ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್ ಎಂಬ 25 ವರ್ಷದ ಯುವತಿ ಹಲವು ವರ್ಷಗಳಿಂದ ಅಪರೂಪದ ಹಾಗೂ ಗುಣಪಡಿಸಲಾಗದ ನರವೈಜ್ಞಾನಿಕ ರೋಗದಿಂದ ಬಳಲುತ್ತಿದ್ದಾರೆ. ಇದೀಗ ಈ ರೋಗದಿಂದ ಬೇಸತ್ತು ದಯಾಮರಣಕ್ಕೆ ಮುಂದಾಗಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಅವರಿಗೆ 18ನೇ ವಯಸ್ಸಿನಲ್ಲಿ ಆಟೋಇಮ್ಯೂನ್ ಆಟೋನೊಮಿಕ್ ಗ್ಯಾಂಗ್ಲಿಯೊಪತಿ (AAG) ಇರುವುದು ಪತ್ತೆಯಾಯಿತು. ಈ ಕಾಯಿಲೆ ಇರುವ ಜನರಲ್ಲಿ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದು ನರಕೋಶಗಳ ಮೇಲೆ ದಾಳಿಯನ್ನು ಮಾಡಿ. ಹೃದಯ ಬಡಿತ, ರಕ್ತದೊತ್ತಡ ಮತ್ತು ಜೀರ್ಣಕ್ರಿಯೆ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಕೊನೆಗೆ ಇದು ನರವೈಜ್ಞಾನಿಕ ರೋಗಕ್ಕೆ ಕಾರಣವಾಗುತ್ತದೆ. ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್ ತಮ್ಮ ಬಾಲ್ಯದ ಬಹುಪಾಲು ಆಸ್ಪತ್ರೆಗಳಲ್ಲಿ ಕಳೆದಿದ್ದಾರೆ. ವೈದ್ಯರು ಅವರಿಗೆ ಇರುವ ರೋಗದ ಬಗ್ಗೆ ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಈ ಅಪರೂಪದ ರೋಗದಿಂದ ಸ್ಥಿತಿ ಹದಗೆಟ್ಟಿತು, ಅಡಿಲೇಡ್ ಅವರು ನಿರಂತರ ನೋವು, ವಾಕರಿಕೆ, ದಿನನಿತ್ಯ ವಾಂತಿ ಮಾಡುತ್ತಿದ್ದರು. ಕಳೆದ ಒಂದು ದಶಕದಿಂದ, ಅವರು ಸಂಪೂರ್ಣವಾಗಿ ಪ್ಯಾರೆನ್ಟೆರಲ್ ಪೌಷ್ಟಿಕಾಂಶವನ್ನು (TPN) ಅವಲಂಬಿಸಿದ್ದು, ಅಭಿದಮನಿ ಮೂಲಕ ಎಲ್ಲಾ ಪೋಷಣೆಯನ್ನು ಪಡೆಯುತ್ತಿದ್ದಾರೆ. ಇದರಿಂದ ಬಹು ಅಂಗಾಂಗ ವೈಫಲ್ಯ, ಬೆನ್ನುಮೂಳೆ ಮುರಿತ, ಸೀಳು ಎದೆಮೂಳೆ ಮತ್ತು ಇತರ ತೀವ್ರ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದರ ಜತೆಗೆ ಅವರಿಗೆ ಆಹಾರವನ್ನು IV ಮೂಲಕ ನೀಡಲಾಗುತ್ತಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ IV ಗಳ ಮೂಲಕ ಆಹಾರವನ್ನು ನೀಡಲು ಸಾಧ್ಯವಾಗದಿದ್ದಾಗ, ಸಾವು ಖಂಡಿತ ಎಂಬ ಆಂತಕದಲ್ಲಿದ್ದಾರೆ. ಹೀಗಾಗಿ ಪ್ರತಿದಿನ ಈ ನೋವು ತಿಂದು ಸಾಕಾಗಿದೆ ಎಂದು ದಯಾಮರಣಕ್ಕೆ ಮುಂದಾಗಿದ್ದಾರೆ.
ನೋವು ತಿಂದು ಸಾಕಾಯಿತು:
ಈ ಬಗ್ಗೆ ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್ ಇನ್ಸ್ಟಾಗ್ರಾಮ್ನಲ್ಲಿ ಕೆಲವೊಂದು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. “ನನಗೆ ಇಷ್ಟು ಚಿಕ್ಕ ವಯಸ್ಸಿಗೆ ಇಂಥಹ ಕಾಯಿಲೆ ಬರುತ್ತದೆ ಎಂದು ಕಲ್ಪನೆ ಕೂಡ ಇರಲಿಲ್ಲ. ಸಾಕಾಗಿದೆ ಈ ನೋವು ತಿಂದು, ನನ್ನ ಕರುಳು ಮುಚ್ಚಿ ಹೋಗಿದೆ. ನರಗಳು ಕೆಲಸ ಮಾಡುತ್ತಿಲ್ಲ. ನನ್ನ ಮಲವು ತುಂಬಾ ಹಿಂದಕ್ಕೆ ಬರುತ್ತದೆ. ಇದರ ಜತೆಗೆ ದೊಡ್ಡ ಹಿಂಸೆ ಎಂದರೆ ನನ್ನ ದೇಹದಲ್ಲಿ ಫೀಡಿಂಗ್ ಟ್ಯೂಬ್‌ಗಳನ್ನು ಇರಿಸಲಾಗಿತ್ತು. ಪ್ರತಿದಿನ ವಾಂತಿ ಮಾಡಿ.. ಮಾಡಿ ಸಾಕಾಗಿದೆ. ನನ್ನ ವಯಸ್ಸಿನ ಸ್ನೇಹಿತರು ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಅವರಲ್ಲಿ ಕೆಲವರಿಗೆ ಮಕ್ಕಳಾಗಿದೆ. ಇನ್ನು ಕೆಲವರು ಮದುವೆಯಾಗುತ್ತಿದ್ದಾರೆ. ಆದರೆ ನಾನು ಈ ರೋಗದ ಜತೆಗೆ ಜೀವನ ನಡೆಸುತ್ತಿದ್ದೇನೆ. ನಾನು ಪ್ರತಿದಿನ ಬದುಕುಳಿಯುತ್ತಿದ್ದೇನೆ. ಈ ಒದ್ದಾಟ ಸಾಕಾಗಿದೆ” ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ದಯಾಮರಣ ಹೇಗೆ?
ಮನಶ್ಶಾಸ್ತ್ರಜ್ಞರೊಂದಿಗೆ ಸಮಾಲೋಚಿಸಿ ಅಗತ್ಯ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಿದ ಮೂರು ವಾರಗಳ ನಂತರ, ಅನ್ನಾಲೀಸ್‌ಗೆ ಸ್ವಯಂಪ್ರೇರಿತ ದಯಾಮರಣಕ್ಕೆ ಅನುಮೋದನೆ ನೀಡಲಾಗಿದೆ. ಯಾವ ಕಾರಣಕ್ಕೆ ಅವರು ದಯಾಮರಣದ ಬೇಡಿಕೆ ಇಟ್ಟಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸಿದ ನಂತರ ಇದಕ್ಕೆ ಒಪ್ಪಿಗೆ ನೀಡಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ದಯಾಮರಣವನ್ನು ಮೆಡಿಕಲ್ ಏಡ್ ಇನ್ ಡೈಯಿಂಗ್ (MAID) ಎಂದೂ ಕರೆಯುತ್ತಾರೆ, ಇದು ಆಸ್ಟ್ರೇಲಿಯಾದ ಎಲ್ಲಾ ರಾಜ್ಯಗಳಲ್ಲಿ ಮಾರಕ ಕಾಯಿಲೆಯಿಂದ ಬಳಲುತ್ತಿರುವ, ಮಾನಸಿಕವಾಗಿ ಕುಗ್ಗಿರುವ ವಯಸ್ಕರಿಗೆ ಕಾನೂನುಬದ್ಧವಾಗಿದೆ.
