ಮಂಗಳೂರು : ನಗರದ ಪಡೀಲ್‌ನಲ್ಲಿ ಆಕರ್ಷಣೀಯವಾಗಿ ಕಟ್ಟಲಾದ ಪ್ರಜಾಸೌಧದೊಳಕ್ಕೆ ಕಡತಗಳು ಆಮೆಗತಿಯಲ್ಲಿ ವಿಲೇವಾರಿಯಾಗುತ್ತಿದೆ, ಕೇಸ್ ವರ್ಕರ್‌ಗಳ ಮೇಲ್ವಿಚಾರಣೆಯಲ್ಲಿರುವ ಆಫೀಸ್ ಸುಪರಿಟೆಂಡೆಂಟ್‌ಗಳು ಮತ್ತು ಕೆಲವು ಅಧಿಕಾರಿಗಳು ಜಿಲ್ಲಾಧಿಕಾರಿಯವರಂತೆ ವರ್ತಿಸುತ್ತಿರುವ ಆರೋಪಗಳು ಸಿಬ್ಬಂದಿ ವಲಯದಿಂದಲೇ ಕೇಳಿಬರುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಮೇಲೆ “ಪ್ರಜಾಸೌಧ” ಎಂಬ ಗೌರವಪೂರ್ಣ ಹೆಸರು ಬರೆದಿದೆ. ಆದರೆ ಒಳಗಡೆ ನಡೆಯುತ್ತಿರುವ ಪ್ರಜಾ ವ್ಯವಹಾರಗಳ ಸ್ಥಿತಿ ಅದರ ಹೆಸರಿಗೆ ತಕ್ಕಂತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರ ನಡುವೆ ಕೇಳಿಬರುತ್ತಿದೆ. ಸಾರ್ವಜನಿಕರು ಯಾವುದೇ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದಾಗ ಅದು ಫೈಲ್ (ಕಡತ) ರೂಪದಲ್ಲಿ ಕೇಸ್ ವರ್ಕರ್‌ಗಳಿಗೂ, ನಂತರ ಸಂಬಂಧಪಟ್ಟ ಅಧಿಕಾರಿಗಳಿಗೂ ಹೋಗಬೇಕು. ಸರ್ಕಾರದ ಇ-ಗವರ್ನೆನ್ಸ್ ಇಲಾಖೆಯ ಸುಪರ್ದಿಯಲ್ಲಿ “ಇ-ಆಫೀಸ್” ಸಾಫ್ಟ್‌ವೇರ್ ಮೂಲಕ ಈ ಪ್ರಕ್ರಿಯೆ ವೇಗಗೊಳ್ಳಬೇಕೆಂಬ ಉದ್ದೇಶದಿಂದ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯ ಹಿಂದಿನ ಆಶಯ – ಸಾರ್ವಜನಿಕರ ಕೆಲಸ ತ್ವರಿತವಾಗಿ ಆಗಬೇಕು, ಪಾರದರ್ಶಕತೆ ಬರಬೇಕು ಎಂಬುದು. ಆದರೆ ಜಿಲ್ಲಾಧಿಕಾರಿ ಕಚೇರಿಯ ನೈಜ ಸ್ಥಿತಿ ಇದಕ್ಕಿಂತ ವಿಭಿನ್ನವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅರ್ಜಿ ಸಲ್ಲಿಸಿದ ಬಳಿಕ ತಿಂಗಳುಗಳು ಕಳೆದರೂ ಕಡತಗಳು ಚಲನೆಯಲ್ಲೇ ನಿಂತು ಹೋಗುತ್ತಿವೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಚೇರಿಯ ಕೇಸ್ ವರ್ಕರ್‌ಗಳು ಅಸಹಾಯಕ ಸ್ಥಿತಿ ತೋರಿಸುತ್ತಾರೆ. ಅವರ ಮೇಲ್ವಿಚಾರಣೆಯಲ್ಲಿರುವ ಆಫೀಸ್ ಸುಪರಿಟೆಂಡೆಂಟ್‌ಗಳು ಮತ್ತು ಕೆಲವು ಅಧಿಕಾರಿಗಳು ADCಯವರಂತೆ ವರ್ತಿಸುತ್ತಿದ್ದಾರೆ, ಎಂದು ಸಿಬ್ಬಂದಿ ವಲಯದಲ್ಲಿಯೇ ಚರ್ಚೆ ನಡೆಯುತ್ತಿದೆ. ಕಡತಗಳ ಮೇಲೆ ಚರ್ಚೆ, ಟಿಪ್ಪಣಿಗಳು, ಮತ್ತೊಂದು ಚರ್ಚೆ – ಈ ಚಕ್ರದಿಂದ ಸಾರ್ವಜನಿಕರ ಕೆಲಸ ವಿಲೇವಾರಿ ಆಗುವುದೇ ಕಷ್ಟ. ಪ್ರಶ್ನೆ ಏನೆಂದರೆ – ಜಿಲ್ಲಾಧಿಕಾರಿಗಳ ಅಧಿಕಾರ ಕಡತ ವಿಲೇವಾರಿ ಪ್ರಕ್ರಿಯೆಯಲ್ಲಿ ನಿಜವಾಗಿಯೂ ಜಾರಿಯಲ್ಲಿದೆಯೇ? ಅಥವಾ ಅದನ್ನು ಮಧ್ಯಮ ಮಟ್ಟದ ಅಧಿಕಾರಿಗಳಿಗೆ ಬಿಟ್ಟುಬಿಟ್ಟಿದೆಯೇ? ಇದಕ್ಕಿಂತಲೂ ಮುಖ್ಯವಾಗಿ ಮುಖ್ಯಮಂತ್ರಿಗಳ ನೇರ ಮೇಲ್ವಿಚಾರಣೆಯಲ್ಲಿರುವ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ) ಯವರು ಈ ಸ್ಥಿತಿಗೆ ಯಾಕೆ ಗಮನ ಹರಿಸುತ್ತಿಲ್ಲ? ಇ-ಆಫೀಸ್ ಯೋಜನೆ ಉದ್ದೇಶಿಸಿದ “ವೇಗ ಮತ್ತು ಪಾರದರ್ಶಕತೆ” ಕೇವಲ ಕಾಗದದಲ್ಲಿ ಉಳಿಯುತ್ತಿದೆಯೇ ಎಂಬ ಪ್ರಶ್ನೆ ಇದೀಗ ಆಡಳಿತ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.

