ತು ಪ್ರಶ್ನೆಗಳು ಉದ್ಭವಿಸಿವೆ. ಮಂಗಳೂರು ತಾಲೂಕು, ಉಳ್ಳಾಲ ತಾಲೂಕು ಸೇರಿದಂತೆ ಜಿಲ್ಲೆಯ ವ್ಯಾಪ್ತಿಯಲ್ಲಿ ಸರ್ಕಾರದಿಂದ ಕಡಿಮೆ ಬೆಲೆಗೆ ಜಾಗ ಅಥವಾ ಇತರೆ ಸೌಲಭ್ಯಗಳನ್ನು ಪಡೆದುಕೊಂಡಿರುವ ಖಾಸಗಿ ಆಸ್ಪತ್ರೆಗಳು ಯಾವುವು? ಆ ಆಸ್ಪತ್ರೆಗಳು ನಿಜವಾಗಿಯೂ ಬಡವರಿಗೆ ಉಚಿತ ಚಿಕಿತ್ಸೆ ನೀಡುತ್ತಿವೆಯೇ? ಎಷ್ಟು ಜನರಿಗೆ ಇದರ ಪ್ರಯೋಜನ ದೊರಕಿದೆ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ತಕ್ಷಣವೇ ಮಾಹಿತಿ ಬಹಿರಂಗಪಡಿಸಬೇಕಾಗಿದೆ. ಸರ್ಕಾರದ ಸೌಲಭ್ಯ ಪಡೆದುಕೊಂಡಿರುವ ಆಸ್ಪತ್ರೆಗಳ ಸಂಪೂರ್ಣ ಪಟ್ಟಿಯನ್ನು ಪ್ರಕಟಿಸಿ, ಅಲ್ಲಿ ಜಾರಿಯಲ್ಲಿರುವ ಉಚಿತ ಚಿಕಿತ್ಸಾ ಯೋಜನೆಗಳ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು. ಜೊತೆಗೆ OPD ಮತ್ತು IPD ಮೀಸಲಾತಿ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿವೆಯೇ ಎಂಬುದರ ಮೇಲೂ ನಿಯಮಿತ ಪರಿಶೀಲನೆ ನಡೆಸಬೇಕು.
ಆರೋಗ್ಯ ಸೇವೆ ಯಾವುದೇ ದಾನಧರ್ಮದ ವಿಷಯವಲ್ಲ. ಅದು ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಮಾಹಿತಿ ಕೊರತೆಯಿಂದ ಬಡ ಜನರು ತಮ್ಮ ಹಕ್ಕುಗಳಿಂದ ವಂಚಿತರಾಗಬಾರದು. ಸುಪ್ರೀಂ ಕೋರ್ಟ್ ಆದೇಶ ಕೇವಲ ಕಾಗದದಲ್ಲೇ ಉಳಿಯದೆ, ಜಿಲ್ಲಾಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗುವಂತಾಗುವುದು ಆಡಳಿತದ ಜವಾಬ್ದಾರಿಯಾಗಿದೆ.

