ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಕಳೆದ ಒಂದು ವರ್ಷದಲ್ಲಿ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಕ್ರಮ ಮರಳು ಗಾರಿಕೆ ಹಾಗೂ ಕಳ್ಳತನ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಹಲವಾರು ಭಾರಿ ಡಿವೈಎಫ್‍ಐ ವತಿಯಿಂದ ಮನವಿ ನೀಡಲಾಗುತ್ತಿದ್ದರೂ ಪೊಲೀಸರು ಯಾವುದೇ ರೀತಿಯ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪಾವೂರು ಗ್ರಾಮದ ಉಳಿಯ ಎಂಬಗ ಪ್ರದೇಶದಲ್ಲಿ ಸುಮಾರು 40 ಮನೆಗಳು ಇದ್ದು ಅಕ್ರಮ ಮರಳುಗಾರಿಕೆಯಿಂದ ಮನೆಗಳು ಕುಸಿದು ಬೀಳುವ ಸ್ಥಿತಿಗೆ ತಲುಪಿದೆ ಎಂದು ಮುಡಿಪು ಡಿವೈಎಫ್‍ಐನ ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್ ಅವರು ಹೇಳಿದರು.
ಅವರು ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕಳ್ಳತನ, ಅಪರಾದ ಚಟುವಟಿಕೆಗಳು ಮಾತ್ರವಲ್ಲದೆ ಅಕ್ರಮ ಮರಳುಗಾರಿಕೆಯ ವಿರುದ್ದ ಮತ್ತು ಕೊಣಾಜೆ ಠಾಣೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸುವಂತೆ ಒತ್ತಾಯಿಸಿ ಡಿವೈಎಫ್‍ಐ ವತಿಯಿಂದ ಕೊಣಾಜೆ ಠಾಣೆಯೆದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಉಳ್ಳಾಲ ವ್ಯಾಪ್ತಿಯಲ್ಲ ಕೇವಲ ಒಂದೇ ಪೊಲೀಸ್ ಠಾಣೆ ಇದ್ದಾಗ ಸಾರ್ವಜನಿಕರ ಹೋರಾಟದ ಫಲವಾಗಿ ಕೊಣಾಜೆ ವ್ಯಾಪ್ತಿಯಲ್ಲೂ ಪೊಲೀಸ್ ಠಾಣೆ ನಿರ್ಮಾಣವಾಯಿತು. ಆದರೆ ಇಲ್ಲಿ ಅಪರಾಧ ಚಟುವಟಿಕೆಗಳು ಮಿತಿಮೀರಿ ನಡೆಯುತ್ತಿರುವ ಪರಿಣಾಮ ಮತ್ತೆ ಹೋರಾಟ ಮಾಡಬೇಕಾಗಿ ಬಂದಿದೆ. ಆದ್ದರಿಂದ ಹೋರಾಟವನ್ನು ಕಡೆಗಣಿಸಬೇಡಿ, ಕೂಡಲೇ ಅಕ್ರಮಗಳಿಗೆ ಕಡಿವಾಣ ಹಾಕಿ ಎಂದು ಎಚ್ಚರಿಸಿದರು.
ಡಿವೈಎಫ್‍ಐ ಜಿಲ್ಲಾ ಉಪಾಧ್ಯಕ್ಷ ಬಿ.Pಕೆ.ಇಂತಿಯಾಜ್ ಮಾತನಾಡಿ ಕಳ್ಳತನ, ಸರಣಿ ಕಳ್ಳತನ, ಚೂರಿ ಇರಿತ ಪ್ರಕರಣ ಮಾತ್ರವಲ್ಲದೆ ಅಕ್ರಮ ಮರಳುಗಾರಿಕೆಯಂತಹ ಚಟುವಟಿಕೆಗಳು ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಅವ್ಯಾವಹತವಾಗಿ ನಡೆಯುತ್ತಿದ್ದು ಇದರಿಂದ ಕೊಣಾಜೆ ಠಾಣಾ ವ್ಯಾಪ್ತಿ ಕಳ್ಳರು ಹಾಗೂ ಹಗಲು ಕಳ್ಳರಿಗೆ ಸುರಕ್ಷಿತ ತಾಣವಾಗಿದೆ ಎಂದು ಆರೋಪಿಸಿದರು.
ಇಲ್ಲಿಯ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಹಾಗೂ ಅಪರಾಧ ಚಟುವಟಿಕೆಗಳಿಗೆ ಪೊಲೀಸರು ಕಡಿವಾಣ ಹಾಕದ ಹಿನ್ನಲೆಯಲ್ಲಿ ಇಲ್ಲಿ ಅಪರಾಧ ಚಟುವಟಿಕೆಗಳು ಮಿತಿಮೀರಿ ಬೆಳೆಯುತ್ತಿದೆ. ಮಾತ್ರವಲ್ಲದೆ ಅಕ್ರಮ ಮರಳು ಸಾಗಾಟದಂತಹ ಪ್ರಕರಣಗಳು ಹರೇಕಳ ಪಾವೂರು ವ್ಯಾಪ್ತಿಯಲ್ಲಿ ಮಿತಿಮೀರಿ ನಡೆದು ಹೊರರಾಜ್ಯಗಳಿಗೆ ಸರಬರಾಜು ಆಗುತ್ತಿದೆ. ಸ್ಥಳೀಯರು ಅಲ್ಲಲ್ಲಿ ಲಾರಿ ತಡೆದು ಪ್ರತಿಭಟನೆ ನಡೆಸಿದರೂ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.
ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಇರುವ ನೀತಿ ನಿಯಮಗಳನ್ನು ಗಾಳಿಗೆ ತೂರಿ ದೊಡ್ಡ ದೊಡ್ಡ ಯಂತ್ರಗಳ ಮೂಲಕ ಮರಳನ್ನು ತೆಗೆಯಲಾಗುತ್ತಿದೆ. ಅಲ್ಲದೆ ಬೃಹತ್ ವಾಹನಗಳು , 10 ಚಕ್ರಗಳ ಲಾರಿಗಳು ಈ ಭಾಗದಲ್ಲಿ ಸಂಚರಿಸುವಾಗ ಬಳ್ಳಾರಿಯ ಗಣಿಗಾರಿಕೆಯ ನೆನಪಾಗುತ್ತದೆ.
ಆದ್ದರಿಂದ ಕೊಣಾಜೆ ಠಾಣೆಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಹಾಗೂ ಅಪರಾದ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಗೂ ಮುನ್ನ ಅಸೈಗೋಳಿ ಜಂಕ್ಷನ್ ನಿಂದ ಕೊಣಾಜೆ ಠಾಣೆಯವರೆಗೆ ಡಿವೈಎಫ್‍ಐ ವತಿಯಿಂದ ಪ್ರತಿಭಟನಾ ಜಾಥಾ ನಡೆಯಿತು.
ಪ್ರತಿಭಟನೆಯಲ್ಲಿ ಡಿವೈಎಫ್‍ಐ ಮುಖಂಡರುಗಳಾದ ನಿತಿನ್ ಕುತ್ತಾರ್, ಅಶೋಕ್, ಕೃಷ್ಣಪ್ಪ ಸಾಲಿಯಾನ್, ಕಟ್ಟಡ ಕಾರ್ಮಿಕ ಸಮಿತಿಯ ಜನಾರ್ದನ ಕುತ್ತಾರ್, ಜಯಂತ್ ನಾಯಕ್, ರೋಹಿದಾಸ್, ರಫೀಕ್ ಹರೇಕಳ ಮುಂತಾದವರು ಉಪಸ್ಥಿತದರಿದ್ದರು.
















