ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಹೋಟೆಲ್ ಬಳಿ ಯುವತಿಯೊಬ್ಬಳ ಮೇಲೆ ಯುವಕರ ಗುಂಪೊಂದು ದೌರ್ಜನ್ಯ ಎಸಗಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಯುವತಿಯ ಕೆನ್ನೆಗೆ ಬಾರಿಸಿ ಯುವಕರ ತಂಡದಿಂದ ಪುಂಡಾಟದ ಆರೋಪ ವ್ಯಕ್ತವಾಗಿದೆ.





ಯುವತಿ ದೂರು ಕೊಟ್ಟರೂ ಕ್ರಮ ಕೈಗೊಳ್ಳದೇ ಮಂಗಳೂರು ಪೊಲೀಸರು ಪ್ರಭಾವಕ್ಕೆ ಒಳಗಾದ್ರಾ ಎಂಬ ಅನುಮಾನವನ್ನು ಯುವತಿ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಫುಡ್ ಲ್ಯಾಂಡ್ ಹೋಟೆಲ್ ಬಳಿ ಯುವತಿಯ ಮೈ ಕೈ ಮುಟ್ಟಿ ಕೆನ್ನೆಗೆ ಬಾರಿಸಿ ಹಲ್ಲೆ ಆರೋಪ ವ್ಯಕ್ತವಾಗಿದ್ದು, ಸುಮಾರು 10-20 ಜನರಿಂದ ಯುವತಿ ಹಾಗೂ ಕಾರ್ ಡ್ರೈವರ್ ಮೇಲೆ ಹಲ್ಲೆ ಆರೋಪ ಮಾಡಲಾಗಿದೆ. ಆಗಸ್ಟ್ 25 ರಂದು ಲಾಲ್ ಭಾಗ್ ನ ಫುಡ್ ಲ್ಯಾಂಡ್ ಹೋಟೆಲ್ ಗೆ ಆತ್ಮೀಯರೊಂದಿಗೆ ತೆರಳಿದ್ದ ಯುವತಿ ವಾಶ್ ರೂಮ್ ಗೆ ತೆರಳಿದ್ದ ವೇಳೆ ಮಹಿಳೆಯರ ಶೌಚಾಲಯದಲ್ಲಿ ಯುವಕನೊಬ್ಬ ಇದ್ದನಂತೆ. ಬಳಿಕ ಅಲ್ಲಿಂದ ಹೊರ ಬಂದ ಯುವಕರ ಗುಂಪಿನಿಂದ ಅನುಚಿತ ವರ್ತನೆ ಆರೋಪ ಮಾಡಲಾಗಿದೆ. ಈ ಬಗ್ಗೆ ಹೋಟೆಲ್ ಸಿಬ್ಬಂದಿಗೆ ದೂರು ನೀಡಿ ಯುವತಿ ಯುವಕರನ್ನ ಪ್ರಶ್ನಿಸಿದ್ದರೂ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಸ್ಥಳದಿಂದ ತೆರಳಿದ್ದರೆಂದು ಯುವತಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ. ಇದಾದ ಬೆನ್ನಲ್ಲೇ ಪಾರ್ಕಿಂಗ್ ಬಳಿ ಯುವತಿಯ ಕಾರಿನ ಹಿಂಭಾಗ ಬೈಕ್ ಒಂದನ್ನ ಅಡ್ಡಲಾಗಿರಿಸಿದ್ದ ಯುವಕನ ಕಾರಿಗೆ ಹಿಂದೆ ತೆಗೆಯುವಾಗ ಬೈಕ್ ಗೆ ತಾಗಿದ್ದು, ಈ ಹಿನ್ನಲೆ ಯುವತಿಯಿದ್ದ ಕಾರ್ ಡ್ರೈವರ್ ನೊಂದಿಗೆ ಬೈಕ್ ನಲ್ಲಿದ್ದ ಯುವಕನ ರಂಪಾಟ ಮಾಡಿದ್ದಾನೆ ಎಂದು ದೂರಿದ್ದಾಳೆ. ಏಕಾಏಕಿ ಸ್ಥಳದಲ್ಲಿ ಜಮಾಯಿಸಿದ ಸುಮಾರು 20ಕ್ಕೂ ಅಧಿಕ ಯುವಕರ ಗುಂಪು ಪ್ರಶ್ನಿಸಿದ ಯುವತಿಯ ಮೇಲೂ ಹಲ್ಲೆ ನಡೆಸಿ ಅನುಚಿತ ವರ್ತನೆ ಮಾಡಿದ್ದು, ಯುವತಿಯ ಮೈಗೆ ಕೈ ಹಾಕಿ ಹಲ್ಲೆ ಮಾಡಿರೋದಾಗಿ ಯುವತಿ ದೂರಿದ್ದಾಳೆ. ಬಳಿಕ ಯುವತಿಗೆ ಧಮ್ಕಿ ಹಾಕಿ ಜೀವಬೆದರಿಕೆ ಒಡ್ಡಿದ ಆರೋಪ ಕೇಳಿ ಬಂದಿದೆ. ಈ ಕುರಿತು ಅ.25ರಂದೇ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿರೋ ಯುವತಿ, ದೂರು ನೀಡಿ ನಾಲ್ಕು ದಿನ ಕಳೆದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮವಾಗಿಲ್ಲ ಎಂದು ದೂರಿದ್ದಾರೆ. ಪಾರ್ಕಿಂಗ್ ಪ್ರದೇಶದ ಸಿಸಿ ಟಿವಿ ದೃಶ್ಯವೂ ಇಲ್ಲವೆಂದು ಹೊಟೇಲ್ ಆಡಳಿತದ ನಿರ್ಲಕ್ಷ್ಯ ತೋರಿದ್ದು, ಸಿಸಿಟಿವಿ ಇಲ್ಲ ಎಂದು ಪೊಲೀಸರು ಸಬೂಬು ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಪ್ರಕರಣದಲ್ಲಿ ಪ್ರಭಾವಿಗಳು ಶಾಮಿಲಾಗಿರುವ ಬಗ್ಗೆ ಯುವತಿ ಅನುಮಾನ ವ್ಯಕ್ತಪಡಿಸಿದ್ದು, ಈ ಹಿನ್ನಲೆ ಪೊಲೀಸರಿಂದಲೂ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ಮೀನಾಮೇಷ ಆರೋಪ ವ್ಯಕ್ತವಾಗಿದೆ.

