UN networks
ಉಳ್ಳಾಲ: ವಿಶ್ವ ಮಾನ್ಯತೆ ಪಡೆಯುತ್ತಿರುವ ಆಯುರ್ವೇದದಲ್ಲಿ ಪಂಚಕರ್ಮ ಮತ್ತು ಚಾರಸೂತ್ರ ಪದ್ದತಿ ಪ್ರಸಿದ್ಧವಾಗುತ್ತಿದೆ. ಪಿಸ್ತೂಲಕ್ಕಿರುವ ನೋವುರಹಿತ ಚಿಕಿತ್ಸಾ ಪದ್ದತಿ ಆಧುನಿಕ ಚಿಕಿತ್ಸಾ ಪದ್ದತಿಯಲ್ಲೂ ಇಲ್ಲ ಎಂದು ನವದೆಹಲಿಯ ಮೆಡಿಕಲ್ ಅಸ್ಸೆಸ್ಮೆಂಟ್ ಮತ್ತು ರೇಟಿಂಗ್ ಬೋರ್ಡ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಅಧ್ಯಕ್ಷ ರಘುರಾಮ ಭಟ್ಟ ಯು. ಅಭಿಪ್ರಾಯಪಟ್ಟರು.
ಯೇನೆಪೊಯ ಪರಿಗಣಿತ ವಿಶ್ವವಿದ್ಯಾಲಯ ಅಧೀನದ ಯೇನೆಪೊಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಶ್ರಯದಲ್ಲಿ ಪಂಡಿತೌಸ್ ನಲ್ಲಿ ಶನಿವಾರ ನೂತನವಾಗಿ ಆರಂಭಗೊಂಡ ‘ನಿಯಾಶ ಆಯುರ್ವೇದ’ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು.


ಯೇನೆಪೊಯ ವಿವಿ ಆಶ್ರಯದಲ್ಲಿ ಅಗ್ನಿಕರ್ಮ, ಚಾರಕರ್ಮ ಸಹಿತ ಇನ್ನಿತರ ಪದ್ದತಿಯೊಂದಿಗೆ ಆಯುರ್ವೇದ ಆಸ್ಪತ್ರೆ ಆರಂಭಿಸುತ್ತಿರುವುದು ಶ್ಲಾಘನೀಯ. ಯೇನೆಪೊಯ ವಿವಿಯಲ್ಲಿ ಕಲಿಯುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಾವು ಆರಂಭಿಸಬೇಕಾಗಿರುವ ಆಸ್ಪತ್ರೆ ಬಗ್ಗೆ ಅರಿವು ಮೂಡಿಸಲಿದೆ. ನೂತನ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆ ವಿಶ್ವವ್ಯಾಪಿಯಾಗಲಿ ಎಂದು ಹಾರೈಸಿದರು.
ಸಂಗೀತಾ ನಿರ್ದೇಶಕ ಗುರುಕಿರಣ್ ಮಾತನಾಡಿ, ಅಲೋಪಥಿ ಆಧುನಿಕ ಚಿಕಿತ್ಸಾ ಪದ್ದತಿಯಾಗಿದ್ದರೆ ಆಯುರ್ವೇದ ಪುರಾತನ ಹಾಗೂ ಸುದೀರ್ಘ ಚಿಕಿತ್ಸಾ ಪದ್ದತಿಯಾಗಿದೆ. ನಮ್ಮದೇ ನೆಲದ ಚಿಕಿತ್ಸೆ ಇದಾಗಿದ್ದು ಉತ್ತಮ ಪರಿಸರದಲ್ಲಿ ಚಿಕಿತ್ಸೆ ಪಡೆದಾಗ ತಕ್ಷಣ ಪ್ರತಿಫಲ ಸಿಗುತ್ತದೆ. ಈ ನಿಟ್ಟಿನಲ್ಲಿ ಯೇನೆಪೊಯ ವಿವಿ ಉತ್ತಮ ಜಾಗದಲ್ಲಿ ಆಸ್ಪತ್ರೆ ಆರಂಭಿಸಿದೆ ಎಂದು ಶ್ಲಾಘಿಸಿದರು.
ಯೇನೆಪೊಯ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ವೈ.ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಎಸ್ ಡಿಎಂ ಆಯುರ್ವೇದ ಕಾಲೇಜಿನ ಪ್ರೊ.
ಡಾ.ಮುರಳೀಧರ ಶರ್ಮ, ಯೇನೆಪೊಯ ವಿವಿಯ ಉಪಕುಲಪತಿ ಪ್ರೊ.ಬಿ.ಎಚ್. ಶ್ರೀಪತಿ ರಾವ್, ನಿಯಾಶ ಯೂತ್ ಹಾಸ್ಟೆಲ್ ನಿರ್ದೇಶಕ ರಮೇಶ್ ಬೋಳಾರ್ ಮೊದಲಾದವರು ಉಪಸ್ಥಿತರಿದ್ದರು.
ಡಾ.ಗುರುರಾಜ್ ಸ್ವಾಗತಿಸಿದರು. ಡಾ.ವಿದ್ಯಪ್ರಭಾ ವಂದಿಸಿದರು. ಡಾ.ಜೆನಿಟಾ ಕಾರ್ಯಕ್ರಮ ನಿರೂಪಿಸಿದರು.


