ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಕುತ್ತಾರ್ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಹೆಂಚು, ಪಕ್ಕಾಸು ತುಂಡಾಗಿ ನೀರು ಸೋರುತ್ತಿರುವುದನ್ನು ಮನಗಂಡ ಜೈಹನುಮಾನ್ ಕ್ರೀಡಾ ಮಂಡಳಿ ಸದಸ್ಯರು ಭಾನುವಾರ ಶ್ರಮದಾನದ ಮೂಲಕ ದುರಸ್ತಿಗೊಳಿಸಿದ್ದು ಈ ಸಂದರ್ಭ ಎಸ್‍ಡಿಎಂಸಿಗೆ ಸಂಬಂಧಪಟ್ಟವರು ಸ್ಥಳಕ್ಕೆ ಬಾರದಿದ್ದು ಅಸಮಾಧಾನಕ್ಕೆ ಕಾರಣವಾಗಿದೆ.
ಈ ಶಾಲೆಯ ಕಟ್ಟಡಕ್ಕೆ 30 ವರ್ಷಗಳಾಗಿದ್ದು ಪಕ್ಕಾಸು ಶಿಥಿಲಗೊಂಡಿದ್ದು ಹೆಂಚು ತೂತು ಬಿದ್ದು ಕೊಠಡಿ ಸೋರುತ್ತಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಸಂಘಟನೆ 50 ಸಾವಿರ ರೂಪಾಯಿ ವೆಚ್ಚದಲ್ಲಿ ದುರಸ್ತಿಪಡಿಸಿ ಸರ್ಕಾರದ ಜವಾಬ್ದಾರಿ ನಿರ್ವಹಿಸಿ ಸ್ಥಳೀಯರ ಪ್ರೀತಿಗೆ ಪಾತ್ರವಾಗಿದೆ.
ಶಾಲೆಯಲ್ಲಿ 1ರಿಂದ 8ನೇ ತರಗತಿಯಿದ್ದು ಕಳೆದ ವರ್ಷ ಪಾಠದ ಸಂದರ್ಭ ಹೆಂಚು ಬಿದ್ದು ವಿದ್ಯಾರ್ಥಿಗಳಿಗೆ ಗಾಯವಾಗಿದ್ದರಿಂದ ಒಂದು ಕೊಠಡಿಯಲ್ಲಿ ತರಗತಿ ಸ್ಥಗಿತಗೊಳಿಸಿ ಬೇರೆ ಕೊಠಡಿಗೆ ವರ್ಗಾಯಿಸಲಾಗಿತ್ತು. ಶಾಲಾ ಸಭಾಂಗಣವೂ ಸೋರುತ್ತಿತ್ತು.
ಭಾನುವಾರ ನಡೆದ ಶ್ರಮದಾನದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಟೈಲರ್, ಡಿವೈಎಫ್‍ಐ ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ಕುತ್ತಾರ್, ಜೈ ಹನುಮಾನ್ ಕ್ರೀಡಾ ಮಂಡಳಿ ಗೌರವಾಧ್ಯಕ್ಷ ಶ್ರೀಧರ ಸಾಲ್ಯಾನ್, ಅಧ್ಯಕ್ಷ ಚಂದ್ರಹಾಸ, ಉಪಾಧ್ಯಕ್ಷ ಈಶ್ವರ ಪೂಜಾರಿ, ಪ್ರಮುಖರಾದ ಮಹಾಬಲ ಟಿ.ದೆಪ್ಪೇಲಿಮ್ಮಾರ್, ಭರತ್, ಸಂತೋಷ್, ನಿತಿನ್ ಕುತ್ತಾರ್, ಕರುಣಾಕರ್, ರಮೇಶ್, ಆನಂದ ಮಠದಡಿ, ಪ್ರೇಮಚಂದ್ರ, ನಾಗರಾಜ ಮಾಡೂರು ಮೊದಲಾದವರು ಉಪಸ್ಥಿತರಿದ್ದರು.




