ಉಳ್ಳಾಲ,ನ.14: ರಾಜ್ಯದಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಹಾಗಾಗಿ ರಾಜ್ಯ ಸರಕಾರ ಹಲವಾರು ಪೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅದಕ್ಕೆ ಪೂರಕವಾದ ಕಾರ್ಯಕ್ರಮಗಳಲ್ಲಿ ಈ ಮಕ್ಕಳ ದಿನಾಚರಣೆಯೂ ಒಂದಾಗಿದೆ ಎಂದು ಉಳ್ಳಾಲ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಫೀಕ್ ಅಂಬ್ಲಮೊಗರು ಹೇಳಿದರು.

ಇವರು ಉಳ್ಳಾಲ ತಾಲೂಕಿನ ಅಂಬ್ಲಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಮ್ಮುಖದಲ್ಲಿ ನಡೆದ ಪೋಷಕ ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಎಲ್‌ಕೆಜಿ, ಯುಕೆಜಿ ಸರಕಾರದಿಂದ ಅನುದಾನ ಬಿಡುಗಡೆಯಾದ ನಂತರ ಮಕ್ಕಳನ್ನು ಶಾಲೆಗೆ ಎಡ್ಮಿನೇಷನ್ ಮಾಡಿಕೊಳ್ಳುತ್ತದೆ. ಗ್ರಾಮಸ್ಥರ ಸಹಕಾರ ಅಂಬ್ಲಮೊಗರು ಶಾಲೆಗೆ ಸಂಪೂರ್ಣವಾಗಿದೆ. ಇದರ ಅರ್ಥವೆನೆಂದರೆ ಅಂಬ್ಲಮೊಗರು ಶಾಲೆ ಹಾಗೂ ಗ್ರಾಮದ ಹೆಸರು ಉನ್ನತ ಮಟ್ಟಕ್ಕೇರಿದೆ ಎಂದು ಅಭಿಪ್ರಾಯಪಟ್ಟರು.


ಇದೇ ಸಂದರ್ಭ ಮಾತನಾಡಿದ ಕ್ಷೇತ್ರದ ಶಿಕ್ಷಣಾಧಿಕಾರಿಗಳು ಈಶ್ವರ್ ಅವರು, ಮಕ್ಕಳ ದಿನಾಚರಣೆ ಮಕ್ಕಳ ಹಬ್ಬ. ನಿಮಗಾಗಿ ಕಾರ್ಯಕ್ರಮವನ್ನು ಹಬ್ಬವನ್ನಾಗಿ ಆಚರಿಸುತ್ತಿದ್ದೇವೆ. ಶಿಕ್ಷಣಾಧಿಕಾರಿಗಳು ವರ್ಗಾವಣೆಗೊಳ್ಳುವುದು ಸಹಜ. ಆದರೆ ಶಾಲೆಯ ಸಂಪೂರ್ಣ ಜವಾಬ್ದಾರಿಯನ್ನು ಪೋಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ವಹಿಸಿಕೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಶಾಲೆಗಳ ಪೈಕಿ 1109 ಶಾಲೆಗಳಲ್ಲಿ ಪೋಷಕರ ಸಭೆ ನಡೆಯುತ್ತಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ವಿಧಾನ ಸೌಧದಲ್ಲಿ ಉದ್ಘಾಟಿಸಿದ್ದಾರೆ. ಹಿರಿಯ ವಿದ್ಯಾರ್ಥಿಗಳ ಹಾಗೂ ಪೋಷಕರ ಸಭೆಯ ಮುಖ್ಯ ಉದ್ದೇಶವೆನೆಂದರೆ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡುವುದಾಗಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯರು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಜಗದೀಶ್ ಶೆಟ್ಟಿ ಎ. ಮಾತನಾಡಿ, ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರ ಇರಾದೆಯಂತೆ ಪೋಷಕರ ಹಾಗೂ ಶಿಕ್ಷಕರ ಸಭೆಯನ್ನು ನಡೆಸಿದ್ದೇವೆ. ಈಗಾಗಲೇ ಹಲವಾರು ಶಾಲೆಗಳಲ್ಲಿ ಈ ಸಭೆ ನಡೆಯುತ್ತಿದೆ. ಇದೊಂದು ಮಹತ್ವದ ಯೋಜನೆಯಾಗಿದೆ. ಸರಕಾರಿ ಶಾಲೆಯನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಾಲೆಯಲ್ಲಿ ಶಿಕ್ಷಣ ಸಿಕ್ಕಿದರೆ ಸಾಲದು, ಇದರ ಜೊತೆ ಪೋಷಕರಿಂದ ಸಂಸ್ಕೃತಿ, ಸಮಾಜದಿಂದ ಉತ್ತಮ ವಿಚಾರಗಳು ವಿದ್ಯಾರ್ಥಿಗಳಿಗೆ ಸಿಗಬೇಕು ಎಂದು ಅಭಿಪ್ರಾಯಪಟ್ಟರು.
ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆ ((LKG ,UKG ವಿಭಾಗ) , ಸಾಮೂಹಿಕ ನೃತ್ಯ ಸ್ಪರ್ಧೆ (1-4 , ಮತ್ತು 5-8 ವಿಭಾಗ), ಶೈಕ್ಷಣಿಕ ವಿಚಾರ ವಿನಿಮಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬ್ಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ವಹಿಸಿದ್ದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣ ಸಂಯೋಜಕಿ ಅನ್ನಪೂರ್ಣ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ತಹಸೀನಾ, ಶಾಲಾ ಮುಖ್ಯಮಂತ್ರಿ ಚಿಂತನ್ ಎನ್.ಜಿ, ವಿರೋಧ ಪಕ್ಷದ ನಾಯಕಿ ಜಾನ್ವಿ, ಶಿಕ್ಷಕರಾದ ಜೋಸ್ಫಿನ್ ಡಿ’ಸೋಜ, ವೀಣಾ, , ಗೀತಾ.ಕೆ, ನಳಿನಾಕ್ಷಿ , ಶ್ವೇತಾ ಎಂ.ಪೈ, ಪ್ರಮೀಳಾ, ಸ್ಟೆಫಿ ಡಿಸೋಜ, ಚೈತ್ರ, ಭೂಮಿಕಾ, ರೋಜಾ ಉಪಸ್ಥಿತರಿದ್ದರು.
ಸಹಶಿಕ್ಷಕಿ ಗೀತಾ .ಕೆ ನಿರೂಪಿಸಿದರು. ನಳಿನಾಕ್ಷಿ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಿಸಿದರು. ಶ್ವೇತಾ ಎಂ. ಪೈ ವಂದಿಸಿದರು.

