ಕಣಚೂರು: ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ಶಾಸ್ತ್ರ ಹಾಗೂ ಚಿಕಿತ್ಸಾ ವಿಭಾಗ, ಸೂಕ್ಷ್ಮ ಜೀವ ವಿಜ್ಞಾನ (ಮೈಕ್ರೋಬಿಯಾಲಜಿ) ವಿಭಾಗ ಮತ್ತು ಔಷಧ ಶಾಸ್ತ್ರ (ಫಾರ್ಮಕಾಲಜಿ) ವಿಭಾಗಗಳ ಸಹಯೋಗದಲ್ಲಿ ಒಂದು ದಿನದ ಸಮಗ್ರ ವೈದ್ಯಕೀಯ ಕಾರ್ಯಗಾರವು “ಪುಟ್ಟ ರೋಗಿಗಳು – ದೊಡ್ಡ ನಿರ್ಧಾರಗಳು” ಎಂಬ ಶೀರ್ಷಿಕೆಯಡಿ ಫೆಬ್ರವರಿ 7ರಂದು ಕಣಚೂರು ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಕ್ಕಳ ಶಾಸ್ತ್ರ ತಜ್ಞರು ಹಾಗೂ ಕಾರ್ಯಗಾರದ ಸಂಘಟನಾ ಕಾರ್ಯದರ್ಶಿಯಾದ ಡಾ. ಪೃಥ್ವಿ ತಿಳಿಸಿದ್ದಾರೆ.

ಸೋಮವಾರ ತೊಕ್ಕೊಟ್ಟು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರಗಳನ್ನು ನೀಡಿದರು. ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಯು.ಕೆ. ಮೋನು ವೈದ್ಯಕೀಯ ಕಾರ್ಯಗಾರವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಿಮ್ಸ್ ನಿರ್ದೇಶಕರಾದ ಅಬ್ದುಲ್ ರಹೀಮಾನ್, ಡೀನ್ ಪ್ರೊ. ಡಾ. ಶಹನವಾಜ್ ಮಣಿಪಾಡಿ, ಮುಖ್ಯ ಸಲಹೆಗಾರ ಪ್ರೊ. ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ , ಪ್ರೊಫೆಸರ್ ಎಮೆರಿಟಸ್ (ಮಕ್ಕಳ ವೈದ್ಯಕೀಯ) ಪ್ರೊ. ಡಾ. ಶಂಶಾದ್ ಎ. ಖಾನ್, ಮಕ್ಕಳ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ಒನಿಯೆಲ್ ಫೆರ್ನಾಂಡಿಸ್, ಫಾರ್ಮಕಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ಮನೋಹರ್ ಜಿ. ರೇವಂಕರ್ ಹಾಗೂ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ಯಶವಂತ್ ಕುಮಾರ್ ರೈ ಉಪಸ್ಥಿತರಿರುವರು.
ರಾಷ್ಟ್ರಮಟ್ಟದ ವಿವಿಧ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ನುರಿತ ಮಕ್ಕಳ ಶಾಸ್ತ್ರ ತಜ್ಞರು, ಔಷಧ ಶಾಸ್ತ್ರ ತಜ್ಞರು ಹಾಗೂ ಸೂಕ್ಷ್ಮ ಜೀವ ವಿಜ್ಞಾನ ಶಾಸ್ತ್ರ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಗಾರದಲ್ಲಿ ಭಾಗವಹಿಸಲಿದ್ದಾರೆ. ಮಕ್ಕಳ ಚಿಕಿತ್ಸೆಯಲ್ಲಿ ಅನಗತ್ಯವಾಗಿ ಹಾಗೂ ಅತಿಯಾದ ಪ್ರಮಾಣದಲ್ಲಿ ರೋಗ ನಿರೋಧಕ ಔಷಧಗಳ ಬಳಕೆಯಿಂದ ಬ್ಯಾಕ್ಟೀರಿಯಾಗಳಲ್ಲಿ ಔಷಧ ಪ್ರತಿರೋಧಕ ಶಕ್ತಿ ಹೆಚ್ಚುತ್ತಿರುವ ಹಿನ್ನೆಲೆ, ಈ ಸಮಸ್ಯೆಯನ್ನು ತಡೆಯುವ ಉದ್ದೇಶದಿಂದ ತರ್ಕಬದ್ಧ ಔಷಧೋಪಚಾರ ಹಾಗೂ ವೈಜ್ಞಾನಿಕ ಚಿಕಿತ್ಸಾ ವಿಧಾನಗಳ ಬಗ್ಗೆ ವೈದ್ಯಕೀಯ ವೃತ್ತಿಪರರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಎಮೆರಿಟಸ್ (ಮಕ್ಕಳ ವೈದ್ಯಕೀಯ) ಪ್ರೊ. ಡಾ. ಶಂಶಾದ್ ಎ. ಖಾನ್, ಮಕ್ಕಳ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ಒನಿಯೆಲ್ ಫೆರ್ನಾಂಡಿಸ್ ,ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ಯಶವಂತ್ ಕುಮಾರ್ ರೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



