UN NETWORKS
ತಲಪಾಡಿ : ವಿದ್ಯಾರ್ಥಿಗಳು ತಮಗೆ ದೊರೆತ ಉತ್ತಮ ವಿದ್ಯೆಯ ಸದುಪಯೋಗದಿಂದ ಭವ್ಯ ಭಾರತದ ಶಿಲ್ಪಿಗಳಾಗಿ ರೂಪುಗೊಳ್ಳಬೇಕು ಎಂದು ಮಂಗಳೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅಭಿಪ್ರಾಯಪಟ್ಟರು.

ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಗಳ ಮಂತ್ರಿಮಂಡಲವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಇಂದಿನ ಅಗತ್ಯಗಳಲ್ಲಿ ಒಂದು ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿ ಮಾಡುವುದು. ಹಿಂದೆ ವಿದ್ಯಾರ್ಥಿ ಗುರುವಿದ್ದ ಹಾಗೂ ಗುರಿಯಿತ್ತು. ಆದರೆ ಇಂದು ಗುರು ಮಾತ್ರವಿದ್ದು ವಿದ್ಯಾರ್ಥಿಗಳಲ್ಲಿ ಗುರಿ ಮಾಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ನಾವು ಸಾಧನೆ ಮಾಡಬೇಕಾದರೆ ನಮ್ಮಲ್ಲಿ ದೂರದೃಷ್ಟಿತ್ವ, ಆತ್ಮವಿಶ್ವಾಸ, ಕಲಿಯುವ ಹಂಬಲ, ಆಸಕ್ತಿ, ದೃಢನಿರ್ಧಾರ ಕಲಿಕಾ ಕೌಶಲ್ಯಗಳು ಹಾಗೂ ಸಮಯದ ಸದುಪಯೋಗದಂತಹ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ನಾವೂ ಜ್ಞಾನದೇವತೆಯ ಆರಾಧಕರಾಗಬಹುದು. ಬದುಕು ನಮ್ಮ ಕೈಯಲ್ಲಿದೆ, ಅದನ್ನು ಬಳಸುವ ಉತ್ತಮ ರೀತಿಯೂ ನಮ್ಮ ಕೈಯಲ್ಲೇ ಇರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅವರು ಮಾತನಾಡಿ ನಾಯಕರಾದವರು ಇತರರಿಗೆ ಮಾದರಿಯಾಗಬೇಕು. ತಮ್ಮ ಉತ್ತಮ ಕೆಲಸ ಕಾರ್ಯಗಳಿಂದ ಇತರರಿಗೆ ಪ್ರೇರಣಾ ಶಕ್ತಿಯಾಗಿ, ಹುರಿದುಂಬಿಸುವ ಒಳ್ಳೆಯ ಗುಣವುಳ್ಳವರಾಗಬೇಕು. ಶಾರದಾ ವಿದ್ಯಾನಿಕೇತನವು ಸಂಸ್ಕಾರಯುತ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ವಿಷಯ ಮಾತ್ರವಲ್ಲದೆ, ಅದರ ಜೊತೆಗೆ ವಿದ್ಯಾರ್ಥಿಗಳು ಮೌಲ್ಯಯುತ ಜೀವನ ನಡೆಸಲು ಬೇಕಾದ ಉತ್ತಮ ವಾತಾವರಣವನ್ನು ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಜೀವನದ ನಾಯಕರು ತಾವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಶಾಲಾ ಪ್ರಾಂಶುಪಾಲೆ ಸುಷ್ಮಾ ದಿನಕರ್ ವಿದ್ಯಾರ್ಥಿ ಸಂಸತ್ತಿನ ಪದಾದಿಕಾರಿಗಳ ಪ್ರತಿಜ್ಞಾವಿಧಿ ಸ್ವಿಕಾರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಾಲೇಜಿನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‍ನ ಅಸಿಸ್ಟೆಂಟ್ ಪ್ರೊಫೆಸರ್ ಜಾನ್ಸನ್ ಟೆಲ್ಲೀಸ್, ಆಡಳಿತಾ„ಕಾರಿ ವಿವೇಕ್ ತಂತ್ರಿ, ಶಾರದಾ ಡೇ ಬೋರ್ಡಿಂಗ್‍ನ ಪ್ರಾಂಶುಪಾಲ ಮೋಹನ್ ದಾಸ್ ಹಾಗೂ ಲತಾಂಜಲಿ ರೈ, ಉಪಪ್ರಾಂಶುಪಾಲ ದೀಪಾಶಂಕರ್ ಹಾಗೂ ಪ್ರಶಾಂತ್ ಮತ್ತು ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಬೆನಕ ಮತ್ತು ಶಿತಿಜ್ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತ್ ಸ್ವಾಗತಿಸಿದರು, ಚಂದ್ರವಂಶಿ ವಂದಿಸಿದರು. ಅನಂತರ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


