ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಬೀಡಿ ಉದ್ಯಮವನ್ನು ನಿಷೇಧ ಮಾಡುವ ಮೂಲಕ ದೇಶದ 4 ಲಕ್ಷ ಬೀಡಿ ಕಾರ್ಮಿಕರು ಹಾಗೂ ಕ್ಷೇತ್ರದಲ್ಲಿ 1000ಕ್ಕೂ ಅಧಿಕ ಬಡ ಕುಟುಂಬಗಳು ಬೀದಿ ಪಾಲಾಗಲಿದೆ ಎಂದು ಮಂಗಳೂರು ದಕ್ಷಿಣ ವಲಯ ಸಿಪಿಐಎಂ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ.
ದೇರಳಕಟ್ಟೆಯಲ್ಲಿ ಸಿಪಿಐಎಂ ಮುನ್ನೂರು ಲೋಕಲ್ ಸಮಿತಿ ನೇತೃತ್ವದಲ್ಲಿ ನಿನ್ನೆ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನವಿರೋಧಿಯಾಗಿ ಕಾರ್ಯಚರಿಸುತ್ತಿದೆ. ಬೀಡಿ ಕಾರ್ಮಿಕರ ಮಕ್ಕಳಿಗೆ ದೊರೆಯುವ ಸ್ಕಾಲರ್‍ಶಿಪ್ ಹಣಕ್ಕೂ ಕೇಂದ್ರ ಸರಕಾರ ಕತ್ತರಿ ಹಾಕಲಿದೆ. ಇದರಿಂದ ಬಡ ಕಾರ್ಮಿಕರ ಮಕ್ಕಳು ಅವಿದ್ಯಾವಂತರಾಗಲಿದ್ದಾರೆ. ರಾಜ್ಯದ ಆರೋಗ್ಯ ಸಚಿವರ ಕ್ಷೇತ್ರ ಅನಾರೋಗ್ಯದಿಂದ ತುಂಬಿದೆ. ಕ್ಯಾಂಟೀನಿನಲ್ಲಿ ಚಹಾ ಕುಡಿಯೋದು, ಅಪಘಾತವಾದವರನ್ನು ತನ್ನ ಕಾರಿನಲ್ಲಿ ಹಾಕಿ , ತಾನು ರಿಕ್ಷಾದಲ್ಲಿ ಹೋಗಿ ಮಾಧ್ಯಮದವರಿಂದ ಪ್ರಚಾರ ಪಡೆಯುವುದರಲ್ಲೇ ಬ್ಯುಸಿಯಾಗಿರುವ ಅವರು ಜನರ ಸಂಕಷ್ಟಗಳಿಗೆ ಸ್ಪಂಧನೆ ನೀಡುತ್ತಿಲ್ಲ. ಜಿಲ್ಲೆಯಾದ್ಯಂತ ಡೆಂಗ್ಯು, ಚಿಕೂನ್ ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳಿಂದ ಜನ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲು ವೈಜ್ಞಾನಿಕವಾಗಿ ಚಿಂತಿಸುವ ಬದಲು, ಅವೈಜ್ಞಾನಿಕ ಮಾದರಿಗಳನ್ನು ಜಾರಿಗೆ ತರುವ ಮೂಲಕ ಜನರನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡುತ್ತಿದ್ದಾರೆ. ಕೋಟೆಕಾರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೆ ಏರಿಸಿದ ಬಳಿಕ ಅಲ್ಲಿನ ಜನರ ಸಮಸ್ಯೆಯನ್ನು ಕೇಳುವವರಿಲ್ಲ. ಚರಂಡಿ, ತ್ಯಾಜ್ಯ ವಿಲೇವಾರಿ ಇಡೀ ಗ್ರಾಮದಲ್ಲಿ ಅವ್ಯವಸ್ಥೆಯಿಂದ ಕೂಡಿದೆ. ಈ ಬಗ್ಗೆ ಶಾಸಕರು ಮುತುವರ್ಜಿ ವಹಿಸದೇ ಇದ್ದಲ್ಲಿ ಕೋಟೆಕಾರು ಪಂಚಾಯಿತಿಗೆ ನುಗ್ಗುವ ಮೂಲಕ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದರು.
ಜಿಲ್ಲಾ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ, ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಮುನ್ನೂರು ಲೋಕಲ್ ಸಮಿತಿ ಕಾರ್ಯದರ್ಶಿ ಯು.ಜಯಂತ್ ನಾಯ್ಕ್, ಉಳ್ಳಾಲ ಪುರಸಭೆಯ ವ್ಯಾಪ್ತಿಯ ಕಾರ್ಯದರ್ಶಿ ಪದ್ಮಾವತಿ. ಯಸ್ .ಶೆಟ್ಟಿ, ವಲಯ ಸಮಿತಿ ಸದಸ್ಯರಾದ ವಿಶ್ವನಾಥ ತೇವುಲ, ಮಹಾಬಲ.ಟಿ.ದೆಪ್ಪೆಲಿಮಾರ್, ದುಗ್ಗಪ್ಪ ಪೂಜಾರಿ, ರಫೀಕ್ ಹರೇಕಳ, ಲೋಕಲ್ ಸಮಿತಿ ಸದಸ್ಯರಾದ ವಿಶ್ವನಾಥ್ ಪಾವೂರು, ಶೇಖರ್, ಜನಾರ್ದನ.ಟಿ ಉಪಸ್ಥಿತರಿದ್ದರು.


















