UN networks
ಉಳ್ಳಾಲ: ಜಿಲ್ಲೆಯ ಜಲಮಾರ್ಗ, ವಾಯುಮಾರ್ಗ ಹಾಗೂ ರೈಲ್ವೇ ಮಾರ್ಗಕ್ಕೆ ತುಳುನಾಡು ಹೆಸರಿನ ಜೋಡಣೆಯ ಜೊತೆಗೆ ಇಲ್ಲಿನ ದೈವ, ತುಳುನಾಡಿನ ಆದರ್ಶಪ್ರಯರುಗಳ ನಾಮಕಾರಣ ಆಗಬೇಕಾಗಿದೆ. ಕೆದಂಬಾಡಿ ರಾಮೇಗೌಡರ ಪ್ರತಿಮೆಗೆ ತೋರಿದ ಒಲವು ತುಳುನಾಡಿನ ಶ್ರೇಷ್ಠ ವ್ಯಕ್ತಿಗಳಿಗೂ ಸರಕಾರ ತೋರಿಸಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಹೇಳಿದರು.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಪೆರ್ಮನ್ನೂರು ಬಬ್ಬುಕಟ್ಟೆಯ ಚಂದಪ್ಪ ಎಸ್ಟೇಟ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
೨೫ ವರ್ಷಗಳಲ್ಲಿ ತುಳುವರ ಮರದು ಧೋರಣೆಯಿಂದ ಅಬ್ಬಕ್ಕ ಸೌಧದ ನಿರ್ಮಾಣ ಅಸಾಧ್ಯವಾಗಿದೆ. ತುಳು ಅಧಿಕೃತ ಭಾಷೆಯನ್ನಾಗಿಯೂ ಮಾಡಲಾಗಲಿಲ್ಲ. ಅಕಾಡೆಮಿ ಅಧ್ಯಕ್ಷನಾಗುವ ಮುನ್ನ ಹೇಳಿದಂತಹ ಮಾತುಗಳನ್ನು ನೆರವೇರಿಸಲು ಸಾಧ್ಯವಾಗಲಿಲ್ಲ. ಅಧ್ಯಕ್ಷ ಪಟ್ಟ ಸ್ವೀಕರಿಸಿದ ದಿನದಂದೇ ಇಬ್ಬರ ರಾಜೀನಾಮೆ, ಮಾಧ್ಯಮಗಳಲ್ಲಿ ಅನುದಾನ ನುಂಗಿದ ಆರೋಪ ಎಲ್ಲವೂ ಕೇಳಿಬಂತು. ಆದರೆ ನಿಸ್ವಾರ್ಥ, ಪ್ರಾಮಾಣಿಕ ಸೇವೆಯನ್ನು ನಡೆಸಿದ ವಿಶ್ವಾಸ ಇದೆ. ಅಬ್ಬಕ್ಕ ಕುದುರೆಗೆ ಮಾತ್ರ ಸೀಮಿತವಾಗಿರದೆ ದೋಣಿಯಲ್ಲಿ ಖಡ್ಗ ಹಿಡಿದುಕೊಂಡ ವೀರರಾಣಿಯ ಪ್ರತಿಮೆಗೆ ಶ್ರಮಿಸೋಣ. ತೊಕ್ಕೊಟ್ಟುವಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ಅಬ್ಬಕ್ಕ ಭವನಕ್ಕೆ ಸರಕಾರ ಕನಿಷ್ಠ ೨೫ ಕೋಟಿ. ರೂಗಳನ್ನು ಶೀಘ್ರವೇ ಬಿಡುಗಡೆಗೊಳಿಸಲಿ. ಮಂಗಳೂರಿನ ಬಂದರು, ವಿಮಾನ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣಕ್ಕೂ ತುಳುನಾಡು ಅನ್ನುವ ಹೆಸರಿನ ಜೊತೆಗೆ ಇಲ್ಲಿನ ವೀರಪುರುಷರ ಹಾಗೂ ದೈವ ಹೆಸರನ್ನು ಇಡುವ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಿ ಎಂದರು.
ಪತ್ರಕರ್ತ ಮನೋಹರ್ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಯಾತ್ರೋ ಅನ್ನುವ ಪೋರ್ಚುಗೀಸ್ ಪ್ರವಾಸಿ ರಾಣಿ ಅಬ್ಬಕ್ಕಳ ಕುರಿತು ಬರೆದಿರುವ ಪುಸ್ತಕದಲ್ಲಿ ಬಹಳಷ್ಟು ವಿಚಾರಗಳಿವೆ. ಉಳ್ಳಾಲದಲ್ಲಿ ಮೂವರು ಅಬ್ಬಕ್ಕೆಯರು ಇದ್ದರು, ಮೂರನೇ ಅಬ್ಬಕ್ಕಳ ಕುರಿತು ಬರೆದಿರುವ ವಿಚಾರಗಳು ಸದ್ಯ ಪ್ರಚಲಿತದಲ್ಲಿದೆ ಎಂದರು.
ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ಇಂದಾಜೆ, , ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಸೌತ್ ಕೆನರಾ ಫೊಟೋಗ್ರಾಫರ್ಸ್ ಎಸೋಸಿಯೇಷನ್ ಅಧ್ಯಕ್ಷ ತನಂಜಯ ರಾವ್, ಉಳ್ಳಾಲ
ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಉಳ್ಳಾಲ ನಗರಸಭೆಯ ನಾಮನಿರ್ದೇಶಿತ ಸದಸ್ಯ ಭಗವಾನ್ ದಾಸ್, ತುಳು ಅಕಾಡೆಮಿ ಸದಸ್ಯ ದಿನೇಶ್ ರೈ ಕಡಬ, ಪ್ರಧಾನ ಕಾರ್ಯದರ್ಶಿ ಧನಲಕ್ಷಿ÷್ಮ ಗಟ್ಟಿ, ದೇವಕಿ ಆರ್. ಉಳ್ಳಾಲ್, ಶಶಿಕಾಂತಿ ಉಳ್ಳಾಲ್ ಹಾಗೂ ಅಳೇಕಲ ಮದನಿ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಆನಂದ ಕೆ. ಅಸೈಗೋಳಿ ಉಪಸ್ಥಿತರಿದ್ದರು.
ಈ ಸಂದರ್ಭ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಹಾಗೂ ಉಳ್ಳಾಲ ನಗರಸಭೆಯ ಮಾಜಿ ಸದಸ್ಯೆ, ಮಿಸೆಸ್ ಕರ್ನಾಟಕ ಶಶಿಕಾಂತಿ ಉಳ್ಳಾಲ್ ಅವರನ್ನು ಸನ್ಮಾನಿಸಲಾಯಿತು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನಕರ್ ಉಳ್ಳಾಲ್ ಸ್ವಾಗತಿಸಿದರು. ಸ್ವಾಗತಾಧ್ಯಕ್ಷ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಳ್ಳಾಲ ಹಳೆಕೋಟೆ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಎಂ.ಕೆ. ಮಂಜನಾಡಿ ಹಾಗೂ ಅಬ್ಬಕ್ಕ ಉತ್ಸವ ಸಮಿತಿಯ ಸದಸ್ಯೆ ಮಲ್ಲಿಕಾ ಭಂಡಾರಿ ಸನ್ಮಾನಿತರ ಪರಿಚಯಿಸಿದರು.
ಭಾರತ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ವಾಸುದೇವ ರಾವ್ ಕಾರ್ಯಕ್ರಮ ನಿರೂಪಿಸಿದರು.
ಹೆಮಿಲ್ಟನ್ ರಸ್ತೆ ಬದಲು ಅಬ್ಬಕ್ಕ ರಸ್ತೆ ಹೆಸರಿಡಿ : ಮಾಜಿ ಶಾಸಕ ಜಯರಾಮ ಶೆಟ್ಟಿ
ರಾಣಿ ಅಬ್ಬಕ್ಕಳ ಯಶೋಗಾಥೆ ಜಗತ್ತಿಗೆ ಪ್ರೇರಣೆಯಾಗಬೇಕಿದೆ. ಸ್ವಾಭಿಮಾನಿ ಮಹಿಳೆಯ ಹೆಸರಿನಲ್ಲಿ ಸಮಿತಿಯಿಂದ ಯಶಸ್ವಿ ಉತ್ಸವಗಳು ನಡೆಯುತ್ತಿವೆ. ಜಿಲ್ಲಾಧಿಕಾರಿ ವೃತ್ತಕ್ಕೆ ಇರುವ ಹೆಮಿಲ್ಟನ್ ವೃತ್ತ ಹೆಸರು ಬದಲಾಯಿಸಬೇಕಿದೆ. ತೊಕ್ಕೊಟ್ಟು ಉಳ್ಳಾಲ ಸಂಧಿಸುವ ಸೇತುವೆ ನಿರ್ಮಾಣದ ಚಿಂತನೆಯಿದ್ದು, ಅದಕ್ಕೂ ಅಬ್ಬಕ್ಕ ಹೆಸರು ಇಡಬೇಕಿದೆ .


