UN NETWORKS
ಮುಡಿಪು : ಚಹಾ, ಊಟ ಮಾಡುವುದು ವಿಭಿನ್ನ ಸ್ನೇಹ, ಇದು ಯಾರು ಯಾರಿಗೂ ಕೊಡಬಹುದು. ಆದರೆ ರಕ್ತದಾನ ಶಿಬಿರ ಎಂದರೆ ಜೀವ ಉಳಿಸುವ, ಆರೋಗ್ಯ ಕಾಪಾಡುವ ವಿಶೇಷ ಕಾರ್ಯಕ್ರಮ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ.ಎಂ.ಖಾನ್ ಅಭಿಪ್ರಾಯಪಟ್ಟರು.

ಕಾರವಾರದ ಕಲ್ಲೂರು ಎಜ್ಯುಕೇಶನ್ ಟ್ರಸ್ಟ್, ಮುಡಿಪು ಪ್ರಥಮ ದರ್ಜೆ ಕಾಲೇಜು, ರೋವರ್ಸ್-ರೇಂಜರ್ಸ್ ಹಾಗೂ ದೇರಳಕಟ್ಟೆ ಯೇನೆಪೊಯ ವೈದ್ಯಕೀಯ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮುಡಿಪು ಗೋಪಾಲಕೃಷ್ಣ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.ಇಂದು ನಾವೆಲ್ಲಾ ಸ್ವಾರ್ಥಿಗಳಾಗಿದ್ದೇವೆ, ಹಿರಿಯರು ನಮಗೆ ನೀಡುತ್ತಿದ್ದಂತಹ ಮಾರ್ಗದರ್ಶನ ನೀಡುವಂತಹ ಕಾರ್ಯ ಮತ್ತೊಮ್ಮೆ ಸ್ಕೌಟ್-ಗೈಡ್ಸ್, ರೋವರ್ಸ್-ರೇಂಜರ್ಸ್ ವಿದ್ಯಾರ್ಥಿಗಳಿಂದ ನಡೆಯಲಿ. ಶಿಬಿರದಲ್ಲಿ ಭಾಗವಹಿಸಿ ಒಮ್ಮೆಗೆ ರಕ್ತ ಕೊಟ್ಟರೆ ಸಾಲದು, ಮುಂದೆಯೂ ಪರಸ್ಪರ ಪ್ರೀತಿ, ವಿಶ್ವಾಸದ ಜೀವನ ನಡೆಸಲು ಮುಂದಾಗಬೇಕು ಎಂದು ಆಶಿಸಿದರು.
ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ಮಾತನಾಡಿ, ಸಾಮಾನ್ಯ ಮನುಷ್ಯ ಮಾಡುವ ಪ್ರಾಮಾಣಿಕ ದಾನ, ರೋಗಿಯ ಜೀವ ಉಳಿಸಲು ವೈದ್ಯನಿಂದ ಮಾತ್ರ ಅಲ್ಲ, ಸಾಮಾನ್ಯ ಮನುಷ್ಯನಿಂದಲೂ ಸಾಧ್ಯ. ರಕ್ತದಾನದಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲದ ಕಾರಣ ಚಿಂತೆ ಅನಗತ್ಯ. ರಕ್ತದಾನಕ್ಕೆ ಯಾವುದೇ ರೀತಿಯಲ್ಲೂ ಒತ್ತಡ ಹಾಕಲಾಗದು ಎಂದು ತಿಳಿಸಿದರು. ಜೆ.ಸಿ.ಐ. ಭಾರತ ವಲಯ 15ರ ಅಧಿಕಾರಿ ಬಾದುಶಾ ಮಾಸ್ಟರ್ ಸಾಂಬಾರ್ ತೋಟ ಮಾತನಾಡಿ, ಇನ್ನೊಬ್ಬರಿಗೆ ಹಲವು ರೀತಿಯಲ್ಲಿ ಸಹಾಯ ಮಾಡಬಹುದು. ಆದರೆ ರಕ್ತದಾನ ಎಂದರೆ ಮಹಾದಾನ ಎನಿಸಿದೆ. ಪ್ರತಿಯೊಬ್ಬರ ರಕ್ತವೂ ಒಂದೇ ಬಣ್ಣದಿಂದ ಕೂಡಿದ್ದು ಜಾತಿ, ಧರ್ಮ ಭೇದ ಅಡ್ಡಿಯಾಗದು ಎಂದರು.
ಮುಡಿಪು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಿರಿಧರ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಲ್ಲೂರು ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಇಬ್ರಾಹಿಂ ಕಲ್ಲೂರು ಹಾಗೂ ಯೇನೆಪೊಯ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಗಣೇಶ್ ಪ್ರಸಾದ್ ಮುಖ್ಯ ಅತಿಥಿಗಳಾಗಿದ್ದರು.ರೋವರ್ಸ್-ರೇಂಜರ್ಸ್ ಘಟಕದ ಸಂಚಾಲಕಿ ಶುಭಾ ಕೆ.ಎಚ್.ಸ್ವಾಗತಿಸಿದರು. ಕುಶಿತ್ ಕುಮಾರ್ ವಂದಿಸಿದರು. ಹಳೆವಿದ್ಯಾರ್ಥಿ ಲೋಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.
`ವಿದ್ಯಾರ್ಥಿಗಳು ದಾನವಾಗಿ ನೀಡಿರುವ ರಕ್ತ ನಿಷ್ಫಲವಾಗದು, ಅದರ ಪ್ರತಿಫಲ ಇನ್ನೊಂದು ಜೀವಕ್ಕೆ ಸಿಗುತ್ತದೆ. ಅದೇ ರೀತಿ ಪರಿಸರ ಉಳಿಸುವ ನಿಟ್ಟಿನಲ್ಲಿ ಗಿಡಗಳನ್ನು ನೆಡಿ, ಅದರ ಪ್ರತಿಫಲ ಪರಿಸರ, ನಮಗೂ, ಮುಂದಿನ ಪೀಳಿಗೆಗೂ ಸಿಗುತ್ತದೆ’
ಡಾ.ಇಬ್ರಾಹಿಂ ಕಲ್ಲೂರು, ಅಧ್ಯಕ್ಷ, ಕಲ್ಲೂರು ಎಜ್ಯುಕೇಶನ್ ಟ್ರಸ್ಟ್


