



ಉಳ್ಳಾಲ: ಕೊರೊನಾದಿಂದಾಗಿ ಇಡೀ ಸಮಾಜಕ್ಕೆ ಕತ್ತಲೆ ಕವಿದಿರುವ ಇಂತಹ ಸಂದರ್ಭದಲ್ಲಿಯೂ ಆಶಾಕಿರಣವಾಗಿ ಆಶಾ ಕಾರ್ಯಕರ್ತೆಯರು ಸಮಾಜದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದು, ಅವರ ಸೇವೆ ಶ್ಲಾಘನೀಯವಾದುದು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಏಳು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಭಾನುವಾರ ನಾಟೆಕಲ್, ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಭಿನಂದನೆ ಹಾಗೂ ಪೆÇ್ರೀತ್ಸಾಹ ಧನವನ್ನು ವಿತರಿಸಿ ಅವರು ಮಾತನಾಡಿದರು.
ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಬೆಂಗಳೂರಿನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ, ನರೇಂದ್ರ ಮೋದಿಯವರು ಕೊರೊನಾದಂತಹ ಸಂದಿಗ್ಧತೆಯ ಕಾಲದಲ್ಲೂ ಉತ್ತಮ ಆಡಳಿತದೊಂದಿಗೆ, ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಲು ಶ್ರಮಿಸುತ್ತಿದ್ದಾರೆ. ಅಲ್ಲದೆ ಕೊರೊನಾ ಸಂಕಷ್ಟ ಕಾಲದಲ್ಲಿ ಸಮಾಜದ ಸ್ವಾಸ್ಥ್ಯ ವನ್ನು ಕಾಪಾಡುವಲ್ಲಿ ಆಶಾಕಾರ್ಯಕರ್ತೆಯರ ಪಾತ್ರವು ಪ್ರಮುಖವಾದದ್ದು. ಸಮಾಜದಲ್ಲಿ ಅವರನ್ನು ಗೌರವಿಸುವ ಕೆಲಸಗಳು ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ರಾಜ್ಯ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಬಿಜೆಪಿ ಮುಖಂಡರಾದ ಹೇಮಂತ್ ಶೆಟ್ಟಿ, ಯಶವಂತ್ ಅಮೀನ್, ಗಾಯತ್ರಿ ಕಿಶೋರ್, ರಾಮಕೃಷ್ಣ ಪಟ್ಟೋರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ನವೀನ್ ಪಾದಲ್ಪಾಡಿ, ಜಿತೇಂದ್ರ ಶೆಟ್ಟಿ ತಲಪಾಡಿ, ನ್ಯಾಯವಾದಿ ಅಸ್ಗರ್ ಅಲಿ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸುಜಿತ್ ಶೆಟ್ಟಿ ಕಂಬ್ಲಪದವು ಹಾಗೂ ಪುರುಷೋತ್ತಮ ಕಲ್ಲಾಪು ಹಾಗೂ ಜೀವನ್ ಕುಮಾರ್ ತೊಕ್ಕೊಟ್ಟು ಉಪಸ್ಥಿತರಿದ್ದರು.

