UN networks
ಉಳ್ಳಾಲ: ಕಳೆದ ಐದು ವರ್ಷಗಳಿಂದ ಕಾಬೂಲಿನಲ್ಲಿ ನ್ಯಾಟೋ ಪಡೆಯ ಮಿಲಿಟರಿ ಬೇಸ್ ನಲ್ಲಿ ಇಕೊಲಾಗ್ ಇಂಟರ್ ನ್ಯಾಷನಲ್ ಕಂಪೆನಿಯಲ್ಲಿ ಎ.ಸಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡೆಮ್ಸಿ ಮೊಂತೇರೊ (29) ಇಂದು ಉಳ್ಳಾಲ ಉಳಿಯದಲ್ಲಿರುವ ತನ್ನ ಮನೆಗೆ ತಲುಪಿದ್ದಾರೆ. ಆ.18 ರಂದು ಇವರ ಸಹೋದರ ಮೆಲ್ವಿನ್ ಮೊಂತೇರೋ ತಾಯ್ನಾಡಿಗೆ ಮರಳಿದ್ದರು. ಸಹೋದರ ಡೆಮ್ಸಿ ಅಪಘಾನಿಸ್ತಾನದಲ್ಲಿ ಸಿಲುಕಿರುವುದರಿಂದ ಚಿಂತೆಯಲ್ಲಿದ್ದ ಕುಟುಂಬ ಇದೀಗ ನಿರಾಳವಾಗಿದೆ.
ಕುಟುಂಬದ ಸದಸ್ಯರು ಹಾಗೂ ನಗರಸಭೆ ಸದಸ್ಯೆ ಜೊತೆಗೆ ಅಪಘಾನಿನಿಂದ್ ವಾಪಸ್ಸಾದ ಸಹೋದರರು

ಅಪಘಾನಿಸ್ತಾನದಿಂದ ವಾಪಸ್ಸಾದ ಡೆಮ್ಸಿ ಮೊಂತೇರೊ

ವಾಪಸ್ಸಾದ ಡೆಮ್ಸಿ ಮೊಂತೇರೋ ಅವರನ್ನು ಸ್ವಾಗತಿಸಿದ ಸಹೋದರ ಮೆಲ್ವಿನ್ ಮೊಂತೇರೊ

ಕಾಬುಲ್ ನಲ್ಲಿ ನಡೆದ ಗುಂಡಿನ ದಾಳಿಯ ವೀಡಿಯೋ ಸೆರೆಹಿಡಿದ ಡೆಮ್ಸಿ ಮೊಂತೇರೊ

ಆ.17 ರಂದು ನ್ಯಾಟೋ ಪಡೆಯ ಕ್ಯಾಂಪ್ ನಲ್ಲಿದ್ದ ಮೆಲ್ವಿನ್ ಮೊಂತೇರೋ ಅವರನ್ನು ಭಾರತೀಯ ವಾಯುಪಡೆ ಕಾಬೂಲ್ ನಿಂದ ಏರ್ ಲಿಫ್ಟ್ ನಡೆಸಿ ಗುಜರಾತ್ ಗೆ ಕರೆತಂದಿದ್ದರು. ಆದರೆ ಸಹೋದರ ಡೆಮ್ಸಿ ಮೊಂತೇರೋ ಬೇರೆಯೇ ಕ್ಯಾಂಪಿನಲ್ಲಿದ್ದುದರಿಂದ ವಿಮಾನಗಳ ಬರುವಿಕೆಯ ಮಾಹಿತಿ ಸಿಗದೇ ಕಾಬೂಲ್ ನಲ್ಲಿ ಒಂದು ದಿನ ಉಳಿದಿದ್ದರು. ಆ.18 ರಂದು ನ್ಯಾಟೋ ಪಡೆಯ ಅಮೆರಿಕ ವಾಯುಸೇನೆಯವರಿದ್ದ ವಿಮಾನ ಕಾಬುಲ್ ತಲುಪಿತ್ತು. ಡೆಮ್ಸಿ ಸೇರಿ 155 ಮಂದಿಯನ್ನು ಏರ್ ಲಿಫ್ಟ್ ನಡೆಸಿ ಕತಾರ್ ನಲ್ಲಿ ಇರಿಸಲಾಯಿತು. ಅಲ್ಲಿ ಭಾರತೀಯ ರಾಯಭಾರಿ ಕಚೇರಿಯವರು ಮೂರು ದಿನಗಳ ಉಳಿಯುವಿಕೆಗೆ ಸಹಕರಿಸಿ ಆ.21ಕ್ಕೆ ದೆಹಲಿಗೆ ತಲುಪುವಂತೆ ಮಾಡಿ, ಅಲ್ಲಿಂದ ಇಂದು ಮುಂಬೈ ತಲುಪಿ ಇಂದು ಊರಿಗೆ ಮುಟ್ಟುವಂತೆ ಮಾಡಿದ್ದಾರೆ.
ಉಳ್ಳಾಲ ಉಳಿಯದ ವಲೇರಿಯನ್ ಮೊಂತೇರೊ-ಸಿಸಿಲಿಯಾ ಮೊಂತೇರೋ ದಂಪತಿ ಎಂಟು ಮಕ್ಕಳಲ್ಲಿ ಮೆಲ್ವಿನ್ ಹಿರಿಯ ಮಗನಾದರೆ, ಡೆಮ್ಸಿ ಮೊಂತೇರೋ ಕಿರಿಯವನು.
ಆ.15ರ ಫೈರಿಂಗ್ ಕಣ್ಣಾರೆ ಕಂಡಿದ್ದೆವು : ಆ.15 ರಂದು ಕಾಬುಲ್ ವಿಮಾನ ನಿಲ್ದಾಣದಲ್ಲಿ ಇದ್ದ ಸಂದರ್ಭ ಅಫಘಾನಿಸ್ಥಾನದ ನಾಗರಿಕರು ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ವಿಮಾನ ಹತ್ತಲು ನೂಕುನುಗ್ಗಲಿನಲ್ಲಿದ್ದರು. ಇದನ್ನು ನಿಯಂತ್ರಿಸಲು ನ್ಯಾಟೋ ಪಡೆ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದರೂ ನಿಯಂತ್ರಣಕ್ಕೆ ಬಾರದ ಸಂದರ್ಭ ನೆಲಕ್ಕೆ ಗುಂಡು ಹಾರಿಸಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಫೈರಿಂಗ್ ನಡೆದಾಗ ಮೂವರು ಮೃತಪಟ್ಟಿದ್ದರು. ಈ ಘಟನೆ ಇನ್ನೂ ಕಣ್ಣಂಚಿನಲ್ಲಿದೆ ಅನ್ನುತ್ತಾರೆ ಡೆಮ್ಸಿ. ತಾಲಿಬಾನ್ ಆಕ್ರಮಣ ಬಳಿಕ ಕ್ಯಾಂಪಿನಲ್ಲಿ ಆತಂಕದಲ್ಲೇ ಇದ್ದೆವು. ಹೊರಗೆ ಹೋಗಲು ಅವಕಾಶವಿಲ್ಲದೇ ಇದ್ದುದರಿಂದ ಮಾಧ್ಯಮಗಳಲ್ಲಿ ಬರುವ ಸುದ್ಧಿಯನ್ನು ತಿಳಿದು ಆತಂಕಕ್ಕೆ ಈಡಾಗಿದ್ದೆವು.
ವೇತನ-ಸವಲತ್ತು ಸಿಗಲು ಸರಕಾರ ಮಧ್ಯಪ್ರವೇಶಿಸಲಿ : ಯು.ಟಿ ಖಾದರ್
ಮೆಲ್ವಿನ್ ಮತ್ತು ಡೆಮ್ಸಿ ಮನೆಗೆ ಮಾಜಿ ಸಚಿವ ಯು.ಟಿ ಖಾದರ್ ಭೇಟಿ ನೀಡಿ ವಿಚಾರಿಸಿದರು. ಈ ವೇಳೆ ಮಾತನಾಡಿದ ಅವರು `ಅಪಘಾನಿಸ್ತಾನದಿಂದ ವಾಪಸ್ಸಾದವರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಲು ಕೇಂದ್ರ, ರಾಜ್ಯ ಹಾಗೂ ಭಾರತೀಯ ರಾಯಭಾರಿ ಕಚೇರಿಗಳು ಮಧ್ಯಪ್ರವೇಶಿಸಬೇಕು. ಅಮೆರಿಕನ್, ಜರ್ಮನಿ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಸೇರಿದ ಸಂಸ್ಥೆಗಳಲ್ಲಿ ಹಲವರು ಕರ್ತವ್ಯ ನಿರ್ವಹಿಸುತ್ತಿದ್ದರು. ಏಕಾಏಕಿ ಸೃಷ್ಟಿಯಾದ ಗೊಂದಲದಿಂದಾಗಿ ಸಿಗಬೇಕಾದ ವೇತನ, ಸವಲತ್ತುಗಳಿಗೆ ಕಾಯದೇ ಆತುರದಿಂದ ವಾಪಸ್ಸು ಬರುವಂತೆ ಆಗಿದೆ. ಅದಕ್ಕಾಗಿ ಅವರಿಗೆ ಸಿಗಬೇಕಾದ ಸವಲತ್ತು, ವೇತನ ಸಿಗುವಂತೆ ಭಾರತೀಯ ರಾಯಭಾರಿ ಕಚೇರಿ ಆಯಾಯ ಸಂಸ್ಥೆಗಳಿದ್ದ ರಾಷ್ಟ್ರಗಳ ರಾಯಭಾರಿಗಳ ಜೊತೆ ಮಾತುಕತೆ ನಡೆಸಿ ಸವಲತ್ತುಗಳನ್ನು ಸಿಗುವಂತೆ ಮಾಡಬೇಕಿದೆ ಎಂದರು.


