ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಚೆಂಬುಗುಡ್ಡೆ: ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿರುವ ಬಗ್ಗೆ ಹಿಂದು ಸಂಘಟನೆ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಚೆಂಬುಗುಡ್ಡೆ ಕಸಾಯಿಖಾನೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು 2 ಸತ್ತುಹೋದ ಮತ್ತು 11 ಜೀವಂತ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದು, 3 ಆರೋಪಿಗಳು ಪರಾರಿಯಾಗಿದ್ದಾರೆ. ಏಳು ತಿಂಗಳ ಅವಧಿಯಲ್ಲಿ ಇದೇ ಕಸಾಯಿಖಾನೆಗೆ ಪೊಲೀಸರು ನಡೆಸಿದ ಮೂರನೇ ದಾಳಿ ಇದಾಗಿದೆ.
ಆರೋಪಿಗಳಾದ ಚೆಂಬುಗುಡ್ಡೆ ಕಸಾಯಿಖಾನೆ ನಡೆಸುತ್ತಿರುವ ಸಹೋದರರಾದ ಎಂ.ಸಿ ಬಾವಾ, ಎಂ.ಸಿ.ಖಾದರ್ ಮತ್ತು ಉಳ್ಳಾಲದ ಮಿಲ್ಲತ್‍ನಗರ ನಿವಾಸಿ ಇಮ್ತಿಯಾಝ್ ಪರಾರಿಯಾಗಿದ್ದಾರೆ. ಮಂಗಳೂರಿನಿಂದ ಚೆಂಬುಗುಡ್ಡೆ ಕಸಾಯಿಖಾನೆಗೆ ಪಿಕಪ್ ವಾಹನದಲ್ಲಿ ಜಾನುವಾರು ಸಾಗಾಟ ನಡೆಸುತ್ತಿದ್ದ ಮಾಹಿತಿಯರಿತ ಕುತ್ತಾರು ಬಜರಂಗದಳದ ಕಾರ್ಯಕರ್ತರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ದಾಳಿ ನಡೆಸುವ ಸಂದರ್ಭ ಆರೋಪಿಗಳು ಪರಾರಿಯಾಗಿದ್ದು, ಒಂದೇ ಪಿಕಪ್ ವಾಹನದಲ್ಲಿ ತುಂಬಿಸಲಾಗಿದ್ದ 2 ಸತ್ತುಬಿದ್ದ ಮತ್ತು 11 ಜೀವಂತ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
4 ನೇ ದಾಳಿ:
ಕಳೆದ ಏಳು ತಿಂಗಳ ಅವಧಿಯಲ್ಲಿ ಉಳ್ಳಾಲ ಪೊಲೀಸರು ನಡೆಸಿರುವ ನಾಲ್ಕನೇ ದಾಳಿ ಇದಾಗಿದೆ. ಪ್ರತಿಬಾರಿಯೂ ಆರೋಪಿಗಳು ಪರಾರಿಯಾಗುತ್ತಿದ್ದು, ಪೊಲೀಸರು ಹಲವು ಜಾನುವಾರು ಮತ್ತು ಕ್ವಿಂಟಾಲ್ ಗಟ್ಟಲೆ ಮಾಂಸವನ್ನು ವಶಪಡಿಸಿಕೊಂಡಿದ್ದರು.




