ಕೊಣಾಜೆ: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಸರ್ಕಾರದ ಅನೇಕ ಮಹತ್ವಪೂರ್ಣವಾದ ಯೋಜನೆಗಳ ಸಮರ್ಪಕ ಸದ್ಭಳಕೆಯನ್ನು ಮಾಡುವ ಮೂಲಕ ಎಷ್ಟೋ ಜನರು ಸ್ವಾವಲಂಬಿ ಬದುಕನ್ನು ಕಂಡುಕೊಂಡಿದ್ದಾರೆ ಎಂದು ಕರ್ನಾಟಕ ಸರ್ಕಾರದ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್ ಗಟ್ಟಿ ಹೇಳಿದರು.

ಅವರು ಗುರುವಾರ ದ.ಕ.ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಉಳ್ಳಾಲ, ಬಾಳೆಪುಣಿ ಗ್ರಾಮ ಪಂಚಾಯತ್ ಇದರ ವತಿಯಿಂದ ಸ್ವಚ್ಛೋತ್ಸವ, ನರೇಗಾ ಗ್ರಾಮೋತ್ಸವ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ -50 ವರ್ಷ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಚ್ಛ ಗ್ರಾಮವಾಗಿ ಬಾಳೆಪುಣಿ ಗ್ರಾಮ ಪಂಚಾಯತ್ ಮಾದರಿಯಾಗಿದೆ. ಅನೇಕ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಗಾಂಧಿ ಗ್ರಾಮ ಪುರಸ್ಕಾರ ಪಡೆದುಕೊಂಡಿದೆ. ಗ್ರಾಮ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯೂ ಸಾಧ್ಯ ಎಂದರು.
ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್ ಅವರು ಮಾತನಾಡಿ, ಕಾರ್ಯಯೋಜನೆಗಳನ್ನು ಎಸಿ ರೂಮುನೊಳಗೆ ಕೂತು ನಿರ್ಧರಿಸಿದರೆ ಯಶಸ್ಸು ಆಗಲು ಸಾಧ್ಯವಿಲ್ಲ. ಅಧಿಕಾರಿಗಳೊಂದಿಗೆ ಜನರು ಸಂಪೂರ್ಣವಾಗಿ ಯೋಜನೆಯಲ್ಲಿ ಭಾಗವಹಿಸಿ ತೊಡಗಿಸಿಕೊಂಡರೆ ಮಾತ್ರ ಇದು ಯಶಸ್ವಿಯಾಗಲು ಸಾಧ್ಯ. ಶಾಲಾ ವಿದ್ಯಾರ್ಥಿಗಳನ್ನು ಪ್ರವಾಸ ಸ್ಥಳಗಳಿಗೆ ಕರೆದುಕೊಂಡು ಹೋಗುವಂತೆಯೇ ಅವರಿಗೆ ಸ್ವಚ್ಚ ಘಟಕಗಳನ್ನೂ ತೋರಿಸಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.
ನರೇಗಾ ಯೋಜನಾಧಿಕಾರಿ ಜಯರಾಮ್ ಸ್ವಚ್ಛ ಮನೆ ಘೋಷಣಾ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ದೂರದೃಷ್ಟಿಕೋನ ಇಟ್ಟುಕೊಂಡು ನಾವು ಕಾರ್ಯಪ್ರವೃತ್ತರಾದರೆ ಯಶಸ್ಸು ಸಾಧ್ಯ. ಸರ್ಕಾರದ ಯೋಜನೆಗಳನ್ನು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಲೆಕ್ಕಸಹಾಯಕರಾಗಿ ಕಾರ್ಯನಿರ್ವಹಿಸಿ ಇದೀಗ ವರ್ಗಾವಣೆಗೊಂಡ ರುಕ್ಮನ್ ದಾಸ್, ಆರೋಗ್ಯ ಸಹಾಯಕಿಯಾಗಿ ವರ್ಗಾವಣೆಗೊಂಡ ನಳಿನಾಕ್ಷಿ ಲಿಂಗಪ್ಪ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಪುಷ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಶೈಕ್ಷಣಿಕ ಹಾಗೂ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಕಪಾಟು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದರ ಗೀತಾ ಭಂಡಾರಿ,ಉಪಾಧ್ಯಕ್ಷರಾದ ಸಿ.ಎಂ. ಶರೀಫ್ ಚೆಂಬೆತೋಟ, ಉದ್ಯಮಿ ನಾಸೀರ್ ಎನ್ ಎಸ್ ನಡುಪದವು, ಮಾಜಿ ತಾಲೂಕು ಪಂಚಾಯತ್ ಸದಸ್ಯ ಹೈದರ್ ಕೈರಂಗಳ, ಮಾಜಿ ಅಧ್ಯಕ್ಷ ಬಶೀರ್ , ಹಿರಿಯ ಸದಸ್ಯ ಬಾಸ್ಕರ ಕೋಟ್ಯಾನ್, ದ.ಕ.ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಸದಸ್ಯರಾದ ಅಬ್ದುಲ್ ರಹಿಮಾನ್, ಅಬ್ಬಾಸ್, ಸುಜಾತ, ದೊಂಬಯ್ಯ , ಸುನೀಲ್, ಸಾವಿತ್ರಿ, ಅಂಜಲಿ, ಸುಮನಾ ಕ್ರಾಸ್ತಾ, ಅಬ್ದುಲ್ ರಹಿಮಾನ್, ಗುರುರಾಜ್ ಭಟ್, ಶಶಿಧರ್, ಮಾಜಿ ಅಧ್ಯಕ್ಷರಾದ ಸುಕನ್ಯಾ ರೈ, ಜೊಹರಾ, ಯಾಕೂಬ್ ಮೊದಲಾದವರು ಉಪಸ್ಥಿತರಿದ್ದರು ಕಾರ್ಯದರ್ಶಿ ಆಯಿಷಾ ಬಾನು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಅವರು ಸ್ಬಾಗತಿಸಿದರು. ಉಪಾಧ್ಯಕ್ಷರಾದ ಸಿ.ಎಂ.ಶೆರೀಫ್ ವಂದಿಸಿದರು. ಸದಾನಂದ ಹಾಗೂ ಮಂಜಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು.
ಸಾವಯವ ಬಾಟಲಿ ಹಾಗೂ ಸಾವಯವ ಕೈಚೀಲ ಬಿಡುಗಡೆ:
ಬಾಳೆಪುಣಿಯಲ್ಲಿ ನಡೆದ ಗ್ರಾಮೋತ್ಸವ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಮೆಲ್ವಿನ್ ಅರುಣ್ , ಕವಿತಾ ದಂಪತಿಗಳು ಕಬ್ದು, ಜೋಳ ಮೊದಲಾದ ಸಾವಯವ ಪದಾರ್ಥಗಳನ್ನು ಬಳಸಿ ತಯಾರಿಸಿದ ಸಾವಯವ ನೀರಿನ ಬಾಟ್ಲಿ ಹಾಗೂ ಸಾವಯವ ಪ್ಲಾಸ್ಟಿಕ್ ಚೀಲ, ಸಾವಯವ ನರ್ಸರಿ ಚೀಲವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.



