ಉಳ್ಳಾಲ: ಮೇ-11;ದೀಪ ಬೆಳಗಿಸಲು ಗಾಣದ ಎಣ್ಣೆ ತೆಗೆಯುವ ಮೂಲಕ ಸಮಾಜಕ್ಕೆ ಬೆಳಕು ಕೊಟ್ಟ ಸಮಾಜ ನಮ್ಮದಾಗಿದೆ.ಉಳ್ಳಾಲದಲ್ಲಿ ಗಾಣಿಗ ಸಮಾಜ ಭವನ ನಿರ್ಮಾಣಕ್ಕೆ ಬಹಳಷ್ಟು ಜನ ಶ್ರಮಿಸಿದ್ದು ಅವರೆಲ್ಲರನ್ನು ನಾವಿಂದು ಸ್ಮರಿಸಬೇಕಿದೆ.ಸಮುದಾಯ ಭವನ ನಿರ್ಮಾಣದಿಂದ ಸಮಾಜವು ಏಳಿಗೆಯಾಗುವುದಲ್ಲದೆ,ಅದರಿಂದ ಬರುವ ಆದಾಯವನ್ನ ಸಮಾಜದ ಅಶಕ್ತ ವರ್ಗದ ಮಕ್ಕಳ ವಿದ್ಯಾಭ್ಯಾಸ ಇನ್ನಿತರ ಅಭಿವೃದ್ಧಿ ಚಟುವಟಿಕೆಗಳಿಗೆ ವಿನಿಯೋಗಿಸಬಹುದಾಗಿದೆಯೆಂದು ಉಳ್ಳಾಲ,ಉಳಿಯ ಶ್ರೀ ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದ ಧರ್ಮದರ್ಶಿಗಳಾದ ದೇವು ಮೂಲ್ಯಣ್ಣ ಅವರು ಅಭಿಪ್ರಾಯಪಟ್ಟರು.


ಗಾಣಿಗರ ಸಮುದಾಯ ಸೇವಾ ಟ್ರಸ್ಟ್ ಉಳ್ಳಾಲ ಪ್ರಖಂಡ ತೊಕ್ಕೊಟ್ಟು ಇದರ ಆಶ್ರಯದಲ್ಲಿ ಉಳ್ಳಾಲ ಬೈಲಿನಲ್ಲಿ ನಿರ್ಮಾಣಗೊಂಡ ನೂತನ”ಗಾಣಿಗ ಭವನ”ವನ್ನು ಭಾನುವಾರದಂದು ಉದ್ಘಾಟಿಸಿದ ಅವರು ಆಶೀರ್ವಚನದ ಮಾತುಗಳನ್ನಾಡಿದರು.ಗಾಣಿಗ ಭವನ ಉದ್ಘಾಟನಾ ಸಮಾರಂಭದಲ್ಲಿ ಎಲ್ಲಾ ಜಾತಿ ಸಮುದಾಯದ ಮುಖಂಡರು ಸೇರಿರುವುದು ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸುತ್ತಿದೆ.ಸಮಾಜದಲ್ಲಿ ನಾವು ಒಬ್ಬರನ್ನೊಬ್ಬರು ಬಿಟ್ಟು ಇರಲಿಕ್ಕೆ ಸಾಧ್ಯವಿಲ್ಲ.ಪ್ರತೀ ತಾಲೂಕಲ್ಲಿ ಇಂತಹ ಭವನಗಳು ತಲೆ ಎತ್ತುವುದರ ಮೂಲಕ ಗಾಣಿಗ ಸಮುದಾಯವು ಮುಂಚೂಣಿಗೆ ಬರಲಿ.ಶೈಕ್ಷಣಿಕ,ಧಾರ್ಮಿಕ ಹಾಗೂ ಕ್ರೀಡಾ ಕ್ಷೇತ್ರಕ್ಕೆ ನೂತನ ಭವನವು ಮಹತ್ತರವಾದ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು.
ನೂತನ ಗಾಣಿಗ ಭವನ ನಿರ್ಮಾಣಕ್ಕೆ ವಿಶೇಷ ಸಹಕಾರ ನೀಡಿದ ಮುಂಬೈ ಉದ್ಯಮಿ ಶ್ರೀನಿವಾಸ ಸಪಲ್ಯ ಮತ್ತು ರತಿಕಾ ಶ್ರೀನಿವಾಸ ಸಪಲ್ಯ ದಂಪತಿಯನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಉಳ್ಳಾಲ ಗಾಣಿಗರ ಸಮುದಾಯ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಸುನಿಲ್ ಕುಮಾರ್ ತೊಕ್ಕೊಟ್ಟು ಅಧ್ಯಕ್ಷತೆ ವಹಿಸಿದ್ದರು.ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮಂಜಪ್ಪ ಕಾರ್ನವರ್,ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್,ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ಕೆ.ಟಿ.ಸುವರ್ಣ,ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷರಾದ ರವೀಂದ್ರ ರೈ ಹರೇಕಳ,ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷರಾದ ಯಶವಂತ ಅಮೀನ್,ಗಟ್ಟಿ ಸಮಾಜದ ಅಧ್ಯಕ್ಷರಾದ ಜನಾರ್ದನ ಗಟ್ಟಿ ಕನ್ನಿಮನೆ,ಮುಂಬೈ ಉದ್ಯಮಿ ಪೇತ್ರಿ ವಿಶ್ವನಾಥ ಶೆಟ್ಟಿ,ಉದ್ಯಮಿ ಜನಾರ್ಧನ ಅರ್ಕುಳ,ಮುಂಬೈ ಗಿರಿಜಾ ವೆಲ್ಫೇರ್ ಫೌಂಡೇಷನ್ ಅಧ್ಯಕ್ಷರಾದ ವಸಂತ ಸಪಲ್ಯ ಕುಂಜಾರು,ರಾಜಸ್ಥಾನದ ಉದ್ಯಮಿ ಸತೀಶ್ ಕುಂದರ್ ,ಉಳಿಯ ಧರ್ಮಅರಸರ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರರಾದ ಯು.ಎಸ್.ಪ್ರಕಾಶ್,ಕ್ಷೇತ್ರದ ಒಂದನೇ ಗುರಿಕಾರರಾದ ರಾಜೇಶ್ ನಾಯ್ಕ್ ಯಾನೆ ಅಂತ ಗುರಿಕಾರ,ಉಳ್ಳಾಲ ಬೈಲು ವೈದ್ಯನಾಥ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಕುಮಾರ್,ತೀಯಾ ಸಮಾಜದ ಮುಖಂಡರಾದ ಚಂದ್ರಹಾಸ್ ಉಳ್ಳಾಲ್,ವಿಶ್ವ ಹಿಂದೂ ಪರಿಷತ್ನ ಗೋಪಾಲ ಕುತ್ತಾರು,ಪ್ರಮುಖರಾದ ಗೌತಮ್ ದುಬಾಯಿ,ರೋಹಿತ್ ಉಳ್ಳಾಲ್,ಅಂಬಿಕಾ ಸುನಿಲ್ ಕುಮಾರ್,ಪುಷ್ಪಲತಾ ಬಂಗೇರ ಮುಂಬೈ ಮೊದಲಾದವರು ಉಪಸ್ಥಿತರಿದ್ದರು.
ಸೋಮೇಶ್ವರ ಪುರಸಭಾ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ಸ್ವಾಗತಿಸಿದರು.ಆಶಿಕ್ ಗೋಪಾಲಕೃಷ್ಣ ನಿರೂಪಿಸಿ,ವಸಂತ್ ಪಜೀರು ವಂದಿಸಿದರು.
ಗಾಣಿಗ ಸಮುದಾಯದ ಹಿರಿಯರ ದೀರ್ಘಕಾಲದ ಕನಸು ಇವತ್ತು ಸಾಕಾರಗೊಂಡಿದೆ.ನೂತನ ಗಾಣಿಗ ಭವನಕ್ಕೆ ಭದ್ರ ಬುನಾದಿ ಹಾಕಿದ ಅವರ ಸೇವೆಯು ಸ್ಮರಣೀಯ.ಬಿದ್ದರೆ ಮತ್ತೆ ಎದ್ದು ನಿಲ್ಲುವ ಛಲ ಇದ್ದಾಗಲೇ ಅಂದುಕೊಂಡದನ್ನ ಸಾಧಿಸಲು ಸಾಧ್ಯವೆಂಬ ಮಾತು ವೈಯಕ್ತಿಕ ಹಾಗೂ ಸಮುದಾಯಕ್ಕೂ ಅನ್ವಯವಾಗಿದೆ.ಆಶಾಕಿರಣ ಯೋಜನೆಯಡಿ ಸಮುದಾಯದ ಅಶಕ್ತ ಕುಟುಂಬಗಳಿಗೆ ಐದು ಮನೆಗಳನ್ನ ನಿರ್ಮಿಸಿಕೊಡುವ ಮಹದಾಸೆ ಇದ್ದು ಶೀಘ್ರವೇ ಅದಕ್ಕೆ ಕಾಯಕಲ್ಪ ನೀಡಲಾಗುವುದು.
*ಶ್ರೀನಿವಾಸ ಸಪಲ್ಯ,ಮುಂಬೈ ಉದ್ಯಮಿ.

