UN networks
ಮಂಗಳೂರು: ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ವರ್ಷ ವಿಶೇಷವಾಗಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ ಮಂಗಳೂರಿನ ಕೇಂದ್ರೀಯ ರೈಲ್ವೆ ನಿಲ್ದಾಣದಲ್ಲಿ ಅತ್ತಾವರದ ಪ್ರತಿಷ್ಠಿತ ಸರೋಜಿನಿ ಮಧುಸೂದನ ಕುಶೆ ಕಾಲೇಜಿನ ವಿದ್ಯಾರ್ಥಿಗಳು ಕನ್ನಡದ ಮೂರು ಗೀತೆಗಳನ್ನು ಹಾಡುವುದರ ಮೂಲಕ ಕನ್ನಡದ ಡಿಂಡಿಮ ಮೊಳಗಿಸಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕುವೆಂಪು ವಿರಚಿತ ಬಾರಿಸು ಕನ್ನಡ ಡಿಂಡಿಮ ,ನಿಸಾರ್ ಅಹ್ಮದ್ ರ ಜೋಗದ ಸಿರಿ ಬೆಳಕಿನಲ್ಲಿ ಮತ್ತು ಹಂಸಲೇಖರ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಗೀತೆಗಳನ್ನ ಸುಮಧುರವಾಗಿ ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಲಕ್ಷ್ಮೀಶ್ ಹೆಗಡೆ ಸೋಂದಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸ್ಟೇಶನ ಮಾಸ್ಟರ್ ಕಿಶನ್ ಮತ್ತಿತರರು ಸಹಕರಿಸಿ ಮಂಗಳೂರಿನ ರೈಲ್ವೇ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ ಆಗುತ್ತಿರುವುದರ ಕುರಿತು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕುಶೆ ಕಾಲೇಜಿನ ಉಪನ್ಯಾಸಕರಾದ ಪುಷ್ಪಾವತಿ, ಪವಿತ್ರ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಕುಶೆ ಸಂಸ್ಥೆಯಲ್ಲೂ ಮೊಳಗಿದ ಕನ್ನಡದ ಕಹಳೆ
ಇದೇ ಸಂದರ್ಭದಲ್ಲಿ ಅತ್ತಾವರದ ಕುಶೆ ಸಂಸ್ಥೆಯಲ್ಲೂ ಪ್ರೌಢಶಾಲಾ ವಿದ್ಯಾರ್ಥಿಗಳು ಈ ಮೂರು ಕನ್ನಡ ಗೀತೆಗಳನ್ನು ಸುಮಧುರವಾಗಿ ಹಾಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಸೌಮ್ಯಾ ಎ ಹಾಗು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.




