ಉಳ್ಳಾಲ: ಇನ್ನೇನು ಕೆಲವೇ ದಿನಗಳಲ್ಲಿ ಇಸ್ರೇಲ್ ಗೆ ತೆರಳಬೇಕಿದ್ದ ಯುವಕ ಮನೆಯೊಳಗೆ ನೇಣುಬಿಗಿದು ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ಹೊಯ್ಗೆ ಎಂಬಲ್ಲಿ ಇಂದು ನಸುಕಿನ ಜಾವ ಬೆಳಕಿಗೆ ಬಂದಿದೆ.

ದಿ| ಜೆರ್ರಿ ಡಿಸೋಜ ಮತ್ತು ಇಸಾಬೆಲ್ಲ ಎಂಬವರ ಪುತ್ರ ಸೂರ್ಯಪ್ರಕಾಶ್ ಡಿಸೋಜ (೪೨) ಮೃತರು. ಒಂದು ವರ್ಷದಿಂದ ಇಸ್ರೇಲ್ ದೇಶದಲ್ಲಿ ಉದ್ಯೋಗದಲ್ಲಿದ್ದ ಸೂರ್ಯಪ್ರಕಾಶ್, ಅದೇ ದೇಶದಲ್ಲಿ ಉದ್ಯೋಗದಲ್ಲಿರುವ ಸಹೋದರಿ ಜೊತೆ ಕೆಲ ದಿನಗಳ ಹಿಂದೆ ಮನೆಗೆ ಆಗಮಿಸಿದ್ದರು. ಸಹೋದರ ರೇಷ್ಮಾ ಕ್ಯಾಟರಿಂಗ್ ಮಾಲಕರ ವಿವಾಹ ಸಮಾರಂಭಕ್ಕೆಂದು ಬಂದಿದ್ದ ಸೂರ್ಯಪ್ರಕಾಶ್, ಮೇ.೧೭ ರಂದು ವಾಪಸ್ಸು ತೆರಳುವವರಿದ್ದರು. ಇಂದು ನಸುಕಿನ ಜಾವ ಸಹೋದರಿ ಹಾಗೂ ಭಾವ ನಸುಕಿನ ಜಾವ ಕೆಲಸಕ್ಕೆ ತೆರಳಿದ್ದು, ತದನಂತರ ಸೂರ್ಯಪ್ರಕಾಶ್ ತಾನು ಮಲಗಿರುವ ಕೋಣೆಯಲ್ಲಿ ನೇಣುಬಿಗಿದು ದೇಹಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಇಸಾಬೆಲ್ಲ ಅವರು ಕೋಣೆಯೊಳಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಭಾನುವಾರ ಸ್ಥಳೀಯ ಸಂಘದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸೂರ್ಯಪ್ರಕಾಶ್, ಸಹೋದರನ ವಿವಾಹದಲ್ಲಿಯೂ ಉತ್ಸಾಹಿತರಾಗಿ ಭಾಗವಹಿಸಿದ್ದರು. ಎದೆ ಭಾಗದಲ್ಲಿ ನೋವು ನಿರಂತರವಾಗಿ ಇರುವುದರ ಬಗ್ಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಇದರಿಂದಲೇ ನೊಂದು ಕೃತ್ಯ ಎಸಗಿರುವ ಶಂಕೆಯಿದೆ. ಈ ಕುರಿತು ಡೆತ್ ನೋಟಲ್ಲಿಯೂ ಬರೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಎಲ್ಲರ ಜೊತೆಗೆ ಆತ್ಮೀಯತೆಯತೆಯೊಂದಿಗೆ ಬೆರೆಯುತ್ತಿದ್ದ ಸೂರ್ಯಪ್ರಕಾಶ್ ಎಲ್ಲರಿಗೂ ಅಚ್ಚುಮೆಚ್ಚಿನವರು. ಮೃತರು ತಾಯಿ, ಮೂವರು ಸಹೋದರಿಯರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಅಂತಿಮ ಸಂಸ್ಕಾರವು ಮೇ.೧೨ ರಂದು ತೊಕ್ಕೊಟ್ಟು ಚರ್ಚಿನಲ್ಲಿ ನಡೆಯಲಿದೆ.

