ಬಂಟ್ವಾಳ: ಅರಣ್ಯ ಪ್ರದೇಶದ ನಡುವಿನ ಖಾಸಗಿ ಜಾಗದಲ್ಲಿ ಕ್ವಾರಿ ಕಾರ್ಯಾಚರಣೆ, ದಿನವೊಂದಕ್ಕೆ ಮೂರು ಬಾರಿ ಜಿಲೆಟಿನ್ ಮುಖೇನ ಕಲ್ಲುಗಳ ಸ್ಫೋಟ, ಭಾರೀ ಸದ್ದಿನ ಜೊತೆಗೆ ಮನೆಗಳ ಸುತ್ತಮುತ್ತಲೂ ಕಲ್ಲುಗಳ ಅವಶೇಷಗಳು ಬೀಳುತ್ತಿವೆ, ರಸ್ತೆಯಲ್ಲಿ ನಾಲ್ಕರಷ್ಟು ಶಾಲಾ ವಾಹನಗಳು ಸಂಚರಿಸುತ್ತಿದ್ದರೂ ರಸ್ತೆಯಿಂದ ಮೀ. ಅಂತರ ದೂರದಲ್ಲಿನ ಕ್ವಾರಿಯಲ್ಲಿ ನಿರಂತರ ಸ್ಫೋಟಕಗಳ ಬಳಕೆ, ಹೊಸ ಮನೆ ನಿರ್ಮಾಣವನ್ನೇ ಮೊಟಕುಗೊಳಿಸಿದ ಕುಟುಂಬ, ನೀರಿಲ್ಲದೇ ಬಂಜರು ಭೂಮಿಯಾಗುತ್ತಿರುವ ಕೃಷಿ ಭೂಮಿ, ಆತಂಕದ ನಡುವೆ ಜೀವನ ಕಳೆದುಕೊಳ್ಳುತ್ತಿರುವ ಕುಟುಂಬಗಳಿಗೆ ಹೈಕೋರ್ಟ್ ಆದೇಶವಿದ್ದರೂ ಪಾಲಿಸದ ಅಧಿಕಾರಿಗಳು. ಇದು ಬಡಗಕಜೆಕಾರು ಗ್ರಾಮ ಪಂಚಾಯತ್‌ನ ತೆಂಕಕಜೆಕಾರು ಪ್ರದೇಶದಲ್ಲಿ ನಡೆಯುತ್ತಿರುವ ಕ್ವಾರಿ ಕಾರ್ಯಾಚರಣೆಯಿಂದಾಗಿ ಗ್ರಾಮಸ್ಥರು ಅನುಭವಿಸುತ್ತಿರುವ ನರಕಯಾತನೆ ಬಡಗಕಜೆಕಾರು ಗ್ರಾಮ ಪಂಚಾಯತ್‌ನ ತೆಂಕಕಜೆಕಾರು ಪ್ರದೇಶದಲ್ಲಿ ನಡೆಯುತ್ತಿರುವ ಕ್ವಾರಿಯಿಂದಾಗಿ ಪರಿಸರವಿಡೀ ಮಾಲಿನ್ಯದಿಂದ ಕೂಡಿದ್ದು, ಮನೆ, ಅಂಗನವಾಡಿ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಈ ಕುರಿತು ಹೈಕೋರ್ಟ್ ನಲ್ಲಿ ಗ್ರಾಮಸ್ಥರು ಹೂಡಿರುವ ದಾವೆಗೆ ರಾಜ್ಯ ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರಿಗೆ ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೆ.5 ರಂದು ಆದೇಶಿಸಿದರೂ, ನ.22 ಕ್ಕೆ ಬರುವ ನೋಟೀಸು ನೀಡಿ, ಕೊನೆ ಘಳಿಗೆಯಲ್ಲಿ ಮತ್ತೊಂದು ನೋಟೀಸು ನೀಡಿ ನ.26ಕ್ಕೆ ಪರಿಶೀಲನೆಯನ್ನು ಮುಂದೂಡಲಾಗಿದೆ ಎಂದು ಗ್ರಾಮಸ್ಥರ ದಿಕ್ಕು ತಪ್ಪಿಸಲು ಯತ್ನಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಅದು ಪ್ರಕೃತಿ ರಮಣೀಯ ದಟ್ಟ ಕಾಡು, ಕೃಷಿ ಸಂಬಂಧಿಸಿದ ಪ್ರದೇಶ. ಮೀಸಲು ಅರಣ್ಯವಿರುವ ಹತ್ತಿರದಲ್ಲೇ ಕ್ವಾರಿಯನ್ನು ತೆರೆಯಲು ಅನುಮತಿಯನ್ನು ಸರಕಾರ ನೀಡಿದೆ. ಆದರೆ ಅನುಮತಿಯಲ್ಲಿರುವ ನಿಯಮಗಳೆಲ್ಲವನ್ನೂ ಉಲ್ಲಂಘಿಸಿ ಕ್ವಾರಿ ಅಪಾಯಕಾರಿಯಾಗಿ ಕಾರ್ಯಾಚರಿಸುತ್ತಿದೆ. ಇದರಿಂದ ಕ್ವಾರಿ ಸಮೀಪವೇ ಇರುವ ಗ್ರಾಮದ ಜನತೆ ಆತಂಕಕ್ಕೀಡಾಗಿದ್ದಾರೆ. ಹಲವು ಮನೆಗಳ ಗೋಡೆಗಳು ಕ್ವಾರಿಯಲ್ಲಿನ ಅಪಾಯಕಾರಿ ಸ್ಫೋಟಕ ಸಿಡಿಸುವುದರಿಂದಾಗಿ ಬಿರುಕುಬಿಟ್ಟಿದೆ. ಜಾನುವಾರು ಕೊಠಡಿಗಳ ಶೀಟುಗಳು ಮುರಿದುಬಿದ್ದಿದೆ. ಸ್ಫೋಟದ ಸದ್ದು ಒಮ್ಮೆಗೆ ಕಿವಿಯನ್ನು ಮುಚ್ಚಿಸಿ, ಹೃದಯ ಬಡಿತ ಹೆಚ್ಚಿಸುವಂತೆ ಮಾಡುತ್ತಿದೆ. ಜಿಲೆಟಿನ್ ಬಳಸಿ ನಡೆಸುತ್ತಿರುವ ಸ್ಫೋಟದಿಂದಾಗಿ ಗಾಳಿಯಿಡೀ ಮಲಿನಗೊಳ್ಳುತ್ತಿದೆ. ಜಲ್ಲಿ ಧೂಳುಗಳು ಮನೆ ಸೇರುತ್ತಿವೆ. ಜಾನುವಾರುಗಳು ಸ್ಫೋಟದ ಸದ್ದು ಕೇಳಿ ಹಗ್ಗವನ್ನು ತುಂಡರಿಸಿ ಓಡುವಂತಹ ವಾತಾವರಣ ಇಲ್ಲಿದೆ. ಹೊಸ ಮನೆಯನ್ನು ಕಟ್ಟುತ್ತಿರುವ ಮನೆಮಂದಿ ಕ್ವಾರಿ ಆತಂಕದಿಂದ ಅರ್ಧದಲ್ಲೇ ಕಾಮಗಾರಿಯನ್ನು ಮೊಟಕುಗೊಳಿಸಿದ್ದಾರೆ.

ಪ್ರಮುಖವಾಗಿ ನಾಲ್ಕು ಶಾಲಾ ಬಸ್ಸುಗಳು ಕ್ವಾರಿ ಕಾರ್ಯಾಚರಿಸುವ ಮೀ. ಅಂತರದಲ್ಲಿರುವ ರಸ್ತೆಯಲ್ಲಿ ಸಂಚರಿಸುತ್ತಿರುವುದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ. ಕಳೆದ ಆರು ತಿಂಗಳಿನಿಂದ ಕಾರ್ಯಾಚರಿಸುತ್ತಿರುವ ಕ್ವಾರಿಯ ಅಧ್ವಾನದಿಂದಾಗಿ ಭತ್ತದ ಕೃಷಿಯನ್ನು ಮೊಟಕುಗೊಳಿಸಿದ ಪರಿಣಾಮವಾಗಿ ಹಲವು ಎಕ್ರೆ ಗದ್ದೆಗಳು ಪಾಳುಬಿದ್ದಿವೆ. ಬಾವಿಗಳು ನೀರಿಲ್ಲದೆ ಬರಿದಾಗುತ್ತಿದೆ. ಪ್ರಮುಖವಾಗಿ ಅರ್ಧ ಕಿ.ಮೀ ದೂರದಲ್ಲೇ ಅಂಗನವಾಡಿ ಕಾರ್ಯಾಚರಿಸುತ್ತಿದ್ದು, ಸುಮಾರು 20 ರಷ್ಟು ಮಕ್ಕಳು ಅಂಗನವಾಡಿಯಲ್ಲಿ ನೆಲೆಸುತ್ತಾರೆ. ಅಂತಹ ಹೊತ್ತಿನಲ್ಲೇ ಸ್ಫೋಟಕ ಸಿಡಿಸಿರುವುದರಿಂದಾಗಿ ಅಂಗನವಾಡಿ ಕಟ್ಟಡವೂ ಬಿರುಕು ಬಿಟ್ಟು ಮಕ್ಕಳು ಅಪಾಯವನ್ನು ಎದುರಿಸುತ್ತಿದ್ದಾರೆ. ಈ ಕುರಿತು ಸ್ಥಳೀಯಾಡಳಿತ, ಜಿಲ್ಲಾಡಳಿತಕ್ಕೆ ದೂರು ನೀಡಿರುವ ಗ್ರಾಮಸ್ಥರ ದೂರುಗಳಿಗೆ ಸ್ಪಂಧನೆಯೇ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ನಲ್ಲಿ ಜಯಾನಂದ, ವಿಶ್ವನಾಥ, ನಾರಾಯಣ, ಜಾರಪ್ಪ ಹಾಗೂ ಡೀಕಮ್ಮ ಸೇರಿಕೊಂಡು ದಾವೆ ಹೂಡಿದ್ದರು. ಅದರಂತೆ ಎಲ್ಲಾ ಇಲಾಖೆಗಳಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶವನ್ನು ಹೊರಡಿಸಿತ್ತು. ಆದರೆ ಆದೇಶ ಸೇರಿ ಎರಡು ತಿಂಗಳುಗಳ ಬಳಿಕ ನ.22 ಕ್ಕೆ ಅಧಿಕಾರಿಗಳು ಸ್ಥಳಕ್ಕೆ ಬರುವ ನೋಟೀಸು ನೀಡಿದ್ದರು. ಅದರಂತೆ ಗ್ರಾಮಸ್ಥರು ಎಲ್ಲರೂ ನೋಟೀಸಿನಲ್ಲಿ ನೀಡಿರುವಂತೆ ನ.22ರ 11 ಗಂಟೆಗೆ ಕಾಯುತ್ತಿದ್ದರು. ಆದರೆ 11.15ರ ಹೊತ್ತಿಗೆ ಪೋಸ್ಟ್ ಮೆನ್ ಸ್ಥಳಕ್ಕೆ ಧಾವಿಸಿ ಮತ್ತೊಂದು ನೋಟೀಸು ನೀಡಿ ಸ್ಥಳ ಪರಿಶೀಲನೆಯನ್ನು ನ.26ಕ್ಕೆ ಮುಂದೂಡಲಾಗಿದೆ ಎಂದು ಸೂಚಿಸಿದ್ದರು. ಇದನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದ.ಕ ಜಿಲ್ಲಾ ಕಚೇರಿಗೆ ಗ್ರಾಮಸ್ಥರು ದೂರವಾಣಿ ಮಾಡಿ ಕೇಳಿದಾಗ ಅಲ್ಲಿರುವ ಸಿಬ್ಬಂದಿ ನಿನ್ನೆಯಷ್ಟೇ ಸಭೆ ನಿಗದಿಯಾಗಿದ್ದು, ಅದಕ್ಕಾಗಿ ಸ್ಥಳ ಪರಿಶೀಲನೆಯನ್ನು ಕೊನೆ ಕ್ಷಣದಲ್ಲಿ ಕೈಬಿಡಲಾಗಿದೆ ಅಂದಿದ್ದಾರೆ. ಆದರೆ ಕೂಲಿ ಮಾಡಿಕೊಂಡು ಬದುಕುತ್ತಿರುವ ಗ್ರಾಮಸ್ಥರು ಈ ಕುರಿತು ಕೆಲಸವನ್ನು ಬಿಟ್ಟು ಸ್ಥಳ ಪರಿಶೀಲನೆ ನಿಂತಿರುವುದನ್ನು ಪ್ರಶ್ನಿಸಿದಾಗ ನಾವು ಏನು ಮಾಡಲು ಬರುವುದಿಲ್ಲ ಎಂದು ಉದ್ಧಟತನದಿಂದ ಪ್ರತಿಕ್ರಯಿಸಿದ್ದಾರೆ.,. ಇದರಿಂದ ನೊಂದ ಗ್ರಾಮಸ್ಥರು ಅಧಿಕಾರಿಗಳು ಕೆಲವರ ಒತ್ತಡಕ್ಕೆ ಮಣಿದು ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಮೂಲಕ ರಾಜ್ಯದ ಉಚ್ಛನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸುತ್ತಿದ್ದಾರೆ. ಮುಂದೆಯೂ ಬಾರದೇ ಇದ್ದಲ್ಲಿ ಕ್ವಾರಿಯೊಳಗಡೆ ಕುಳಿತು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಈ ಕುರಿತು ಹೆಚ್ಚಿನ ಮುತುವರ್ಜಿ ವಹಿಸಿ ಪರಿಸರ ಸಂರಕ್ಷಣೆ , ಜೀವ ಸಂಕುಲದ ವಿರುದ್ಧವಾಗಿರುವ ಕ್ವಾರಿಯನ್ನು ತಕ್ಷಣಕ್ಕೆ ನಿಲ್ಲಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕ್ವಾರಿ ಆರಂಭದ ನಂತರ ನಿರಂತರ ಭೂಕುಸಿತ
ಕ್ವಾರಿ ಆರಂಭದ ನಂತರದ ದಿನಗಳಲ್ಲಿ ಮಳೆ ಸಂದರ್ಭ ಪ್ರದೇಶದಲ್ಲಿ ನಿರಂತರ ಭೂಕುಸಿತಗಳು ಸಂಭವಿಸುತ್ತಲೇ ಇದೆ. ಮನೆಗಳಿಗೆ ಗುಡ್ಡ ಜರಿದು ಬಿದ್ದು ವ್ಯಾಪಕ ಹಾನಿಯುಂಟಾಗಿದೆ. ಮಂಜನಾಡಿಯಲ್ಲಿ ನಡೆದ ದುರಂತದಂತೆ ಮುಂದಿನ ದಿನಗಳಲ್ಲಿ ತೆಂಕಕಜೆಕಾರು ಪ್ರದೇಶವೂ ದೂರವಿಲ್ಲ ಅನ್ನುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಆಘಾತಗಳು ಸಂಭವಿಸಿದ ಬಳಿಕ ತಮಗೆ ಬೇಕಾದ ರೀತಿಯಲ್ಲಿ ಅಧಿಕಾರಿಗಳು ಸುಳ್ಳು ವರದಿಗಳನ್ನು ನೀಡಲು ಸಿದ್ಧರಿದ್ದಾರೆ ಎಂದು ಅಳಲು ವ್ಯಕ್ತಪಡಿಸಿದ್ದಾರೆ.






