ಉಳ್ಳಾಲದ ಶ್ರೀ ಸಾಯಿ ಪರಿವಾರ ಟ್ರಸ್ಟ್ (ರಿ.) — ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ — ದಸರಾ ಮಹೋತ್ಸವದ ಪ್ರಯುಕ್ತ “ಮುದ್ದು ಮಕ್ಕಳ ಅಂದದ ಶಾರದೆ ಫೋಟೋ ಸ್ಪರ್ಧೆ-2025” ಆಯೋಜಿಸಿದ್ದು, ಆ ಪ್ರಯುಕ್ತ ಪೋಸ್ಟರ್ ಬಿಡುಗಡೆ ಮಂಗಳೂರು ದಸರಾ ಜರಗುವ ಕುದ್ರೋಳಿ ಶ್ರೀ ಗೋಕರ್ಣಾಥ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಕ್ಷೇತ್ರದ ಖಜಾಂಚಿ, ಬೆಳದಿಂಗಳು ಸೇವಾ ಟ್ರಸ್ಟ್ ಸ್ಥಾಪಕ ಪದ್ಮರಾಜ್ ಆರ್ ಪೋಸ್ಟರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ಶಿಸ್ತಿನಿಂದ ತೊಡಗಿಸಿಕೊಂಡಿರುವ ಯುವಕರ ತಂಡವಾಗಿ ಸಾಯಿ ಪರಿವಾರ್ ಟ್ರಸ್ಟ್ ಸದಾ ಜನಮನ್ನಣೆಗೆ ಪಾತ್ರವಾಗಿದೆ. ಕೊರೊನಾ ಮಹಾಮಾರಿ ಸೇರಿದಂತೆ ವಿವಿಧ ಸಂಕಷ್ಟಗಳ ಸಂದರ್ಭಗಳಲ್ಲಿ ಸಂಸ್ಥೆ ಶೈಕ್ಷಣಿಕ, ಕ್ರೀಡೆ ಹಾಗೂ ಆರೋಗ್ಯ ಸಂಬಂಧಿ ನೆರವಿನ ಮೂಲಕ ಅನೇಕ ಕುಟುಂಬಗಳಿಗೆ ಆಶಾಕಿರಣವಾಗಿದೆ. ಈ ಸೇವಾಭಾವನೆಗೆ ಸಮಾಜದ ಎಲ್ಲ ವರ್ಗಗಳಿಂದ ಪ್ರಶಂಸೆ ಲಭಿಸಿದೆ.ಮೈಸೂರು ದಸರೆಯೊಂದಿಗೆ ಮಂಗಳೂರು ದಸರೆಯೂ ಇಂದಿಗೆ ಸಾಂಸ್ಕೃತಿಕ ಹಾಗೂ ಭಕ್ತಿಭಾವದ ಹಬ್ಬವಾಗಿ ಪ್ರಾಮುಖ್ಯತೆ ಪಡೆದಿದೆ. ಇದರ ಅಂಗವಾಗಿ ಸಾಯಿ ಪರಿವಾರ್ ಟ್ರಸ್ಟ್ ಆಯೋಜಿಸಿರುವ “ಮುದ್ದು ಮಕ್ಕಳ ಅಂದದ ಶಾರದೇ – 2025” ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದ ಅವರು ನೋಂದಣಿಯನ್ನು ಇಂದೇ ಪ್ರಾರಂಭಿಸಲಾಗಿದ್ದು, ಅಕ್ಟೋಬರ್ 5ರವರೆಗೆ ಅವಕಾಶವಿದೆ. ಭಾವನಾತ್ಮಕವಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ತಾಯಂದಿರಿಗೆ ತಮ್ಮ ಮಕ್ಕಳನ್ನು ಭಾಗಿಯಾಗಿಸಲು ಇದು ಸುವರ್ಣಾವಕಾಶವಾಗಿದೆ. ಕಲೆ, ಸಾಹಿತ್ಯ ಮತ್ತು ಕ್ರೀಡೆಯನ್ನು ಒಳಗೊಂಡಂತೆ ಮಂಗಳೂರು ದಸರಾ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಕಂಗೊಳಿಸಲು ಸಜ್ಜಾಗಿದೆ. ಬಹುಭಾಷಾ ಕವಿಗೋಷ್ಠಿ, ಮ್ಯಾರಥಾನ್, ದೇಹದಾಡ್ಯ ಸ್ಪರ್ಧೆ ಹಾಗೂ “ಅಸಮಾನ್ಯ ಸ್ತ್ರೀ” ಪ್ರಶಸ್ತಿಯ ಮೂಲಕ ಒಂಭತ್ತು ಮಹಿಳೆಯರಿಗೆ ಗೌರವ ಸಲ್ಲಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜೋಡಣೆ ಮಾಡಿಕೊಂಡು ಮುಂದುವರೆಯುತ್ತಾ, ಕಷ್ಟದಲ್ಲಿರುವವರಿಗೆ ನೆರವು ನೀಡುವುದೇ ದೇವರ ಸೇವೆ ಎಂಬ ಧ್ಯೇಯದೊಂದಿಗೆ ಸಾಯಿ ಪರಿವಾರ್ ಟ್ರಸ್ಟ್ ತನ್ನ ಪಯಣವನ್ನು ಮುಂದುವರಿಸುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಯಿ ಪರಿವಾರ್ ಟ್ರಸ್ಟ್ ಮಾರ್ಗದರ್ಶಕ, ಉದ್ಯಮಿ ಚಂದ್ರಹಾಸ್ ಪಂಡಿತ್ ಹೌಸ್ ಮಾತನಾಡಿ ವಿಶಿಷ್ಟ ಸೇವೆಗೆಂದೇ ಪರಿಚಿತವಾದ ಸಾಯಿ ಪರಿವಾರ್ ಟ್ರಸ್ಟ್ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವರ್ಷಕ್ಕೆ ಐದುಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಮಾಜಮುಖಿ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಮಂಗಳೂರು ದಸರಾ ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನಕ್ಕೆ ತಲುಪಿಸಲು ಎಲ್ಲರ ಸಹಕಾರ ಅಗತ್ಯ ಬೇಕಿದೆ. ಶಾರದಾ ವೇಷ ಧರಿಸಿ ಸಂತೋಷ ಪಡುವ ತಾಯಂದಿರ ಮನೋಭಾವವನ್ನು ಮನೆಮಠದ ಒಳಗೆ ಮಾತ್ರ ಸೀಮಿತಗೊಳಿಸದೇ, ಇನ್ನಷ್ಟು ಹರ್ಷೋಲ್ಲಾಸವನ್ನು ಪಸರಿಸುವ ಉದ್ದೇಶದಿಂದ ವಿಶೇಷ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಅನುಭವಿ ತಂತ್ರಜ್ಞರ ಮಾರ್ಗದರ್ಶನದಲ್ಲಿ ದ.ಕ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯಮಟ್ಟದಲ್ಲಿಯೂ , ಕಾಸರಗೋಡು ಜಿಲ್ಲೆಯ ಮಕ್ಕಳಿಗೂ ಭಾಗವಹಿಸಲು ಅವಕಾಶವಿದೆ. ದೇವರ ನಂಬಿಕೆಗೆ ತೊಂದರೆಯಾಗದ ರೀತಿಯಲ್ಲಿ ಫೋಟೋಗಳನ್ನು ಕಳುಹಿಸಲು ಭಾಗವಹಿಸುವವರನ್ನು ಆಹ್ವಾನಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಾಯಿ ಪರಿವಾರ್ ಟ್ರಸ್ಟ್ ಸ್ಥಾಪಕ ಸದಸ್ಯರುಗಳಾದ ಪುರುಷೋತ್ತಮ್ ಕಲ್ಲಾಪು, ಪ್ರವೀಣ್ ಎಸ್ ಕುಂಪಲ ಸೇರಿದಂತೆ ಪ್ರಮುಖರುಗಳಾದ ಸತೀಶ್ ಭಟ್ನಗರ, ಸಂಪತ್ ಪಿಲಾರ್, ಹರೀಶ್ ಕೊಟ್ಟಾರಿ, ಶವಿತ್ ಉಚ್ಚಿಲ್, ರಜನೀಶ್ ನಾಯಕ್, ಕೌಶಿಕ್ ಸೇವಂತಿಗುಡ್ಡೆ, ಹರ್ಷರಾಜ್ ಕುಂಪಲ, ಪ್ರವೀಣ್ ಕೊಲ್ಯ, ಸಂತೋಷ್ ಶೆಟ್ಟಿ ತೋಡ್ದಲ, ಪ್ರಶಾಂತ್ ಗಟ್ಟಿ ಕಾಯಂಗಳ, ಪ್ರವೀಣ್ ಮೆಸ್ಕಾಂ, ಶಿವರಾಮ ಗಟ್ಟಿ, ನಿಶಾಂತ್ ಪ್ರಕಾಶ್ ನಗರ, ಗುರುಪ್ರಸಾದ್ ಕೊಟ್ಟಾರಿ ಮುಂತಾದವರಿದ್ದರು.
ಸ್ಪರ್ಧೆ ಕುರಿತು
ಶರನ್ನವರಾತ್ರಿಯ ಸಂಧರ್ಭದಲ್ಲಿ ಮಕ್ಕಳಿಗೆ (ವಯೋಮಿತಿ ಇಲ್ಲ) ಶಾರದೆಯ ವೇಷ ತೊಡಿಸಿ ತೆಗೆದ ಫೋಟೋಗಳನ್ನು ಸ್ಪರ್ಧೆಗೆ ಕಳುಹಿಸಬಹುದು. ಪ್ರತಿ ಸ್ಪರ್ಧಾರ್ಥಿಗಳು ಶಾರದೆ ವೇಷದ ಎರಡು ಭಂಗಿಯ (ಅಡ್ಡ ಹಾಗೂ ಉದ್ದ ಸೈಜ್) ಫೋಟೋಗಳನ್ನು ಡಾಕ್ಯುಮೆಂಟ್ ರೂಪದಲ್ಲಿ ವ್ಯಾಟ್ಸ್ಆಪ್ ಮೂಲಕ ಕಳುಹಿಸಬೇಕಾಗಿದೆ. ಫೋಟೋ ಈ ವರ್ಷದದ್ದೇ ಆಗಿರಬೇಕು.
ಪ್ರಥಮ ಬಹುಮಾನ: ಚಿನ್ನದ ನಾಣ್ಯ, ಫಲಕ ಹಾಗೂ ಪ್ರಮಾಣ ಪತ್ರ, ದ್ವಿತೀಯ ಬಹುಮಾನ: ನಗದು, ಫಲಕ ಹಾಗೂ ಪ್ರಮಾಣ ಪತ್ರ, ತೃತೀಯ ಬಹುಮಾನ: ನಗದು, ಫಲಕ ಹಾಗೂ ಪ್ರಮಾಣ ಪತ್ರ ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.
📌 ಫೋಟೋ ಕಳುಹಿಸಲು ಕೊನೆಯ ದಿನಾಂಕ ಅ. 5 ಆಗಿರುತ್ತದೆ. 📌 ವ್ಯಾಟ್ಸ್ಆಪ್ ಸಂಖ್ಯೆ: 9742100301 (ಹೆಸರು, ಊರು ಸೇರಿಸಿ ಕಳುಹಿಸಬೇಕು)
ಹೆಚ್ಚಿನ ಮಾಹಿತಿಗಾಗಿ 9846822090, 9341356516, 9964280381 ಸಂಪರ್ಕಿಸಬಹುದಾಗಿದೆ.

