ಪುತ್ತೂರು, ನ. 04: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರ ಸಮೀಪ ನಾಲ್ಕು ತಿಂಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೃತಪಟ್ಟ ಒಂದು ತಿಂಗಳೊಳಗೆ ಗಾಯಾಳು ತಂದೆಯೂ ನ.3ರಂದು ಸಾವನ್ನಪ್ಪಿದ್ದಾರೆ.



ಮೇ 27 ರಂದು ಖಾಸಗಿ ಬಸ್ ಮತ್ತು ಕಾರಿನ ನಡುವೆ ಈ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಅಂಡೆಪುಣಿ ಈಶ್ವರ ಭಟ್ ಅವರ ಮಗಳು ಅಪೂರ್ವಾ (35) ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅಕ್ಟೋಬರ್ 7 ರಂದು ನಿಧನರಾಗಿದ್ದರು. ಇದೀಗ ಗಂಭೀರವಾಗಿ ಗಾಯಗೊಂಡಿದ್ದ ಅವರ ತಂದೆ, ಈಶ್ವರ ಭಟ್ (75), ಅವರು ಕೂಡ ನವೆಂಬರ್ 3 ರಂದು ಪುತ್ತೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಪಘಾತ ಸಂಭವಿಸಿದ ದಿನ, ಈಶ್ವರ ಭಟ್ ಮತ್ತು ಅವರ ಮಗಳು ಅಪೂರ್ವ ಅವರು ಪುತ್ತೂರು ಪಟ್ಟಣದಿಂದ ತಮ್ಮ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ, ಪುತ್ತೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಮುರ ಸಮೀಪ ಅವರ ಕಾರಿಗೆ ಢಿಕ್ಕಿ ಹೊಡೆದಿತ್ತು. ತಂದೆ ಹಾಗೂ ಮಗಳು ಗಂಭೀರವಾಗಿ ಗಾಯಗೊಂಡರೆ, ಅಪೂರ್ವಾ ಅವರ 3 ವರ್ಷದ ಮಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಳು. ತಂದೆ ಮತ್ತು ಮಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚೇತರಿಸಿಕೊಂಡಿದ್ದ ಈಶ್ವರ ಭಟ್ ಅವರನ್ನು ಪುತ್ತೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಅಪೂರ್ವಾ ಅವರು ಈ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.



