


ಉಳ್ಳಾಲ: ಮುಂಭಾಗದ ಟಯರ್ ಸಿಡಿದು ಡಿವೈಡರ್ ದಾಟಿದ ಕಾರು ಎದುರಿನಿಂದ ಬರುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರಿನ ಹಿಂಬದಿ ಸವಾರೆ ವಸಂತಿ ಎಂಬವರು ಫ್ಲೈವರಿನಿಂದ ಕೆಳಗೆ 10 ಮೀ ಕೆಳಕ್ಕೆ ರಸ್ತೆಗೆ ಬಿದ್ದು ಮೃತಪಟ್ಟು, ಪುತ್ರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ
ಕುಂಪಲದ ಆಶ್ರಯಕಾಲನಿ ನಿವಾಸಿ ವಸಂತಿ ನಾಯರ್ (45) ಮೃತಪಟ್ಟವರು . ಪುತ್ರಿ ಶ್ರೀಜಾ ( 20) ಎಂಬವರನ್ನು ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ಶಮಿತ್ ಎಂಬಾತನನ್ನು ನಾಗುರಿ ಸಂಚಾರಿ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಂಪಲದಿಂದ ಜೆಪ್ಪಿನಮೊಗರುವಿನ ತಾಯಿ ಮನೆಗೆ ವಸಂತಿ ಅವರು ಮಗಳ ಜೊತೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಕಲ್ಲಾಪು ಕಡೆಯಿಂದ ಕಾಪಿಕಾಡು ಕಡೆಯತ್ತ ಬರುತ್ತಿದ್ದ ಕಾರಿನ ಎದುರುಗಡೆಯ ಟಯರ್ ಸಿಡಿದಿದ್ದು, ಇದರಿಂದ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆದಿದೆ. ಈ ಸಂದರ್ಭ ವಸಂತಿ ಅವರು ಫ್ಲೈಓವರಿನಿಂದ ಕೆಳಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗಳು ಶ್ರೀಜಾ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗುರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

