UN NETWORKS
ತೊಕ್ಕೊಟ್ಟು: ಟೈಲರ್ ಕೆಲಸ ಗೌರವಾನ್ವಿತವಾಗಿದ್ದು ಅದನ್ನು ಕಾಯಕವಾಗಿಸಿಕೊಂಡವರಿಗೆ ಅವರನ್ನು ನಂಬಿದ ಕುಟುಂಬಕ್ಕೆ ಉತ್ತಮ ಸಾರ್ಥಕ ಬದುಕು ಕಟ್ಟಿಕೊಡುವಲ್ಲಿ ಟೈಲರ್ ವೃತ್ತಿ ಯಾವತ್ತೂ ಹಿಂದೆ ಬಿದ್ದಿಲ್ಲ. ಟೈಲರ್ ಕೆಲಸ ಅದೆಷ್ಟೋ ಕುಟುಂಬದ ಕಣ್ಣೀರು ಒರೆಸಿದೆ ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ (ಕೆಎಸ್ ಟಿಎ) ರಾಜ್ಯಾಧ್ಯಕ್ಷ ಕೆ.ಎಸ್.ಆನಂದ ಹೇಳಿದರು.
ತೊಕ್ಕೊಟ್ಟು ಒಳಪೇಟೆಯ ಆಮಂತ್ರಣ ಹಾಲ್ ನಲ್ಲಿ ಮಂಗಳವಾರ ನಡೆದ ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಉಳ್ಳಾಲ ಕ್ಷೇತ್ರ ಸಮಿತಿ ಏಳನೇ ಮಹಾಸಭೆಯಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಅವರು ಮಾತನಾಡಿದರು.ಹಿರಿಯ ಟೈಲರ್ ಗಳನ್ನು ಗೌರವಿಸುವ ಕೆಲಸ ನಿಜಕ್ಕೂ ಅಭಿನಂದನೀಯ.ಆರಂಭದಿಂದಲೂ ಸಂಘಟನೆಯ ಮೇಲೆ ಅಭಿಮಾನ ಇಟ್ಟು ದುಡಿದ ಎಲ್ಲ ಸದಸ್ಯರ ಶ್ರಮದ ಫಲ ಇಂದು ಸಂಘಟನೆ ಹೆಮ್ಮರವಾಗಿ ಬೆಳೆದಿದ್ದು ಅವರೆಲ್ಲರಿಗೂ ನಾವು ಕೃತಜ್ಞರಾಗಿದ್ದೇವೆ ಎಂದು ನುಡಿದರು.ರಾಜ್ಯ ಕಾರ್ಯದರ್ಶಿ ಅಫ್ರಫುನ್ನೀಸ ಮಾತನಾಡಿ ಪ್ರತಿಯೊಬ್ಬರ ಮಾನ ಮುಚ್ಚುವಂತಹ ಕೆಲಸ ಮಾಡುವ ಶ್ರೇಷ್ಠ ಕಾರ್ಯ ಮಾಡುವುದು ಟೈಲರ್ ಗಳದ್ದು ಎಂದು ನುಡಿದರು.
ಕೊಡಗಿನಲ್ಲಿ ಭೂ ಕುಸಿತ ಜಲಪ್ರಳಯ ನಡೆದಾಗ ಮನೆ ಕಳೆದುಕೊಂಡಾಗ ಸರಕಾರದಿಂದ ಪರಿಹಾರ ಧನವಾಗಿ ಸಿಕ್ಕಿದ್ದು ಕೇವಲ 47ಸಾವಿರ ರೂ. ಗಳಾದರೆ ಕೆಎಸ್ ಟಿ ಎ ಸಂಘಟನೆ ಸದಸ್ಯರು ತಾವು ಬೆವರು ಸುರಿಸಿದ ಹಣದಲ್ಲಿ ಸಂಗ್ರಹಿಸಿ ಕೊಟ್ಟ ಹಣ ಅದಕ್ಕೂ ಮಿಕ್ಕಿದ್ದು ಎಂದು ನೆರವಿನ ಸಹಾಯ ಹಸ್ತ ಚಾಚಿದ ಸಂಘಟನೆ ಕಾರ್ಯವೈಖರಿ ಶ್ಲಾಘಿಸಿದರು.
ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾಧ್ಯಕ್ಷ ಪ್ರಜ್ವಲ್ ಕುಮಾರ್, ಉದ್ಯಮಿ ಚಂದ್ರಹಾಸ್ ಪಂಡಿತ್ ಹೌಸ್ ಹಾಗೂ ಉದ್ಯಮಿ ಕುಸುಮಾ ದೇವಾಡಿಗ ಉಪಸ್ಥಿತರಿದ್ದರು. ಸೋಮೇಶ್ವರ ಕ್ಷೇತ್ರ ಸಮಿತಿ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ರಮೇಶ್ ಟೈಲರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಉಳ್ಳಾಲದಲ್ಲಿ ಆರಂಭವಾದ ಸಂಘಟನೆ ಪ್ರಸ್ತುತ ಮೂವತ್ತು ಜಿಲ್ಲೆಯಲ್ಲಿ ಬೆಸೆದುಕೊಂಡಿದೆ. ಐದು ಸಾವಿರ ಸದಸ್ಯರಿಗೆ ಸ್ಮಾರ್ಟ್ ಕಾರ್ಡ್ ಸಿದ್ಧಗೊಂಡಿದ್ದು ಮಾಹಿತಿ ಕೊರತೆ ಇದ್ದವರು ಸಮಿತಿಯ ಪದಾಧಿಕಾರಿಗಳನ್ನು ಭೇಟಿ ಆಗಿ ಮಾಹಿತಿ ಪಡೆಯಿರಿ ಎಂದು ಸಲಹೆ ನೀಡಿದರು. ಜಿಲ್ಲಾ ಸಮಿತಿ ಸದಸ್ಯ ನಾರಾಯಣ ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯ ದೇಸೋಡಿ ವಂದಿಸಿದರು.
ಇದಕ್ಕೂ ಮುನ್ನ ಕಾಪಿಕಾಡು ಗಟ್ಟಿ ಸಮಾಜಭವನದಿಂದ ಒಳಪೇಟೆಯ ತನಕ ಆಕರ್ಷಕ ಮೆರವಣಿಗೆ ನಡೆಯಿತು.


