ಮಂಗಳೂರು: ದೇವರು ಕೊಟ್ಟ ಪಾಲು ಅಲ್ಪವಾಗಿದ್ದರೂ, ಅದರಲ್ಲೊಂದು ಭಾಗವನ್ನು ಸಮಾಜಕ್ಕೆ ನೀಡುವ ಕಾರ್ಯ ದೇವರಿಗೆ ಮೆಚ್ಚುಗೆಯಾದದ್ದು. ಸಮಾಜಕ್ಕೆ ಪಾಲು ಕೊಡುವ ಸಂಸ್ಕೃತಿ ಪಡೆದುಕೊಂಡವರಲ್ಲಿಯೂ ಬೆಳೆಯಬೇಕು ಎಂದು ನಾಡೋಜ ಡಾ| ಜಿ.ಶಂಕರ್ ಅಭಿಪ್ರಾಯಪಟ್ಟರು.

ಮೊಗವೀರ್ಸ್ ಬೆಹ್ರೈನ್ ವತಿಯಿಂದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆಯನ್ನು ನೀಡಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನಗೈದು ಮಾತನಾಡಿದರು.

ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಸೇರಿದಂತೆ ಮಾರುತಿ ಜನಸೇವಾ ಸಂಘ, ಉಚ್ಚಿಲ, ಬೆಣ್ಣೆಕುದ್ರು, ಉರ್ವ ಮಾರಿಯಮ್ಮ ಕ್ಷೇತ್ರದ ಆಶ್ರಯದಲ್ಲಿ ನಿರಂತರವಾಗಿ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿರುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಶಿಕ್ಷಣ ಪಡೆಯುವ ಜವಾಬ್ದಾರಿ ಮಾತ್ರ ಮಕ್ಕಳಲ್ಲಿ ಬೇಕಿದೆ. ಹಿಂದಿನಂತೆ ಶಿಕ್ಷಣ ಪಡೆಯುವ ಕಷ್ಟ ಇಂದಿನ ದಿನಗಳಲ್ಲಿ ಇಲ್ಲ. ಅದನ್ನು ಅರಿತುಕೊಂಡು , ಸಮಾಜದಲ್ಲಿ ವಿವಿದೆಡೆ ಸಿಗುವಂತಹ ವಿದ್ಯಾರ್ಥಿವೇತನಗಳನ್ನು ವಿನಿಯೋಗಿಸಿಕೊಂಡು ಶಿಕ್ಷಣದಿಂದ ವಂಚಿತರಾಗದೇ ಮುಂದುವರಿಯಿರಿ. ಇದೇ ಸುದುದ್ದೇಶದೊಂದಿಗೆ ಬಹರೈನ್ ಮೊಗವೀರ್ಸ್ ಸಂಘ ಕೂಡಾ ತಾವು ಬಂದ ದಾರಿಯನ್ನು ಮರೆಯದೇ ಮತ್ತೆ ಸಮಾಜದತ್ತ ಒಲವು ತೋರುವ ಗುಣ ಶ್ಲಾಘನೀಯ. ಯಾವುದೇ ಕಾರ್ಯಕ್ರಮಗಳಾದರೂ ಎರಡು ಜಿಲ್ಲೆಯವರನ್ನು ಒಗ್ಗೂಡಿಸಿದಲ್ಲಿ , ಕುಂದಾಪುರ ಭಾಗಗಳಲ್ಲಿ ಅನೇಕ ಬಡ ಮಕ್ಕಳಿರುವುದರಿಂದ ಅವರ ಶೈಕ್ಷಣಿಕ ಜೀವನಕ್ಕೆ ಸಹಕಾರಿಯಾಗುವ ಆಶಯ ನಮ್ಮದಾಗಿದೆ ಎಂದರು.

ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಲಕ್ಷ್ಮಣ್ ಅಮೀನ್ ಕೋಡಿಕಲ್ ಮಾತನಾಡಿ, ಹೆತ್ತವರಿಗೆ ವಯಸ್ಸಾದಾಗ ಅವರಿಗೆ ಸಹಕರಿಸಬೇಕು. ಹೆತ್ತವರಿಗೆ ನೋವು ಮಾಡಬಾರದು. ಅವರು ಸತ್ತ ನಂತರ ಲಡ್ಡು-ಜಿಲೇಬಿ ಕೊಡುವುದಲ್ಲ, ಅವರು ಬದುಕಿದ್ದಾಗಲೇ ಕೊಡುವ ಲಡ್ಡು-ಜಿಲೇಬಿಯೇ ನಿಜವಾದ ಸೇವೆ.
ಸಮಾಜದಿಂದ ಪಡೆಯುವ ಸಹಾಯಧನವನ್ನು ಕೇವಲ ಸ್ವೀಕರಿಸುವವರಾಗದೆ, ಮುಂದಿನ ದಿನಗಳಲ್ಲಿ ಅದನ್ನು ಸಮಾಜಕ್ಕೆ ಮರಳಿ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಕೆಲವರು ಕಾಲೇಜಿಗೆ ಜೀವನವನ್ನು ಎಂಜಾಯ್ ಮಾಡಲು ಮಾತ್ರ ಬರುತ್ತಾರೆ. ಆದರೆ ಆ ದಾರಿಯಲ್ಲೇ ಸಾಗದೆ, ಬಹರೈನ್‌ನಲ್ಲಿ ಸಮುದಾಯದವರು ಬೆಳೆದ ರೀತಿಯಲ್ಲಿ ಕಠಿಣ ಪರಿಶ್ರಮದಿಂದ ಸಾಧಕರಾಗಿ ಬೆಳೆಯಿರಿ ಎಂದರು.
ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷರಾದ ವರದರಾಜ ಬಂಗೇರ ಮಾತನಾಡಿ, ಒಳ್ಳೇ ಸಂಸ್ಕಾರವನ್ನು ಮನೆಯಿಂದಲೇ ಕಲಿಯುವವರಾಗಿರಿ. ಹಣ ಪಡೆಯದೇ ಬರುವ ಹೆತ್ತವರ ಜೊತೆಗೆ ನಿಸರ್ಗವೇ ಕಲಿಸುವುದು ದೊಡ್ಡ ಸಂಪತ್ತಾಗಿದೆ. ಸದ್ಯ ವಿದ್ಯಾವಂತರೇ ಭ್ರಷ್ಟಾಚಾರ ನಡೆಸುವವರಾಗಿದ್ದಾರೆ. ಸಮಾಜದಲ್ಲಿರುವ ಅಂತಹ ಕಪ್ಪು ಪಟ್ಟಿಯನ್ನು ಮುಂದಿನ ಪೀಳಿಗೆ ದೂರವಾಗಿಸಿ, ನೈಸರ್ಗಿಕ ಜ್ಞಾನದೊಂದಿಗೆ ಬಾಳುವೆ ನಡೆಸುವವರಾಗಿರಿ. ಬಹರೈನ್ ನಲ್ಲಿ ಸಂಘಟನೆ ಕಟ್ಟಲು ಬಹಳಷ್ಟು ಕಷ್ಟವಿರಬಹುದು. ಅವರ ಶ್ರಮ ಹಾಗೂ ಸಂಘಟನೆ ನಡೆದು ಬಂದ ದಾರಿಯನ್ನು ಗೌರವಿಸಿ ಸಮಾಜಕ್ಕೆ ಮಾದರಿಯಾಗಿರಿ ಎಂದರು.
ಬಹರೈನ್‌ನಲ್ಲಿ ದುಡಿಯುತ್ತಿರುವವರು ಶಿಕ್ಷಣ ಪಡೆದು, ಶ್ರಮವಹಿಸಿ ದುಡಿದು, ಇಂದು ತಮ್ಮಂತೆ ಇತರರೂ ಬೆಳೆಯಲು ಸಹಕಾರ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಕೇವಲ ಪುಸ್ತಕದ ಬದನೆಕಾಯಿ ಆಗದೆ, ಸಮಾಜದಲ್ಲಿ ಕಲಿತು ಬೆರೆತು ಯಶಸ್ವಿ ಜೀವನ ನಡೆಸುವವರಾಗಬೇಕು. ಜಿ. ಶಂಕರ್ ಅವರು ಮಾಡುತ್ತಿರುವ ಸಮಾಜಸೇವೆಯಿಂದ ಸಮುದಾಯದ ಎಲ್ಲರೂ ಪ್ರೇರಣೆಯನ್ನು ಪಡೆದು ಇಂದು ವಿವಿಧ ರೀತಿಯ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉಪ್ಪಳದಿಂದ ಶಿರೂರು ತನಕ ಮೊಗವೀರ ಸಮುದಾಯವನ್ನು ಒಂದಾಗಿ ಸೇರಿಸಿ ಸಂಘಟಿಸಿರುವುದು ಜಿ. ಶಂಕರ್ ಅವರ ಮಹತ್ವದ ಸಾಧನೆ. ಯಾವುದೇ ಸಮಾಜಕ್ಕಿಂತ ಹಿಂದೆ ಉಳಿಯಬಾರದು, ಎಲ್ಲ ಸಮಾಜಗಳಿಗಿಂತ ಮುಂದೆ ಇರಬೇಕು ಎಂಬ ಉದ್ದೇಶದೊಂದಿಗೆ ಮೊಗವೀರ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಮೊಗವೀರ್ಸ್ ಬಹ್ರೇನ್ ಅಧ್ಯಕ್ಷೆ ಶಿಲ್ಪ ಶಮಿತ್ ಕುಂದರ್ ಮಾತನಾಡಿ, ಮೊಗವೀರ್ಸ್ ಬಹರೈನ್ ನಡೆಸುವ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು. ಶಿಸ್ತು, ಬದ್ಧತೆ ಮತ್ತು ದೃಢಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಿದ ಫಲವಾಗಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಯುವ ಸಾಧಕರಲ್ಲಿ ಉತ್ಸಾಹ, ಕಲಿಯುವ ಆಸಕ್ತಿ ಮತ್ತು ಸಿದ್ಧತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಪ್ರಶಸ್ತಿ ಅಂತ್ಯವಲ್ಲ, ಇದು ಇನ್ನೂ ಹೆಚ್ಚಿನ ಸಾಧನೆಗಳಿಗೆ ಆರಂಭವಾಗಲಿ. ಎಲ್ಲರೂ ಬೆಳಗಿರಿ, ಬೆಳೆಯಿರಿ ಮತ್ತು ಸಾಧನೆ ಮಾಡಿ ಎಂದರು.
ಮಂಗಳೂರು ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾದ ಚೇತನ್ ಬೆಂಗ್ರೆ, ಬಹರೈನ್‌ನಿಂದ ದುಡಿದು ಮೊಗವೀರ ಸಮಾಜಕ್ಕೆ ನೀಡಬೇಕೆಂಬ ಉದ್ದೇಶದೊಂದಿಗೆ ರೂಪುಗೊಂಡಿರುವ ಈ ಕಾರ್ಯಕ್ರಮ ಅತ್ಯಂತ ಅದ್ಭುತವಾದದ್ದು. ಯಾವುದೇ ಒಂದು ಸಂಸ್ಕೃತಿಯನ್ನು ಮತ್ತೊಬ್ಬರಲ್ಲಿ ಬೆಳೆಸುವಂತಹ ಕಾರ್ಯಗಳು ಸಮಾಜದಲ್ಲಿ ಶಾಶ್ವತ ಬದಲಾವಣೆ ತರುತ್ತವೆ. ಒಬ್ಬ ವಿದ್ಯಾರ್ಥಿಗೆ ನೀಡುವ ಸಹಾಯ ಮುಂದಿನ ದಿನಗಳಲ್ಲಿ ನೂರು ಜನರಿಗೆ ಸಹಾಯ ಮಾಡುವ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ ಎಂಬ ದೃಢವಾದ ವಿಶ್ವಾಸ ನಮಗಿದೆ ಎಂದರು.
ಮಂಗಳೂರು ದಕ್ಷಿಣದ ಬಿಜೆಪಿ ಉಪಾಧ್ಯಕ್ಷರಾದ ಗೌತಮ್ ಸಾಲ್ಯಾನ್ ಕೋಡಿಕಲ್ ಮಾತನಾಡಿ , ಮೊಗವೀರ ಸಮಾಜದಲ್ಲಿ ನಾಯಕರ ಸಂಖ್ಯೆ ಇನ್ನೂ ಕಡಿಮೆಯಿದೆ. ಆದ್ದರಿಂದ ಶಿಕ್ಷಣ, ರಾಜಕೀಯ, ಆಡಳಿತ, ಉದ್ಯಮ, ಕ್ರೀಡೆ, ಸಾಂಸ್ಕೃತಿಕ ಹಾಗೂ ಸಮಾಜಸೇವಾ ಕ್ಷೇತ್ರಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿಯೂ ಸಮುದಾಯದ ಸದಸ್ಯರು ಸಕ್ರಿಯವಾಗಿ ಭಾಗವಹಿಸುವುದು ಅತ್ಯಂತ ಅಗತ್ಯವಾಗಿದೆ. ಯುವಕರು ಮುಂದೆ ಬಂದು ನಾಯಕತ್ವ ವಹಿಸಿಕೊಳ್ಳಬೇಕು. ಕೇವಲ ಉದ್ಯೋಗಕ್ಕೆ ಸೀಮಿತವಾಗದೇ, ಸಮಾಜವನ್ನು ಮುನ್ನಡೆಸುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ಸಂಘಟನೆಗಳ ಮೂಲಕ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಮೊಗವೀರ ಸಮಾಜಕ್ಕೆ ಶಕ್ತಿಯುತ ಭವಿಷ್ಯ ರೂಪಿಸಬಹುದು. ಪ್ರತಿಯೊಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಜೊತೆಗೆ, ಸಮುದಾಯದ ಬೆಳವಣಿಗೆಗೂ ಕೈಜೋಡಿಸಿದಾಗ ಮಾತ್ರ ಸಮಾಜವು ಇತರ ಸಮುದಾಯಗಳಿಗಿಂತ ಮುಂದೆ ಸಾಗಲು ಸಾಧ್ಯ ಎಂದರು.
ಈ ಸಂದರ್ಭ ಏಳುಪಟ್ನ ಮೊಗವೀರ ಸಭಾ ಅಧ್ಯಕ್ಷರು ಲೋಕೇಶ್ ಸುವರ್ಣ , ಮೊಗವೀರ್ಸ್ ಬಹರೈನ್ ಉಪಾಧ್ಯಕ್ಷರು ವಿನೋದ್ ಶ್ರೀಯಾನ್ ಉಪಸ್ಥಿತರಿದ್ದರು.
ಮೊಗವೀರ್ಸ್ ಬಹ್ರೇನ್ ಅಧ್ಯಕ್ಷೆ ಶಿಲ್ಪ ಶಮಿತ್ ಕುಂದರ್ ಸ್ವಾಗತಿಸಿದರು. ಮೊಗವೀರ್ಸ್ ಬಹರೈನ್ ಕಾರ್ಯದರ್ಶಿ ಸುಮಂತ್ ಸುವರ್ಣ ಪ್ರಾಸ್ತಾವನೆಗೈದರು. ಪ್ರವೀಣ್ ಎಸ್. ಕುಂಪಲ ನಿರೂಪಿಸಿ ವಂದಿಸಿದರು.
೨೦ ವರ್ಷಗಳ ಹಿಂದೆ ಯುವಕರೇ ಸೇರಿ ಸ್ಥಾಪಿಸಿದ ಈ ಸಂಸ್ಥೆ, ಪ್ರಾರಂಭದ ಏಕೈಕ ಮೊಗವೀರ ಸಂಘವಾಗಿ ಹೊರಹೊಮ್ಮಿದೆ. ಕಳೆದ ವರ್ಷ ಸಂಸ್ಥೆಯ ಅದ್ಧೂರಿ ವಾರ್ಷಿಕೋತ್ಸವವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಸಂಘವು ಕಳೆದ ಮೂರು ವರ್ಷಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಭಜನೆಯಿಂದ ಆರಂಭಿಸಿ ಕ್ರಿಕೆಟ್, ವಾಲಿಬಾಲ್, ದಾಂಡಿಯಾ ಹಾಗೂ ದೀಪಾವಳಿ ಹಬ್ಬವನ್ನು ಸಂಘಟಿತವಾಗಿ ಆಚರಿಸುತ್ತಾ ಬಂದಿರುವುದು ಸಂಘದ ವೈಶಿಷ್ಟ್ಯವಾಗಿದೆ. ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣದಲ್ಲಿ ಪ್ರೋತ್ಸಾಹ ನೀಡುವ ಕಾರ್ಯವನ್ನು ಸಂಘ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಈವರೆಗೆ ೪೬೦ ವಿದ್ಯಾರ್ಥಿವೇತನ ಅರ್ಜಿಗಳನ್ನು ಪರಿಶೀಲಿಸಿ ೧೨೦ ಮಕ್ಕಳಿಗೆ ಸಹಾಯ ನೀಡಲಾಗಿದೆ. ಈ ವರ್ಷ ೧೨೦ ಅರ್ಜಿಗಳು ಬಂದಿದ್ದು, ಅವುಗಳಲ್ಲಿ ೧೧೨ ಮಕ್ಕಳನ್ನು ಯೋಜನೆಯೊಳಗೆ ಸೇರಿಸಲಾಗಿದೆ. ಬಹರೈನ್‌ನಲ್ಲಿಯೂ ಮೊಗವೀರ ಸಮುದಾಯದ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಮುದಾಯ ಇನ್ನಷ್ಟು ಮುಂದುವರಿಯಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ಪ್ರೊಫೆಷನಲ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವಂತೆ ಸಂಘ ಬೆಂಬಲ ನೀಡಲಿದೆ
ಸುಮಂತ್ ಸುವರ್ಣ
ಕಾರ್ಯದರ್ಶಿ
ಮೊಗವೀರ್ಸ್ ಬಹರೈನ್

