ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಜಿಲ್ಲಾಡಳಿತ ಮರಳು ಮಾಫಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕಾನೂನು ಬದ್ಧವಾಗಿ ಸಾಂಪ್ರದಾಯಿಕ ಮರಳು ತೆಗೆಯಲು ಅನುಮತಿ ನೀಡಿ ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಸಿಗುವಂತೆ ಮಾಡಬೇಕು ಎಂದು ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಹೇಳಿದ್ದಾರೆ.
ಅವರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‍ನ ಉಳ್ಳಾಲ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಒಂದು ತಿಂಗಳಿನಿಂದ ಮರಳು ತೆಗೆಯಲು ತಾತ್ಕಾಲಿಕ ನಿಷೇಧ ಹೇರಿದ ಜಿಲ್ಲಾಡಳಿತದ ಕ್ರಮದಿಂದ ಮರಳಿನ ಅಭಾವ ಉಂಟಾಗಿದ. ಇದರಿಂದ ಕಟ್ಟಡ ಕಾರ್ಮಿಕರು ನಿರುದ್ಯೋಗಿಗಳಾಗಿ ಅಭದ್ರತೆಯಲ್ಲಿದ್ದಾರೆ. ಇದರಿಂದ ಅವರ ಮಕ್ಕಳ ವಿದ್ಯಾಭ್ಯಾಸ , ಕುಟುಂಬ ನಿರ್ವಹಣೆಯೂ ಅಸಾಧ್ಯವಾಗಿದೆ. ಕೂಡಲೇ ಜಿಲ್ಲಾಡಳಿತ ಮರಳು ಮಾಫಿಯಾ ವಿರುದ್ಧ ಕ್ರಮಕೈಗೊಂಡು ಸಾಂಪ್ರದಾಯಿಕ ಮರಳು ತೆಗೆಯಲು ಅವಕಾಶ ಕಲ್ಪಿಸದೇ ಇದ್ದಲ್ಲಿ, ಕೂಲಿ ಕಾರ್ಮಿಕರ ಕುಟುಂಬ ಹಸಿವಿನಿಂದ ಸಾಯುವ ಸ್ಥಿತಿ ಎದುರಾಗಬಹುದು ಎಂದರು.
ಸಿಐಟಿಯು ಉಳ್ಳಾಲ ವಲಯ ಅಧ್ಯಕ್ಷ ಕೆ.ಕೃಷ್ಣಪ್ಪ ಸಾಲ್ಯಾನ್, ಕಾರ್ಯದರ್ಶಿ ಜಯಂತ ನಾಯ್ಕ್, ಉಳ್ಳಾಲ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಜನಾರ್ದನ.ಕೆ, ಉಪಾಧ್ಯಕ್ಷರುಗಳಾದ ರಾಮಚಂದ್ರ ಪಜೀರು, ಕೃಷ್ಣಪ್ಪ ಅಸೈಗೋಳಿ, ಇಬ್ರಾಹಿಂ ಮದಕ, ಸಿಐಟಿಯು ಜಿಲ್ಲಾ ಸಮಿತಿ ಸದಸ್ಯೆ ಪದ್ಮಾವತಿ.ಯಸ್.ಶೆಟ್ಟಿ, ವಿಲಾಸಿನಿ ತೊಕ್ಕೊಟ್ಟು, ಜತೆ ಕಾರ್ಯದರ್ಶಿಗಳಾದ ಬಾಬು ಪಿಲಾರ್, ಚಂದ್ರಹಾಸ್ ಪಿಲಾರ್, ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ರೋಹಿದಾಸ್ ಭಟ್ನಗರ ಮೊದಲಾದವರು ಉಪಸ್ಥಿತರಿದ್ದರು.




