ಧರ್ಮನಗರ: ಉಳ್ಳಾಲ ಧರ್ಮನಗರದ ನಾಗಬ್ರಹ್ಮ ಪರಿವಾರ ದೈವಗಳ ಕ್ಷೇತ್ರದಲ್ಲಿ ಧರ್ಮನಗರ ’ಟೀಮ್ ಹನುಮಾನ್’ ಸಂಘಟನೆಯ ಸದಸ್ಯರು ’ಭವತೀ ಭಿಕ್ಷಾಂ ದೇಹಿ’ ಪರಿಕಲ್ಪನೆಯಡಿ ಕಳೆದ ನವರಾತ್ರಿಯಂದು ಯಕ್ಷ ವೇಷ ಧರಿಸಿ ಕ್ರೋಢೀಕರಿಸಿದ ಹಣ ಫಲಾನುಭವಿಗಳಿಗೆ ಹಸ್ತಾಂತರಿಸಿದ್ದಾರೆ.

ಈ ಸಂದರ್ಭ ಟೀಮ್ ಹನುಮಾನ್ ಸಂಘಟನೆಯ ನೂತನ ಕಾರ್ಯಾಲಯ `ಹನುಮ ಕುಟೀರ’ವನ್ನು ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕಾರ್ನವರ್ ಲೋಕಾರ್ಪಗೊಳಿಸಿದರು. ಬಳಿಕ ಮಾತನಾಡಿ, ವೇಷ ಹಾಕಿ ಬಂದ ಆದಾಯದಲ್ಲಿ ಒಂದು ಪೈಸೆಯನ್ನೂ ದುರುಪಯೋಗಗೊಳಿಸದೆ ಸಮಾಜದ ಅಶಕ್ತರಿಗೆ ನೀಡುವ ಕಾರ್ಯ ದೇವರು ಮೆಚ್ಚುವಂಥದ್ದು ಎಂದರು.

ಕಾರ್ಯಕ್ರಮದಲ್ಲಿ ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಮಾತನಾಡಿ, ಯಾರೊಬ್ಬ ಶ್ರೀಮಂತ ಇಲ್ಲದಿದ್ದರೂ ಹದಿಹರೆಯದ ಯುವಕರು ವಿಭಿನ್ನ ರೀತಿಯಲ್ಲಿ ಸಮಾಜದ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ. ಟೀಮ್ ಹನುಮಾನ್ ಸಂಘಟನೆಯ ಸದಸ್ಯರು ಬೆಳಕಿನ ತಿಂಗಳಲ್ಲಿ ಅಶಕ್ತ ಕುಟುಂಬಕ್ಕೆ ಬೆಳಕು ಚೆಲ್ಲುವ ಸತ್ಕಾರ್ಯ ಮಾಡಿದ್ದಾರೆ. ಇದು ಸಮಾಜಕ್ಕೆ ಮಾದರಿ ಎಂದಿದ್ದಾರೆ.

ಕಳೆದ ನವರಾತ್ರಿಯಂದು ’ಟೀಮ್ ಹನುಮಾನ್’ ಸಂಘಟನೆಯ ಸದಸ್ಯರು ‘ಭವತೀ ಭಿಕ್ಷಾಂ ದೇಹಿ’ ಪರಿಕಲ್ಪನೆಯಡಿ ಯಕ್ಷವೇಷ ಧರಿಸಿ ಕ್ರೋಢೀಕರಿಸಿದ್ದ 1,05,905 ರೂಪಾಯಿ ಸಹಾಯಧನ ಚೆಕ್ ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿರುವ ಕಾರ್ಕಳದ ನಾರಾವಿ ನಿವಾಸಿ ಶ್ರವಣ್ ಅವರ ಪೋಷಕರಿಗೆ ಹಸ್ತಾಂತರಿಸಲಾಯಿತು. ಅಲ್ಲದೆ ಸ್ಥಳೀಯ ಸಂಘಟನೆ ಸ್ವಾಗತ್ ಫ್ರೆಂಡ್ಸ್ ಆಂಬ್ಯುಲೆನ್ಸ್ ಸೇವೆ ಹಾಗೂ ಮಾಸ್ತಿಕಟ್ಟೆ ವೀರಾಂಜನೇಯ ವ್ಯಾಯಾಮ ಶಾಲಾ ಕಾಮಗಾರಿಗೆ ಸಹಾಯಧನದ ಚೆಕ್ ಹಸ್ತಾಂತರಿಸಲಾಯಿತು. ಉಳ್ಳಾಲ ಬೈಲ್ ಅಂಗನವಾಡಿ ಕೇಂದ್ರಕ್ಕೆ ಎರಡು ಗಡಿಯಾರಗಳನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಒಂಬತ್ತುಕೆರೆಯ ಅಧ್ಯಕ್ಷ ಶರತ್ ಗಟ್ಟಿ ಸೋಮೇಶ್ವರ, ಸೋಮನಾಥ ಫ್ರೆಂಡ್ಸ್ ಅಧ್ಯಕ್ಷ ಸತೀಶ್ ನಾಯಕ್, ಧರ್ಮನಗರ ನಾಗಬನದ ಅಧ್ಯಕ್ಷ ನಾಗೇಶ್ ಉಳ್ಳಾಲ್, ರಾಹುಗುಳಿಗ ಬನದ ಅಧ್ಯಕ್ಷ ಭಾಸ್ಕರ ತೆಂಗಿನ ಹಿತ್ಲು, ಮಹಿಳಾ ಸಂಘದ ಅಧ್ಯಕ್ಷೆ ರತಿ ಶಂಕರ್, ಯಕ್ಷವೇಷ ಕಲಾವಿದರಾದ ವಿಘ್ನೇಶ್ ಕುಮಾರ್ ಬೋಳೂರು, ಗುತ್ತಿಗೆದಾರ ರಿಚರ್ಡ್ ವೇಗಸ್, ಬಿಜೆಪಿ ಮಂಗಳೂರು ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಧವಿ ಉಳ್ಳಾಲ್, ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮಿತ ಅಶ್ವಿನ್, ಕಾಂಗ್ರೆಸ್ ಮುಖಂಡ ನವನೀತ್ ಉಳ್ಳಾಲ್, ಸ್ವಾಗತ್ ಫ್ರೆಂಡ್ಸ್ ಅಧ್ಯಕ್ಷ ಧನರಾಜ್, ಟೀಮ್ ಹನುಮಾನ್ ಅಧ್ಯಕ್ಷ ಸಂಪತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಟೀಮ್ ಹನುಮಾನ್ ಸದಸ್ಯ ತಿಲಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೃಥ್ವಿ ನಿರೂಪಿಸಿದರು.



