UN NETWORKS
ತೊಕ್ಕೊಟ್ಟು: ಹಿರಿಯ ನಾಗರಿಕರೊಬ್ಬರು ತನ್ನ ಸಹೋದರಿ ಮತ್ತು ಬಾವನಿಗೆ ರಾಡಿನಿಂದ ತಲೆಗೆ ಬಡಿದು ಕೊಲೆಗೆ ಯತ್ನಿಸಿದ ಘಟನೆ ತೊಕ್ಕೊಟ್ಟುವಿನ ಕಾಪಿಕಾಡು ಒಂದನೇ ಅಡ್ಡಕ್ರಾಸಿನಲ್ಲಿ ಭಾನುವಾರ ಮಧ್ಯಾಹ್ನ ವೇಳೆ ಸಂಭವಿಸಿದ್ದು, ಆರೋಪಿ ಠಾಣೆಗೆ ತೆರಳಿ ಶರಣಾಗಿದ್ದಾರೆ.
ಕಾಪಿಕಾಡು ನಿವಾಸಿ ಜಾನೆಟ್ ಡಿಸೋಜಾ(58) ಮತ್ತು ಬಾವ ಜೋಸೆಫ್ (65) ಎಂಬವರ ತಲೆಗೆ ರಾಡಿನಿಂದ ಬಡಿದು ಕೊಲೆಗೆ ಯತ್ನಿಸಲಾಗಿದೆ. ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾನೆಟ್ ಅವರ ಹಿರಿಯ ಸಹೋದರ ಡೇನಿಸ್ (78) ಎಂಬವರು ಕೃತ್ಯ ನಡೆಸಿದ್ದು, ಬಳಿಕ ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.
`ನೋಡಿಕೊಳ್ಳುತ್ತಿರಲಿಲ್ಲ’ : ಹಿರಿಯ ನಾಗರಿಕನಾಗಿರುವ ಡೇನಿಸ್ ಅವರು ಅವಿವಾಹಿತರಾಗಿದ್ದಾರೆ. ಸಿವಿಲ್ ಗುತ್ತಿಗೆದಾರನಾಗಿದ್ದ ಅವರು ಸಹೋದರಿ ಹಾಗೂ ಸಹೋದರಿಯರ ಜವಾಬ್ದಾರಿಯನ್ನು ಯುವ ಹರೆಯದಲ್ಲಿ ವಹಿಸಿಕೊಂಡಿದ್ದರು. ತಮ್ಮ ಪಾಲಿನ ಮನೆಯನ್ನೂ ಸಹೋದರಿಯ ಹೆಸರಿಗೆ ಮಾಡಿಕೊಂಡಿದ್ದ ಅವರು, ಸಹೋದರಿಯ ಕುಟುಂಬದ ಜೊತೆಗೆ ಒಂದೇ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಕೆಲ ವರ್ಷಗಳಿಂದ ಸಹೋದರಿ ಮತ್ತು ಬಾವ ಸರಿಯಾಗಿ ಉಪಚರಿಸುತ್ತಿಲ್ಲ, ಮರ್ಯಾದೆ ನೀಡದೆ, ಆಹಾರವನ್ನು ನೀಡುತ್ತಿರಲಿಲ್ಲ ಅನ್ನುವ ಆರೋಪ ಆರೋಪಿ ಡೇನಿಸ್ ಅವರದ್ದಾಗಿದೆ. ಈ ವಿಚಾರದಲ್ಲಿ ಹಲವು ಬಾರಿ ಗಲಾಟೆ ನಡೆಯುತ್ತಲೇ ಇತ್ತು. ಈ ನಡುವೆ ಭಾನುವಾರ ಮಧ್ಯಾಹ್ನ ವೇಳೆ ಮನೆಯೊಳಗಡೆ ಮಲಗಿದ್ದ ಸಹೋದರಿ ಮತ್ತಾಕೆಯ ಪತಿಯ ತಲೆಗೆ ಮನೆಯೊಳಗೆ ಇದ್ದಂತಹ ಕಬ್ಬಿಣದ ರಾಡಿನಿಂದ ಬಡಿದು ಕೊಲೆಗೆ ಯತ್ನಿಸಿದ್ದಾರೆ. ಹಲ್ಲೆಯ ತೀವ್ರತೆಗೆ ಜೋಸೆಫ್ ಅವರ ಮೆದುಳು ಹೊರಬಂದಿದ್ದು, ಅವರನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾನೆಟ್ ಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಕೊಲೆ ಎಂಬ ಸುದ್ಧಿ ಹಬ್ಬಿತ್ತು : ಮನೆಯೊಳಗಡೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ದಂಪತಿಯನ್ನು ಆರೋಪಿ ಡೇನಿಸ್ ಕಿರಿಯ ಸಹೋದರ ಓಸ್ವಾಲ್ಡ್ ಅವರು ಮೊದಲಿಗೆ ನೋಡಿದ್ದಾರೆ. ಇಬ್ಬರನ್ನು ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿಯನ್ನು ನೀಡಲಾಗಿತ್ತು.
ಕಮೀಷನರ್ ಭೇಟಿ : ಕೊಲೆ ಎಂಬ ಸುದ್ಧಿ ಹಬ್ಬುತ್ತಿದ್ದಂತೆ ಸ್ಥಳಕ್ಕೆ ಮಂಗಳೂರು ಕಮೀಷನರ್ ಟಿ.ಆರ್ ಸುರೇಶ್ ಭೇಟಿ ನೀಡಿದ್ದಾರೆ. ಆ ಬಳಿಕ ವಿಚಾರಣೆ ನಡೆಸಿದಾಗ ಕೊಲೆಯತ್ನ ಪ್ರಕರಣ ಎಂಬುದು ಗೊತ್ತಾಗಿದೆ. ಉಳ್ಳಾಲ ಪೊಲೀಸರಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಸ್ಥಳಕ್ಕೆ ಸಹಾಯಕ ಪೊಲೀಸ್ ಅಧೀಕ್ಷಕ ರಾಮ ರಾವ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಉಪನಿರೀಕ್ಷಕರುಗಳಾದ ವಿನಾಯಕ್ ತೋರಗಲ್, ಗುರುವಪ್ಪ ಕಾಂತ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.


