ಪುತ್ತೂರು, ಅ.22: ಸೇಡಿಯಾಪು ಬಳಿ ಹೆಜ್ಜೇನು ದಾಳಿಯಿಂದ ಸಾವನ್ನಪ್ಪಿದ ವಿದ್ಯಾರ್ಥಿನಿ ಇಶಾ(7) ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

ಸೋಮವಾರ ನಡೆದ ಅಶೋಕ ಜನಮನ ಕಾರ್ಯಕ್ರಮದ ಸಂದರ್ಭದಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈ ಘಟನೆಯ ಕುರಿತು ಸಿಎಂ ಬಳಿ ತಿಳಿದ ತದನಂತರ ಮುಖ್ಯಮಂತ್ರಿಗಳು ಈ ಘೋಷಣೆ ಮಾಡಿದರು.
ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು. ತೆಂಕಿಲದ ವಿವೇಕಾನಂದ ಪ್ರಾಥಮಿಕ ಶಾಲೆಯ 2 ನೇ ತರಗತಿ ವಿದ್ಯಾರ್ಥಿನಿ ಇಶಾ (7) ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಜೇನುನೊಣಗಳ ಹಿಂಡು ದಾಳಿ ಮಾಡಿತು. ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆಸ್ಪತ್ರೆಯಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಗಾಯಗೊಂಡ ಇನ್ನಿಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ.


