ತೊಕ್ಕೊಟ್ಟು: ತನ್ನ ಸಹೋದರಿಯ ಪುತ್ರಿ ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವದಂಪತಿ ಸೌದಿ ಅರೆಬಿಯಾ ತೆರಳುವವರಿದ್ದರು. ಅವರ ಬೀಳ್ಕೊಡುಗೆಗಾಗಿ ಚಿಕ್ಕಮ್ಮ ರೆಹಮತ್ (47) ಪತಿ ರಶೀದ್ ಜೊತೆಗೆ ಸ್ಕೂಟರಿನಲ್ಲಿ ತೆರಳುವ ಸಂದರ್ಭ ಯಮರೂಪಿಯಾದ ತೊಕ್ಕೊಟ್ಟು-ಕೊಣಾಜೆ ರಸ್ತೆಯ ಸೇವಾಸೌಧ ಎದುರುಗಡೆಯ ಹೊಂಡ ರೆಹಮತ್ ಅವರನ್ನೇ ಬಲಿಪಡೆದುಕೊಂಡಿದೆ.

ತೊಕ್ಕೊಟ್ಟು ವಿನಲ್ಲಿ ಟ್ಯಾಂಕರ್ ಅಡಿಗೆ ಬಿದ್ದು ಸಾವನ್ನಪ್ಪಿದ ರೆಹಮತ್ ಅವರ ಸಹೋದರಿಯ ಪುತ್ರಿಗೆ ಆರು ತಿಂಗಳ ಹಿಂದೆ ವಿವಾಹವಾಗಿತ್ತು. ಇಂದು ಸಂಜೆ ವಿಮಾನದಲ್ಲಿ ನವದಂಪತಿ ಸೌದಿ ಅರೆಬಿಯಾ ತೆರಳುವವರಿದ್ದರು. ಅದಕ್ಕಾಗಿ ರಶೀದ್-ರೆಹಮತ್ ದಂಪತಿ ನವದಂಪತಿ ಬೀಳ್ಕೊಡುಗೆಗಾಗಿ ಬಜ್ಪೆ ವಿಮಾನ ನಿಲ್ದಾಣಕ್ಕೆ ತೆರಳುವ ಸಂದರ್ಭ ಮಾರ್ಗಮಧ್ಯೆ ದುರಂತ ಸಂಭವಿಸಿದೆ. ದೇರಳಕಟ್ಟೆ ಕಡೆಯಿಂದ ಸ್ಕೂಟರ್ ನಲ್ಲಿ ತೊಕ್ಕೊಟ್ಟು ಕಡೆಗೆ ದಂಪತಿ ತೆರಳುತ್ತಿದ್ದ ಸಂದರ್ಭ ರಸ್ತೆ ಹೊಂಡ ತಪ್ಪಿಸುವ ಹಂತದಲ್ಲಿ ಸ್ಕೂಟರ್ ಆಯತಪ್ಪಿ ರಸ್ತೆಗೆ ಉರುಳಿಬಿದ್ದಿದೆ. ಈ ಸಂದರ್ಭ ಹಿಂಬದಿಯಲ್ಲಿದ್ದ ಟ್ಯಾಂಕರ್ ಲಾರಿ ರಸ್ತೆಗೆ ಬಿದ್ದಿದ್ದ ರೆಹಮತ್ ಅವರ ಮೇಲೆ ಚಲಿಸಿದೆ. ಪರಿಣಾಮವಾಗಿ ರೆಹಮತ್ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
108 ಆಂಬ್ಯುಲೆನ್ಸ್ ಅವ್ಯವಸ್ಥೆ!
ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆ ರೆಹಮತ್ ಅವರ ಮೃತದೇಹ ಅರ್ಧ ಗಂಟೆಗೂ ಅಧಿಕ ಕಾಲ ರಸ್ತೆಯಲ್ಲೇ ಉಳಿದಿತ್ತು. 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ಹಲವು ನಿಮಿಷಗಳ ನಂತರ ಸ್ಥಳಕ್ಕೆ ಬಂತಾದರೂ, ತಾಂತ್ರಿಕ ಕಾರಣದಿಂದ ಮೃತದೇಹ ಕೊಂಡೊಯ್ಯಲು ಸಾಧ್ಯವಿಲ್ಲವೆಂದು ಆಂಬ್ಯುಲೆನ್ಸ್ ವಾಪಸ್ಸಾಗಿದೆ. ನಂತರ ಬೇರೆ ಆಂಬ್ಯುಲೆನ್ಸ್ ಅರ್ಧ ಗಂಟೆ ಬಳಿಕ ಬಂದ ನಂತರವೇ ಮೃತದೇಹವನ್ನು ಸ್ಥಳಾಂತರಿಸಲಾಗಿದೆ.


ಪೊಲೀಸ್ -ಉದ್ರಿಕ್ತರ ಗುಂಪು ಮಾತಿನ ಚಕಮಕಿ!
ಘಟನೆ ನಡೆಯುತ್ತಿದ್ದಂತೆ ಆಂಬ್ಯುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪು ಸ್ಥಳದಲ್ಲಿ ಜಮಾಯಿಸಿತ್ತು. ಈ ವೇಳೆ ರಸ್ತೆ ಹೊಂಡಗಳಿAದ ಅಪಘಾತ ನಡೆದಿರುವುದನ್ನು ಖಚಿತಪಡಿಸಿಕೊಂಡ ಗುಂಪು ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನು ಇಟ್ಟು ತೊಕ್ಕೊಟ್ಟು-ಕೊಣಾಜೆ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಿದರು. ಇದರಿಂದ ಗಂಟೆಗಳ ಕಾಲ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು. ಉಳ್ಳಾಲ ಠಾಣೆಯ ಠಾಣಾಧಿಕಾರಿ ಹೆಚ್.ಎನ್.ಬಾಲಕೃಷ್ಣ ಮತ್ತು ಸಿಬ್ಬಂದಿ ಧರ್ಮ ಅವರು ಸ್ಥಳಕ್ಕಾಗಮಿಸುತ್ತಿದ್ದಂತೆ ಉದ್ರಿಕ್ತ ಗುಂಪು ಪೊಲೀಸರ ಮೇಲೆಯೇ ಮುಗಿಬಿದ್ದಿದ್ದಾರೆ. ಠಾಣಾಧಿಕಾರಿಗಳು ಕಲ್ಲುಗಳನ್ನು ತೆಗೆಯುವಂತೆ ಕೇಳಿಕೊಂಡರೂ ಗುಂಪು, ಒಂದೋ ರಸ್ತೆ ದುರಸ್ತಿ ಮಾಡಲಿ ಅಷ್ಟರವರೆಗೆ ವಾಹನ ಸಂಚಾರಕ್ಕೆ ಅವಕಾಶವನ್ನೇ ಕೊಡುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಪೊಲೀಸ್-ಸಾರ್ವಜನಿಕರ ನಡುವೆ ಮಾತಿನ ಚಕಮಕಿ ತಾರಕಕ್ಕೇರುತ್ತಿದ್ದಂತೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಅವರನ್ನು ವಾಮಾಗೋಚರವಾಗಿ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು ಹೊಂಡ ಇರುವ ಪ್ರದೇಶದಲ್ಲಿಯೇ ವಾಹನಗಳನ್ನು ತಡೆದು ದಂಡ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್, ಸಂಚಾರಿ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ಎಸಿಪಿ ಧನ್ಯಾ ನಾಯಕ್, ಉಳ್ಳಾಲ ಠಾಣಾಧಿಕಾರಿ ಬಾಲಕೃಷ್ಣ ಹೆಚ್.ಎನ್ ಭೇಟಿ ನೀಡಿ ಉದ್ರಿಕ್ತರನ್ನು ಸಮಾಧಾನಿಸಿದರು.



