ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಕಣ್ಣಿನಲ್ಲಿ ಪೊರೆ ದೀರ್ಘಾವಧಿಯಲ್ಲಿ ಬಾಧಿಸುವಂತಹದ್ದು, ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದಾಗ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಿಲ್ಲ. ಈ ಬಗೆಗಿನ ಅರವು ಸಾರ್ವಜನಿಕರಲ್ಲಿ ಮೂಡಿಸಬೇಕಿದೆ ಎಂದು ಕೆಎಂಸಿ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯದ ಕಣ್ಣು ವಿಭಾಗದ ಮುಖ್ಯಸ್ಥ ಡಾ.ಸಿ.ಆರ್. ಕಾಮತ್ ಹೇಳಿದರು.
ಅವರು ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇದರ ವತಿಯಿಂದ ಕಣಚೂರು ಕ್ಯಾಂಪಸ್ಸಿನಲ್ಲಿ ಬುಧವಾರ ನಡೆದ ಕಣ್ಣಿನ ಉಚಿತ ತಪಾಸಣೆ ಹಾಗೂ ಕಣ್ಣಿನಪೊರೆ ಶಸ್ತ್ರಚಿಕಿತ್ಸೆ ಕುರಿತ ಜಾಗೃತಿ ಮಾಸವನ್ನು ಉದ್ಘಾಟಿಸಿದರು.
ರೈತರಲ್ಲಿ ಹೆಚ್ಚಾಗಿ ಕಣ್ಣಿನಲ್ಲಿ ಪೊರೆ ಕಾಣಿಸುವ ಪ್ರಕರಣಗಳು ಜಾಸ್ತಿ. ಆದರೆ ಆರಂಭದಲ್ಲಿ ದೋಷ ಕಂಡರೂ ಚಿಕಿತ್ಸೆಗೆ ಬಾರದೇ ಕೊನೆಯ ಹಂತದಲ್ಲಿ ಬಂದು ವೈದ್ಯರು ಸೂಚಿಸುವ ಶಸ್ತ್ರಚಿಕಿತ್ಸೆಯನ್ನು ಧಿಕ್ಕರಿಸುತ್ತಾರೆ. ಇದರಿಂದ ಅಂಧತ್ವಕ್ಕೆ ಜಾರುವ ಸಾಧ್ಯತೆಗಳೇ ಹೆಚ್ಚು. ಶಸ್ತ್ರಚಿಕಿತ್ಸೆಯ ಬದಲು ಪ್ರಾಥಮಿಕವಾಗಿ ಔಷಧಿ ನೀಡಿದಲ್ಲಿ ಸಂಪೂರ್ಣ ನಿವಾರಣೆ ಸಾಧ್ಯ ಹಾಗೂ ಶಸ್ತ್ರಚಿಕಿತ್ಸೆಯನ್ನು ನಡೆಸುವ ಸಂದರ್ಭವೂ ಸೃಷ್ಟಿಯಾಗುವುದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಯು.ಕೆ.ಮೋನು ವಹಿಸಿ ನೂತನ ಆಧುನಿಕ ತಂತ್ರಜ್ಞಾನದ ಕಣ್ಣಿನ ಚಿಕಿತ್ಸೆಯ ಯಂತ್ರವನ್ನು ಆಸ್ಪತ್ರೆಯಲ್ಲಿ ಉದ್ಘಾಟಿಸಲಾಗಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಉಪಯೋಗಿಸಬಹುದು ಎಂದರು.
ಜಿಲ್ಲಾ ಕುಷ್ಠರೋಗ ನಿವಾರಣೆ ಮತ್ತು ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ. ರತ್ನಾಕರ್ ಮಾಹಿತಿ ನೀಡಿದರು. ಕಣಚೂರು ಆಸ್ಪತ್ರೆಯ ಕಣ್ಣಿನ ವಿಭಾಗ ಮುಖ್ಯಸ್ಥ ಡಾ.ಬದ್ರೀನಾಥ್, ಆಸ್ಪತ್ರೆ ಡೀನ್ ಡಾ.ಖಾಜಾ ನಾಸೀರುದ್ಧೀನ್ ಉಪಸ್ಥಿತರಿದ್ದರು.
ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಡಾ.ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಶಿಫಾಲಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ವಿಘ್ನೇಶ್ ಶೆಣೈ ವಂದಿಸಿದರು.




