ಉಳ್ಳಾಲ, ಮೇ.11: ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜ ಒಡೆಯುತ್ತಿರುವ ಇಂದಿನ ದಿನಗಳಲ್ಲಿ, ಮಂಗಳೂರಿನ ಉಳ್ಳಾಲದ ಬಂದಿಕೋಟೆಯ ನಿವಾಸಿಗಳು ಮಾನವೀಯತೆ, ಕೋಮು ಸೌಹಾರ್ದತೆ ಮೆರೆದು ಮಾದರಿಯಾಗಿದ್ದಾರೆ.

ಬಂದಿಕೋಟೆಯ ಸ್ಥಳೀಯ ದೇವಸ್ಥಾನವೊಂದರ ಉದ್ಘಾಟನಾ ಸಮಾರಂಭ ನಡೆಯುವುದರಲ್ಲಿತ್ತು. ಆದರೆ ಸಂಜೆ 4 ಗಂಟೆಗೆ ಸರಿಯಾಗಿ ಕಾರ್ಯಕ್ರಮಗಳು ಆರಂಭವಾಗಬೇಕಿತ್ತು. ಆದರೆ, ಅದೇ ಸಮಯದಲ್ಲಿ ಸ್ಥಳೀಯ ನಿವಾಸಿ ಹೈಡ್ರೋಸ್ ಎಂಬುವವರು ಹಠಾತ್ತನೆ ತೀವ್ರ ಅನಾರೋಗ್ಯಕ್ಕೆ ಒಳಗಾದರು. ತಕ್ಷಣವೇ ಕಾರ್ಯಪ್ರವೃತ್ತರಾದ ದೇವಸ್ಥಾನದ ಸಮಿತಿಯವರು ಮತ್ತು ನೆರೆದಿದ್ದ ಭಕ್ತರು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೈಡ್ರೋಸ್ ಕೊನೆಯುಸಿರೆಳೆದರು.ಹೈಡ್ರೋಸ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ, ದೇವಸ್ಥಾನದ ಸಮಿತಿ ಮತ್ತು ನೆರೆದಿದ್ದ ಭಕ್ತರು ಒಮ್ಮತದ ನಿರ್ಧಾರವೊಂದನ್ನು ತೆಗೆದುಕೊಂಡರು. ನೆರೆಯ ಮನೆಯಲ್ಲಿ ಸೂತಕವಿರುವಾಗ ಸಂಭ್ರಮ ಆಚರಿಸುವುದು ಸರಿಯಲ್ಲ ಎಂದು ಭಾವಿಸಿ, ದೇವಸ್ಥಾನದ ಉದ್ಘಾಟನಾ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಔತಣಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಕ್ಷಣವೇ ಸ್ಥಗಿತಗೊಳಿಸಿದರು.ರಾತ್ರಿ ಸುಮಾರು 9.30 ಗಂಟೆಗೆ ಹೈಡ್ರೋಸ್ ಅವರ ಅಂತ್ಯಕ್ರಿಯೆ ಪೂರ್ಣಗೊಳ್ಳುವವರೆಗೆ ದೇವಸ್ಥಾನದ ಎಲ್ಲಾ ಸಂಭ್ರಮದ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. “ನಾವೆಲ್ಲರೂ ಒಂದೇ” ಎಂಬ ಸಂದೇಶವನ್ನು ಸಾರಿದ ಬಂದಿಕೋಟೆ ನಿವಾಸಿಗಳ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಧಾರ್ಮಿಕ ಆಚರಣೆಗಿಂತ ಮಾನವೀಯತೆ ದೊಡ್ಡದು ಎಂದು ತೋರಿಸಿಕೊಟ್ಟ ಈ ಘಟನೆ ಕರಾವಳಿ ಭಾಗದ ಸೌಹಾರ್ದತೆಯ ಪರಂಪರೆಗೆ ಮತ್ತೊಂದು ನಿದರ್ಶನವಾಗಿದೆ.

