UN networks
ತೊಕ್ಕೊಟ್ಟು: ಖಾಸಗಿ ಬಸ್ ಪ್ರಯಾಣ ದರದ ವಿಪರೀತ ಏರಿಕೆ ವಿರೋಧಿಸಿ ಹಾಗೂ ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ ಸಿ.ಪಿ.ಐ.ಎಂ ಉಳ್ಳಾಲ ವಲಯ ಸಮಿತಿ ವತಿಯಿಂದ ಪ್ರತಿಭಟನೆ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಗುರುವಾರ ನಡೆಯಿತು.
ಸಿ.ಪಿ.ಐ.ಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಕಳೆದ ಕೆಲವು ದಿನಗಳ ಹಿಂದೆ ಈ ಜಿಲ್ಲೆಯಲ್ಲಿ ವಿವಿಧ ಜಾತ್ಯಾತೀತ ಪಕ್ಷ ಹಾಗೂ ಸಂಘಟನೆಗಳು ಒಟ್ಟಾಗಿ ಬಸ್ ದರ ಏರಿಕೆಯ ವಿರುದ್ದ ಜಿಲ್ಲಾಧಿಕಾರಿಗಳಿಗೆ ಮನವಿಯ ಜೊತೆಗೆ ಏರಿಸಿದ ಬಸ್ ಪ್ರಯಾಣ ದರವನ್ನು ತಡೆ ಹಿಡಿಯಬೇಕು, ಸಾರಿಗೆ ಪ್ರಾಧಿಕಾರದ ಸಭೆ ಕರೆದು ಸಾರ್ವಜನಿಕರ ಅಹವಾಲುಗಳನ್ನು ಕೇಳಬೇಕು ಎಂದು ಬೇಡಿಕೆ ಇಟ್ಟಿದ್ದೇವು. ಆದರೆ ಇದುವರೆಗೂ ಜಿಲ್ಲಾಡಳಿತದಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ.ಬಸ್ಸು ದರ ಏರಿಕೆಯಿಂದ ಬಹು ಸಂಖ್ಯಾತ ಪ್ರಯಾಣಿಕರು ಇಂದು ಆಕ್ರೋಶಿತರಾಗಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಹೇಳಿದ ಅವರು ಬಸ್ಸು ಮಾಲಕರು 25 % ದರ ಜಾಸ್ತಿ ಮಾಡಲು ಹೇಳಿದ್ದರು, ಆದರೆ 60 % ಜಾಸ್ತಿಯಾಗಿದೆ ಎಂದರು.
ಸಿ.ಪಿಐ.ಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಸಿ.ಪಿ.ಐ.ಎಂ ಉಳ್ಳಾಲ ವಲಯ ಸಮಿತಿ ಸದಸ್ಯರಾದ ಪದ್ಮಾವತಿ ಎಸ್ ಶೆಟ್ಟಿ, ವಿಲಾಸಿನಿ ತೊಕ್ಕೊಟ್ಟು, ಮಹಾಬಲ ದೆಪ್ಪೇಲಿಮಾರ್, ಉಳ್ಳಾಲ ವಲಯ ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಚಂದ್ರಹಾಸ್ ಪಿಲಾರ್, ಉಳ್ಳಾಲ ವಲಯ ಪಿಂಚಣಿ ದಾರರ ಸಂಘದ ಅಧ್ಯಕ್ಷ ಸುಂದರ ಕುಂಪಲ, ಉಳ್ಳಾಲ ಡಿ.ವೈ.ಎಫ್.ಐ ಅಧ್ಯಕ್ಷರು ಮೊಹಮ್ಮದ್ ರಫೀಕ್, ರೈತ ಸಂಘದ ಅಧ್ಯಕ್ಷ ಸಂಜೀವ ಗಟ್ಟಿ ಪಿಲಾರ್, ಉಪಾಧ್ಯಕ್ಷ ಲೋಕಯ್ಯ ಪನೀರ್, ರೈತ ಸಂಘದ ಜಿಲ್ಲಾ ನಾಯಕ ಶೇಖರ್ ಕುಂದರ್, ದಲಿತ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ನಾರಾಯಣ ತಲಪಾಡಿ, ಹಾಗೂ ಇಬ್ರಾಹಿಂ ಮದಕ ಉಪಸ್ಥಿತರಿದ್ದರು.


