UN NETWORKS
ಕೊಣಾಜೆ : ನಿಜವಾದ ದುಃಖ ಬಾರದೆ ಕೃಷ್ಣನಂತವರು ಮಾತನಾಡುವುದಿಲ್ಲ. ಸಾಂಧರ್ಭಿಕ ಜೀವಂತಿಕೆ ಅಥವಾ ತಲ್ಲಣದಲ್ಲಿಯೇ ಭಗವದ್ಗೀತೆ ಹುಟ್ಟುತ್ತದೆ. ವಿಷಾದ ಇಲ್ಲದೆ ಹುಟ್ಟಿದ ಅನುಗೀತೆಗೆ ಮಹಾಭಾರತದಲ್ಲಿ ಯಾವುದೇ ಪ್ರಾಶಸ್ತ್ಯ ಸಿಕ್ಕಿಲ್ಲ ಎಂದು ಸಂಸ್ಕೃತಿ ಚಿಂತಕರಾದ ಲಕ್ಷ್ಮೀಶ ತೋಳ್ಪಾಡಿ ಅವರು ಹೇಳಿದರು.


ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ವಿವಿಯ ಮಂಗಳಾ ಸಭಾಂಗಣದಲ್ಲಿ ಬುಧವಾರ ನಡೆದ ಯಕ್ಷಮಂಗಳ ಪ್ರಚಾರೋಪನ್ಯಾಸ ಮಾಲಿಕೆ ಉದ್ಘಾಟನಾ ಸಮಾರಂಭದಲ್ಲಿ ಮಹಾಭಾರತ: ಹೊಸನೋಟ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ನಿರ್ಧಿಷ್ಟವಾದ ವ್ಯಕ್ತಿತ್ವ ಇದೆ. ಕೃಷ್ಣನಿಗೆ ಮಾತ್ರ ಅವ್ಯವಸ್ಥಿತ ಪಾತ್ರ. ಒಂದು ಪಾತ್ರ ಇತಿಹಾಸದ್ದು ಮತ್ತು ಇತಿಹಾಸವನ್ನು ದಾಟಿ ಮಹತ್ವವನ್ನು ಹೊಂದುವಾಗ ಹೀಗೆಯೇ ಆಗುತ್ತದೆ. ಉಳಿದ ಎಲ್ಲಾ ಪಾತ್ರಗಳಿಗೆ ವ್ಯವಸ್ಥಿತ ವ್ಯಕ್ತಿತ್ವ ಪ್ರಾಪ್ತವಾಗುವುದೇ ಈ ಅವ್ಯವಸ್ಥೆಯಿಂದ. ಪೂರ್ವಿಕವೂ ನೂತನವೂ ಆದ ನೆಲೆಯ ಅನುಸಂಧಾನದಲ್ಲಿ ಕೃಷ್ಣನ ಪಾತ್ರ ರೂಪುಗೊಂಡಿದೆ ಎಂದು ಹೇಳಿದರು.
ವೇದವನ್ನು ಸರಿಯಾದ ನಿಟ್ಟಿನಲ್ಲಿ ಅರ್ಥಮಾಡಿಕೊಳ್ಳಬೇಕಾದರೆ ಕೇವಲ ವೇದಗಳ ಅಧ್ಯಯನ ಮಾಡಿದರಷ್ಟೇ ಸಾಲದು ಅದರ ಜೊತೆ ಇತಿಹಾಸ, ಪುರಾಣಗಳ ಬಗ್ಗೆಯೂ ಅಧ್ಯಯನ ನಡೆಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ ವೇದವನ್ನು ಪರಿಪೂರ್ಣವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದಂತಹ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು, ಮಂಗಳೂರು ವಿವಿಯಲ್ಲಿ ಪೀಠಗಳ ಮೂಲಕ ವಿವಿಧ ಕಾರ್ಯಕ್ರಮಗಳು ನಡೆದು ಇಲ್ಲಿ ನಿತ್ಯೋತ್ಸವ ನಡೆಯಬೇಕಿದೆ. ಅಲ್ಲದೆ ಇಂತಹ ಕಾರ್ಯಕ್ರಮಗಳಲ್ಲಿ ಗ್ರಾಮದ ಜನರು ಕೂಡಾ ಪೂರಕವಾಗಿ ಭಾಗವಹಿಸುವಂತಾದರೆ ವಿಶ್ವವಿದ್ಯಾಲಯಲಯಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.
ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಸತೀಶ್ ಕೊಣಾಜೆ ವಂದಿಸಿದರು. ಸಂಶೋಧನಾ ಅಧಿಕಾರಿ ಡಾ.ರಾಜಶ್ರೀ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅತಿಥಿ ಕಲಾವಿದರ ಕೂಡುವಿಕೆಯಿಂದ `ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶನ ನಡೆಯಿತು.


