
ಬಬ್ಬುಕಟ್ಟೆ: ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಉದ್ಯಮ ರಂಗಗಳ ಮುಂದಾಳು, ಪೆರ್ಮನ್ನೂರು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರು , ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾದ ಬಬ್ಬುಕಟ್ಟೆ ಹೊಸಗದ್ದೆ ನಿವಾಸಿ ರಾಘವ ಪೂಜಾರಿ ಹೊಸಗದ್ದೆ (70) ಇವರು ಹೃದಯಾಘಾತದಿಂದ ಎ.6 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮಂಗಳೂರು ತಾಲೂಕಿನ ಪೆರ್ಮನ್ನೂರು ಗ್ರಾಮದ ಹೊಸಗದ್ದೆ ಮನೆಯಲ್ಲಿ ದಿ. ತನಿಯಪ್ಪ ಪೂಜಾರಿ ಮತ್ತು ರತ್ನ ದಂಪತಿ ದ್ವಿತೀಯ ಪುತ್ರ. ಕೃಷಿಕ ಕುಟುಂಬದಲ್ಲಿ ಜನಿಸಿರುವ ಇವರು ಚಿಕ್ಕಂದಿನಲ್ಲಿಯೇ ಶ್ರಮಜೀವಿಯಾಗಿ ಕಾಯಕದಲ್ಲೇ ವಿಶ್ವಾಸವುಳ್ಳವರು.
ರಾಜಕೀಯ ರಂಗದಲ್ಲಿ ಕಾಂಗ್ರೆಸ್ ಪಕ್ಷದ ಅನುಯಾಯಿಯಾಗಿ ಗ್ರಾಮ ಪಂಚಾಯತ್ ನ ಚುನಾಯಿತ ಸದಸ್ಯರಾಗಿ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಹಲವಾರು ರೀತಿಯಲ್ಲಿ ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದ ಓರ್ವ ಆದರ್ಶ ಕಾರ್ಯಕರ್ತರು. ಶೈಕ್ಷಣಿಕ ರಂಗದಲ್ಲಿ ಸಮಾಜದ ಏಳಿಗೆ ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ಬೋಧನೆಯಂತೆ ಸರಕಾರಿ ಶಾಲೆಯ ನಿರ್ಮಾಣಕ್ಕೆ ಸ್ಥಳದಾನ ನಡೆಸಿ ಊರ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅನುಕೂಲ ಮಾಡಿ ಸಮಾಜದ ಹಲವು ಬಡ ವಿದ್ಯಾರ್ಥಿಗಳಿಗೆ ವಿದ್ಯೆ ಲಭಿಸುವಂತೆ ಮಾಡಿದವರು.
ವಿಜಯಲಕ್ಷ್ಮೀ ಸ್ಟೋನ್ ಕ್ರಷರ್ಸ್ ಸಂಸ್ಥೆಯ ಸ್ಥಾಪಕರಾಗಿ, ನಿರ್ದೇಶಕರಾಗಿ ಉತ್ತಮ ಉದ್ಯಮಿಯಾಗಿದ್ದರು. ಪಿಲಾರು ಪಂಜಂದಾಯ ಸೇವಾ ಸಮಿತಿ ಇದರ ಸದಸ್ಯರಾಗಿ ಉತ್ತಮ ಸ¯ಹೆಗಾರರೂ ಆಗಿದ್ದರು. ಹಲವು ದೈವಸ್ಥಾನ, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಲ್ಲಿ ತೊಡಗಿಸಿಕೊಂಡ ಇವರು ಶ್ರೇಷ್ಟ ದಾನಿಯಾಗಿದ್ದರು.
ಮೃತರು ಪತ್ನಿ ಬೇಬಿ, ಮಕ್ಕಳಾದ ಸಿವಿಲ್ ಇಂಜಿನಿಯರ್ ಯತೀಶ್ ಹೊಸಗದ್ದೆ, ಮೆಸ್ಕಾಂ ಚೆಂಬುಗುಡ್ಡೆ ಶಾಖೆಯ ಸಹಾಯಕ ಅಭಿಯಂತರ ನಿತೇಶ್ ಹೊಸಗದ್ದೆ , ನ್ಯಾಯವಾದಿ ಮಿತೇಶ್ ಹೊಸಗದ್ದೆ ಹಾಗೂ ಪುತ್ರಿ ವಿಜಯಲಕ್ಷ್ಮೀ ಹೊಸಗದ್ದೆ ಇವರನ್ನು ಅಗಲಿದ್ದಾರೆ.

