Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಅಡಿಕೆ ಹಾಳೆ ಉತ್ಪನ್ನಗಳ ಮೇಲೆ ಅಮೆರಿಕ ನಿರ್ಬಂಧ : ಉದ್ದಿಮೆಗಳಿಗೆ ಸಂಕಷ್ಟ

UllalaVaniBy UllalaVaniJune 10, 2025Updated:June 10, 2025No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp

ಪರಿಸರಸ್ನೇಹಿ ಎಂದು ಕರೆಯಲಾಗುತ್ತಿದ್ದ ಅಡಿಕೆ ಹಾಳೆ ತಟ್ಟೆ, ಲೋಟಗಳ ತಯಾರಿಕಾ ಉದ್ಯಮಕ್ಕೆ ಈಗ ಸಂಕಷ್ಟ ಎದುರಾಗಿದೆ. ಅಮೆರಿಕದ ಆಹಾರ ಮತ್ತು ಔಷಧ ಸಂಸ್ಥೆಯು ಅಡಿಕೆ ಹಾಳೆಯಿಂದ ಮಾಡಿದ ತಟ್ಟೆ ಸೇರಿದಂತೆ ಇನ್ನಿತರ ಉತ್ಪನ್ನಗಳ ಆಮದಿಗೆ ನಿರ್ಬಂಧ ವಿಧಿಸಿದೆ. ಇದರಿಂದ ಕರ್ನಾಟಕದ ಕರಾವಳಿ, ಮಲೆನಾಡು ಜಿಲ್ಲೆಗಳ ಸಾವಿರಾರು ರೈತರ ಆದಾಯಕ್ಕೆ ಪೆಟ್ಟು ಬಿದ್ದಿದೆ. ಅಲ್ಲದೇ, ಸಾವಿರಾರು ಸಣ್ಣ ಉದ್ಯಮಿಗಳು, ಕಾರ್ಮಿಕರಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಇವರೆಲ್ಲರೂ ಈಗ ತಮಗೊದಗಿರುವ ಸಂಕಷ್ಟ ನಿವಾರಣೆಗಾಗಿ ಕೇಂದ್ರ ಸರ್ಕಾರದತ್ತ ನೋಡುತ್ತಿದ್ದಾರೆ.

ಏಕಬಳಕೆಯ ಅಡಿಕೆ ಹಾಳೆಯ ತಟ್ಟೆ ಹಾಗೂ ಲೋಟಗಳನ್ನು ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ, ಜನರ ಆರೋಗ್ಯದ ದೃಷ್ಟಿಯಿಂದಲೂ ಪ್ಲಾಸ್ಟಿಕ್‌ಗೆ ಅತ್ಯುತ್ತಮ ಪರ್ಯಾಯ ಎಂದೇ ಪರಿಗಣಿಸಲಾಗುತ್ತಿದೆ. ಬಳಸಿ ಬಿಸಾಡಿದ ನಂತರ ಮಣ್ಣಿನಲ್ಲಿ ಕೊಳೆತು ಗೊಬ್ಬರವಾಗುತ್ತಿದ್ದ ಇವುಗಳ ಬಳಕೆ ದೇಶದಲ್ಲಿ ಹೆಚ್ಚುತ್ತಿದ್ದು, ವಿದೇಶಗಳಲ್ಲೂ ಜನಪ್ರಿಯವಾಗಿವೆ. ಕರ್ನಾಟಕದ ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ತುಮಕೂರು ಜಿಲ್ಲೆಗಳ ಸಾವಿರಾರು ಮಂದಿ ಅಡಿಕೆ ಹಾಳೆಗಳಿಂದ ತಟ್ಟೆ, ಲೋಟ, ಬಟ್ಟಲುಗಳನ್ನು ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಲವರು ಇದನ್ನು ಉದ್ಯಮ ಮಾಡಿಕೊಂಡಿದ್ದರೆ, ಅನೇಕ ಯುವಕ, ಯುವತಿಯರು ಇದನ್ನು ಗೃಹ ಕೈಗಾರಿಕೆಯನ್ನಾಗಿಯೂ ಮಾಡಿಕೊಂಡಿದ್ದಾರೆ. ಆದರೆ, ಅಮೆರಿಕ ಸರ್ಕಾರದ ಒಂದು ನಿರ್ಧಾರ ಈ ಉದ್ಯಮದ ಬುಡವನ್ನು ಅಲುಗಾಡಿಸುತ್ತಿದೆ. ಅಮೆರಿಕದ ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ ಆಹಾರ ಮತ್ತು ಔಷಧ ಸಂಸ್ಥೆಯು (ಎಫ್‌ಡಿಎ) ಅಡಿಕೆ ಹಾಳೆಗಳಿಂದ ಮಾಡಿದ ತಟ್ಟೆ, ಲೋಟ, ಬಟ್ಟಲುಗಳನ್ನು ನಿರ್ಬಂಧಿಸಿದೆ. ಈ ಕುರಿತು ಮೇ 8ರಂದು ಆಮದುದಾರರು. ವಿತರಕರು ಮತ್ತು ಚಿಲ್ಲರೆ ಮಾರಾಟಗಾರರಿಗೆ ಎಚ್ಚರಿಕೆ ರವಾನಿಸಿದೆ. ಇದರಿಂದಾಗಿ ಭಾರತದ, ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಸಾವಿರಾರು ಜನರ ಆದಾಯಕ್ಕೆ ಪೆಟ್ಟು ಬಿದ್ದಿದೆ.

‘ಅಡಿಕೆ ಹಾಳೆಗಳಿಂದ ಮಾಡಿದ ತಟ್ಟೆ, ಲೋಟಗಳು ನಿರ್ದಿಷ್ಟ ಸಂದರ್ಭಗಳಲ್ಲಿ ವಿಷಕಾರಿ ರಾಸಾಯನಿಕಗಳನ್ನು (ಅಲ್ಕಲಾಯ್ಡ್ಗಳು) ಬಿಡುಗಡೆ ಮಾಡುತ್ತವೆ. ಅವು ಆಹಾರ, ಪಾನೀಯದೊಂದಿಗೆ ಬೆರೆತು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಕ್ಯಾನ್ಸರ್ ಸೇರಿದಂತೆ ಹಲವು ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತವೆ ಎನ್ನುವುದು ವಿಜ್ಞಾನಿಗಳ ಅಧ್ಯಯನದಿಂದ ತಿಳಿದುಬಂದಿದೆ. ಅವು ಕಾನೂನಿನ ಸುರಕ್ಷಾ ಮಾನದಂಡಗಳಿಗೆ (ಜಿಆರ್‌ಎಎಸ್) ತಕ್ಕಂತೆ ಇಲ್ಲ. ಹೀಗಾಗಿ ಅವುಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಲು ಅವಕಾಶ ಇರುವುದಿಲ್ಲ’ ಎಂದು ಎಫ್‌ಡಿಎ ಪ್ರಕಟಿಸಿದೆ. ರಾಜ್ಯದ ಅಡಿಕೆ ತಟ್ಟೆ, ಲೋಟಗಳಿಗೆ ಅಮೆರಿಕ ಉತ್ತಮ ಮಾರುಕಟ್ಟೆಯಾಗಿತ್ತು. ಅಮೆರಿಕದ ಹಲವು ಕಂಪನಿಗಳು ಕರ್ನಾಟಕದಿಂದ ಪ್ರತಿವರ್ಷ ಕೋಟ್ಯಂತರ ತಟ್ಟೆ, ಲೋಟ, ಬಟ್ಟಲುಗಳನ್ನು ತರಿಸಿಕೊಳ್ಳುತ್ತಿದ್ದವು. ಅವುಗಳ ಗುಣಮಟ್ಟದ ಬಗ್ಗೆ ಅಲ್ಲಿನ ಗ್ರಾಹಕರಿಂದಲೂ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ ಎಂದೇ ಕಂಪನಿಗಳು ಸಂತಸ ವ್ಯಕ್ತಪಡಿಸಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಅಡಿಕೆ ತಟ್ಟೆಗಳು ಅನಾರೋಗ್ಯಕಾರಿ ಎನ್ನುತ್ತಿದೆ ಅಮೆರಿಕ. ಇದರಿಂದಾಗಿ ಅಮೆರಿಕಕ್ಕೆ ಮಾಡಲಾಗುತ್ತಿದ್ದ ರಫ್ತು ನಿಂತು ಹೋಗಿದೆ. ಹಾಳೆ ತಟ್ಟೆ ತಯಾರಕರು ದೇಶೀಯ ಮತ್ತು ಸ್ಥಳೀಯ ಮಾರುಕಟ್ಟೆಯನ್ನೇ ಅವಲಂಬಿಸಬೇಕಾಗಿದೆ. ದೊಡ್ಡ ಪ್ರಮಾಣದಲ್ಲಿ ಹಾಳೆ ತಟ್ಟೆ ತಯಾರಿಸುತ್ತಿದ್ದ ಘಟಕಗಳು ಉತ್ಪಾದನೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಸಿವೆ. ಮನೆಗಳಲ್ಲೇ ಸಣ್ಣ ಪ್ರಮಾಣದಲ್ಲಿ ತಯಾರಿಸುತ್ತಿದ್ದವರು ಬೇಡಿಕೆ ಇಲ್ಲದೆ ತಟ್ಟೆ, ಲೋಟಗಳ ತಯಾರಿಕೆಯನ್ನು ಸ್ಥಗಿತಗೊಳಿಸಿದ್ದಾರೆ. ಸಾವಿರಾರು ಕುಶಲ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗುವ ಆತಂಕ ಬಂದೊದಗಿದೆ. ಅಡಿಕೆ ಬೆಳೆಗಾರರು ಕೂಡ ಹಾಳೆಗಳನ್ನು ಮಾರಾಟ ಮಾಡಿ ಆದಾಯಗಳಿಸುತ್ತಿದ್ದರು. ಅದಕ್ಕೂ ಈಗ ಕುತ್ತು ಬಂದಿದೆ.

ಅಡಿಕೆ ಹಾಳೆಯ ತಟ್ಟೆ, ಲೋಟಗಳಿಗೆ ಅಮೆರಿಕ ನಿರ್ಬಂಧ ಹೇರಿದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಅವುಗಳಿಗೆ ಬೇಡಿಕೆ ಕುಸಿದಿದೆ. ಉತ್ಪಾದನಾ ಘಟಕಗಳಲ್ಲಿ ಕೆಲವು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಹರಿಹರ ಹಾಗೂ ದಾವಣಗೆರೆ ತಾಲ್ಲೂಕಿನಲ್ಲಿ ಅಡಿಕೆ ಪ್ರಮುಖ ತೋಟಗಾರಿಕಾ ಬೆಳೆ. ಚನ್ನಗಿರಿ ಹಾಗೂ ದಾವಣಗೆರೆಯಲ್ಲಿ ಅಡಿಕೆ ಹಾಳೆಯಿಂದ ತಟ್ಟೆ, ಲೋಟಗಳನ್ನು ಉತ್ಪಾದಿಸುವ ಘಟಕಗಳಿವೆ. ಇಲ್ಲಿನ ಉತ್ಪನ್ನಗಳು ಸ್ಥಳೀಯ ಮಾರುಕಟ್ಟೆಯನ್ನು ಅವಲಂಬಿಸಿವೆ. ರಪ್ಪಿನ ಮೇಲೆ ನಿರ್ಬಂಧ ವಿಧಿಸುತ್ತಿದ್ದಂತೆ ಸ್ಥಳೀಯ ಮಾರುಕಟ್ಟೆಗೆ ಪೂರೈಕೆ ಹೆಚ್ಚಾಗಿದ್ದು, ಬೇಡಿಕೆ ಕುಸಿದಿದೆ.

‘ತಮಿಳುನಾಡಿನ ಕೊಯಮತ್ತೂರಿನಿಂದ ₹4.30 ಲಕ್ಷಕ್ಕೆ ಯಂತ್ರ ಖರೀದಿಸಿ ತಂದು ಎರಡು ವರ್ಷಗಳಿಂದ ಅಡಿಕೆ ಹಾಳೆಯ ತಟ್ಟೆ ಮಾಡುತ್ತಿದ್ದೆ. ಇತ್ತೀಚೆಗೆ ಮಾರುಕಟ್ಟೆಯ ಸಮಸ್ಯೆ, ಕಾರ್ಮಿಕರ ಕೊರತೆಯ ಕಾರಣಕ್ಕೆ ಘಟಕವನ್ನು ಸ್ಥಗಿತಗೊಳಿಸಿದ್ದೇನೆ’ ಎನ್ನುತ್ತಾರೆ ಚನ್ನಗಿರಿ ತಾಲ್ಲೂಕಿನ ಮೆದುಗೊಂಡನಹಳ್ಳಿಯ ಲೋಕೇಶ್.

ಕಾರ್ಮಿಕರ ಬದುಕು ಡೋಲಾಯಮಾನ: ಶಿವಮೊಗ್ಗದಲ್ಲೂ ಇದೇ ಸ್ಥಿತಿ. ಜಿಲ್ಲೆಯಲ್ಲಿ ಅಂದಾಜು 2,000 ಅಡಿಕೆ ಹಾಳೆ ತಟ್ಟೆ ತಯಾರಿಕಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಅಮೆರಿಕದ ನಿರ್ಧಾರದಿಂದ ಸಾವಿರಾರು ಕುಟುಂಬಗಳು ಈಗ ಸಂಕಷ್ಟಕ್ಕೆ ಸಿಲುಕಲಿವೆ.

ವಿವಿಧ ದೇಶಗಳಿಗೆ ಶಿವಮೊಗ್ಗದಿಂದಲೇ ಅತಿ ಹೆಚ್ಚು ಅಡಿಕೆ ಹಾಳೆ ತಟ್ಟೆಗಳನ್ನು ರಫ್ತು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಅಂದಾಜು 70,000 ನೇರ ಕಾರ್ಮಿಕರಿದ್ದಾರೆ. ಒಟ್ಟಾರೆ 1 ಲಕ್ಷಕ್ಕೂ ಹೆಚ್ಚು ಮಂದಿ ಈ ವೃತ್ತಿ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರೆಲ್ಲರ ಬದುಕು ಈಗ ಡೋಲಾಯಮಾನವಾಗಿದೆ.

‘ಶಿವಮೊಗ್ಗ, ಭದ್ರಾವತಿ ಹಾಗೂ ಹೊಳೆಹೊನ್ನೂರು ಭಾಗದಿಂದ ದಕ್ಷಿಣ ಭಾರತದ ವಿವಿಧೆಡೆ ಅಡಿಕೆ ಹಾಳೆಯ ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿದೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಕೆಲವರು ತಮಿಳುನಾಡಿನಿಂದ ಲಕ್ಷಾಂತರ ರೂಪಾಯಿ ವೆಚ್ಚದ ಯಂತ್ರಗಳನ್ನು ಖರೀದಿಸಿ ತಂದು ಸಣ್ಣ ಪ್ರಮಾಣದಲ್ಲಿ ಉದ್ದಿಮೆ ಆರಂಭಿಸಿದ್ದಾರೆ. ಅವರ ಬದುಕು ಈಗ ಅಕ್ಷರಶಃ ಬೀದಿಗೆ ಬರುವಂತಾಗಿದೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಶಿವಮೊಗ್ಗ ಅಡಿಕೆ ಹಾಳೆ ತಟ್ಟೆ ತಯಾರಕರ ಮತ್ತು ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕನಸು ಮಂಜುನಾಥ ಆಗ್ರಹಿಸಿದರು.

ಅಡಿಕೆ ಕ್ಯಾನ್ಸ‌ರ್ ಕಾರಕವಲ್ಲ ಎಂಬುದನ್ನು ದೃಢಪಡಿಸುವ ನಿಟ್ಟಿನಲ್ಲಿ ಸಂಶೋಧನೆ ಅಗತ್ಯವೆಂದು ಕ್ಯಾಂಪ್ರೊ ಹಾಗೂ ಅಡಿಕೆ ವಹಿವಾಟು ನಡೆಸುವ ರಾಜ್ಯದ ಇತರ ಸಹಕಾರ ಸಂಸ್ಥೆಗಳು, ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದವು. ಇದರ ಫಲವಾಗಿ ಕೇಂದ್ರ ಸರ್ಕಾರವು ಸಂಶೋಧನಾ ಕಾರ್ಯಕ್ಕೆ ₹9.30 ಕೋಟಿ ಬಿಡುಗಡೆ ಮಾಡಿದ್ದು, ಈ ಸಂಬಂಧ ರೂಪುರೇಷೆ ಸಿದ್ಧಪಡಿಸಲು ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ (ಸಿಪಿಸಿಆರ್‌ಐ) ಮೇ 30ರಂದು ಸಂಘ-ಸಂಸ್ಥೆಗಳು, ರೈತರು, ವಿಜ್ಞಾನಿಗಳ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಅಮೆರಿಕವು ಅಡಿಕೆ ಹಾಳೆ ತಟ್ಟೆ ಆಮದು ಮೇಲೆ ನಿಷೇಧ ಹೇರಿರುವ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಜೊತೆಗೆ ಈ ಬಗ್ಗೆ ಸಂಶೋಧನೆ ನಡೆಸುವಂತೆ ಮನವಿಯನ್ನೂ ಸಲ್ಲಿಸಲಾಗಿದೆ. ಇದಕ್ಕೆ ಸ್ಪಂದಿಸಿರುವ ಸಿಪಿಸಿಆರ್‌ಐ ನಿರ್ದೇಶಕ ಕೆ.ಬಾಲಚಂದ್ರ ಹೆಬ್ಬಾರ್ ಅವರು ಅಡಿಕೆ ಜೊತೆಗೆ ಹಾಳೆ ತಟ್ಟೆಯ ಬಗ್ಗೆಯೂ ಸಂಶೋಧನೆ ನಡೆಸುವುದಾಗಿ ತಿಳಿಸಿದ್ದಾರೆ.

ಅಮೆರಿಕದ ನಿರ್ಧಾರವು ಕರ್ನಾಟಕದ ಅಡಿಕೆ ತಟ್ಟೆ ತಯಾರಿಕಾ ಉದ್ಯಮದ ಮೇಲೆ ಗಂಭೀರವಾದ ಪರಿಣಾಮ ಬೀರಲಿದ್ದು, ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಅಡಿಕೆ ಬೆಳೆಯುವ ಪ್ರದೇಶದ ವಿಜ್ಞಾನಿಗಳು, ಕೃಷಿ ತಜ್ಞರು, ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಣತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನೂ ಬರೆದಿದ್ದಾರೆ. ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಅವರು ಈ ಪತ್ರವನ್ನು ಬರೆದಿದ್ದು, 100 ಮಂದಿ ತಜ್ಞರು ಇದಕ್ಕೆ ಸಹಿ ಹಾಕಿದ್ದಾರೆ.

ಪತ್ರದಲ್ಲಿನ ಮನವಿಗಳು

⦁ ಅಮೆರಿಕ ಹೇರಿರುವ ನಿರ್ಬಂಧ ತೆರವಿಗೆ ರಾಜತಾಂತ್ರಿಕ ಮತ್ತು ನಿಯಂತ್ರಣ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕು.

⦁ಏಕಪಕ್ಷೀಯವಾಗಿ ತೆಗೆದುಕೊಂಡಿರುವ ನಿರ್ಧಾರದ ಸಂಬಂಧ ಅಮೆರಿಕ ಸರ್ಕಾರದಿಂದ ಸ್ಪಷ್ಟನೆಯನ್ನು ಕೇಳಬೇಕು

⦁ಹಾಳೆಗಳ ಉಪ ಉತ್ಪನ್ನಗಳಲ್ಲಿ ಇರಬಹುದಾದ ಅಲ್ಕಲಾಯ್ಡ್ ಗಳ ಸ್ವೀಕಾರಾರ್ಹ ಪ್ರಮಾಣವನ್ನು ವ್ಯಾಖ್ಯಾನಿಸುವಂತೆ ಅಮೆರಿಕವನ್ನು ಒತ್ತಾಯಿಸಬೇಕು

⦁ ಅಮೆರಿಕ ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸುವುದಕ್ಕಾಗಿ ಭಾರತದ ತಯಾರಕರಿಗೆ ತಾಂತ್ರಿಕ, ನಿಯಂತ್ರಣ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ನೆರವು ನೀಡಬೇಕು

⦁ ಅಡಿಕೆ ಸೇವನೆ ಮತ್ತು ಅದರ ಉಪ ಉತ್ಪನ್ನಗಳ ಸುರಕ್ಷತೆಯ ಬಗ್ಗೆ ಕೇಳಿ ಬರುತ್ತಿರುವ ಆರೋಪಗಳನ್ನು ತಳ್ಳಿ ಹಾಕುವುದಕ್ಕಾಗಿ ಕಾಸರಗೋಡಿನಲ್ಲಿರುವ ಸಿಪಿಸಿಆರ್‌ಐ, ಮೈಸೂರಿನಲ್ಲಿರುವ ಸಿಎಫ್‌ಟಿಆರ್‌ಐ ಮತ್ತು ನವದೆಹಲಿಯ ಐಸಿಎಂಆರ್‌ನಂತಹ ಸಂಸ್ಥೆಗಳಿಂದ ವೈಜ್ಞಾನಿಕ ಪರಿಶೀಲನೆ ಮತ್ತು ಹೊಸ ಸಂಶೋಧನೆ ನಡೆಸಲು ಕ್ರಮ ಕೈಗೊಳ್ಳಬೇಕು

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಶಕ್ತಿ ಯೋಜನೆಯಡಿಯಲ್ಲಿ 500ಕೋಟಿ ಉಚಿತ ಪ್ರಯಾಣ ನನಸಾದ ಹಿನ್ನೆಲೆ ಪಜೀರ್ ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಮಹಿಳೆಯರಿಂದ ಆರತಿ

July 18, 2025

ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಜನೋತ್ಸವ ಕಾರ್ಯಕ್ರಮ

July 18, 2025

ಛೋಟಾ ಮಂಗಳೂರು ಲಯನ್ಸ್ ಕ್ಲಬ್ ನ 2025-26ನೇ ಸಾಲಿನ ನೂತನ ಅಧ್ಯಕ್ಷ- ಪದಾಧಿಕಾರಿಗಳ ಪದಗ್ರಹಣ

July 18, 2025

Comments are closed.

ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025
All News

ಶಕ್ತಿ ಯೋಜನೆಯಡಿಯಲ್ಲಿ 500ಕೋಟಿ ಉಚಿತ ಪ್ರಯಾಣ ನನಸಾದ ಹಿನ್ನೆಲೆ ಪಜೀರ್ ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಮಹಿಳೆಯರಿಂದ ಆರತಿ

By UllalaVaniJuly 18, 20250

ಮಂಗಳೂರು ವಿಧಾನ ಸಭಾ ಕ್ಷೇತ್ರದ ಪಂಚ ಗ್ಯಾರೆಂಟಿ ಉಳ್ಳಾಲ ಸಮಿತಿಯ ಅಧ್ಯಕ್ಷ ರಫೀಕ್ ಅಂಬ್ಲಮೊಗರು ನೇತೃತ್ವದಲ್ಲಿ ಶಕ್ತಿ ಯೋಜನೆಯಡಿಯಲ್ಲಿ 500ಕೋಟಿ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಜನೋತ್ಸವ ಕಾರ್ಯಕ್ರಮ

July 18, 2025

ಛೋಟಾ ಮಂಗಳೂರು ಲಯನ್ಸ್ ಕ್ಲಬ್ ನ 2025-26ನೇ ಸಾಲಿನ ನೂತನ ಅಧ್ಯಕ್ಷ- ಪದಾಧಿಕಾರಿಗಳ ಪದಗ್ರಹಣ

July 18, 2025

ಮಂಗಳೂರು ವಿವಿಯಲ್ಲಿ ಪ್ರೊ.ಎ.ಎಂ.ಖಾನ್ ಅವರಿಗೆ ಅಭಿನಂದನೆ

July 18, 2025
1 2 3 … 1,530 Next
Automatic YouTube Gallery

ಚೆಂಬುಗುಡ್ಡೆ ಯಲ್ಲಿ ಗುಡ್ಡ ಕುಸಿತ | ತೊಕ್ಕೊಟ್ಟು-ಮಂಗಳೂರು ವಿ.ವಿ ರಸ್ತೆಯಲ್ಲಿ ಏಕಮುಖ ಸಂಚಾರ

ಚೆಂಬುಗುಡ್ಡೆ ಯಲ್ಲಿ ಗುಡ್ಡ ಕುಸಿತ
ತೊಕ್ಕೊಟ್ಟು-ಮಂಗಳೂರು ವಿ.ವಿ ರಸ್ತೆಯಲ್ಲಿ ಏಕಮುಖ ಸಂಚಾರ
#Ullalavani #Thokkottu #Chembugudde
ಚೆಂಬುಗುಡ್ಡೆ ಯಲ್ಲಿ ಗುಡ್ಡ ಕುಸಿತ | ತೊಕ್ಕೊಟ್ಟು-ಮಂಗಳೂರು ವಿ.ವಿ ರಸ್ತೆಯಲ್ಲಿ ಏಕಮುಖ ಸಂಚಾರ
Now Playing
ಚೆಂಬುಗುಡ್ಡೆ ಯಲ್ಲಿ ಗುಡ್ಡ ಕುಸಿತ | ತೊಕ್ಕೊಟ್ಟು-ಮಂಗಳೂರು ವಿ.ವಿ ರಸ್ತೆಯಲ್ಲಿ ಏಕಮುಖ ಸಂಚಾರ
ಚೆಂಬುಗುಡ್ಡೆ ಯಲ್ಲಿ ಗುಡ್ಡ ಕುಸಿತ ತೊಕ್ಕೊಟ್ಟು-ಮಂಗಳೂರು ವಿ.ವಿ ರಸ್ತೆಯಲ್ಲಿ ...
ಚೆಂಬುಗುಡ್ಡೆ ಯಲ್ಲಿ ಗುಡ್ಡ ಕುಸಿತ
ತೊಕ್ಕೊಟ್ಟು-ಮಂಗಳೂರು ವಿ.ವಿ ರಸ್ತೆಯಲ್ಲಿ ಏಕಮುಖ ಸಂಚಾರ
#Ullalavani #Thokkottu #Chembugudde
ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೊಲ್ಯ, ಕೊಲ್ಯ ಬೈಪಾಸ್, ಉಚ್ಚಿಲ, ಅಂಬಿಕಾ ರಸ್ತೆ, ಪ್ರದೇಶದಲ್ಲಿ ಕೃತಕ ನೆರೆ
Now Playing
ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೊಲ್ಯ, ಕೊಲ್ಯ ಬೈಪಾಸ್, ಉಚ್ಚಿಲ, ಅಂಬಿಕಾ ರಸ್ತೆ, ಪ್ರದೇಶದಲ್ಲಿ ಕೃತಕ ನೆರೆ
ಉಳ್ಳಾಲ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೊಲ್ಯ, ಕೊಲ್ಯ ಬೈಪಾಸ್,ಕುದ್ರು, ...
ಉಳ್ಳಾಲ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೊಲ್ಯ, ಕೊಲ್ಯ ಬೈಪಾಸ್,ಕುದ್ರು, ಕೊಲ್ಲಂಗರೆ, ಉಚ್ಚಿಲ ಅಂಬಿಕಾ ರಸ್ತೆ, ಪ್ರದೇಶದಲ್ಲಿ ಕೃತಕ ನೆರೆ
#Ullalavani #Ullala #Someshwara #Kolya #Rain #Flood
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d