UN NETWORKS
ದೇರಳಕಟ್ಟೆ: ಮಂಗಳೂರಿನ ಕುದ್ರೋಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಶ್ರೀ ಗೋಕರ್ಣನಾಥ ಕೋ ಓಪರೇಟಿವ್ ಬ್ಯಾಂಕ್ ನ 15ನೇ ದೇರಳಕಟ್ಟೆ ಶಾಖೆ ದೇರಳಕಟ್ಟೆ ಜಂಕ್ಷನ್ ನ ಮೋರ್ ಸೂಪರ್ ಮಾರ್ಕೆಟ್ ಬಳಿ ಇರುವ ಸಿಟಿ ಸೆಂಟರ್ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಶುಭಾರಂಭಗೊಂಡಿತು.
ಭದ್ರತಾ ಕೊಠಡಿ ಉದ್ಘಾಟಿಸಿದ ದೇರಳಕಟ್ಟೆ ಪಾನೀರಿನ ಅವರ್ ಲೇಡಿ ಆಫ್ ಮರ್ಸಿ ಚರ್ಚ್ ನ ಧರ್ಮಗುರು ರೆ.ಫಾ. ಡೆನಿಸ್ ಸುವಾರಿಸ್ ಮಾತನಾಡಿ ಸಮಾಜದ ಬೆಳವಣಿಗೆಗೆ ರಾಷ್ಟ್ರೀಕೃತ ಬ್ಯಾಂಕ್ ಗಳೊಂದಿಗೆ ಕೋ ಅಪರೇಟಿವ್ ಬ್ಯಾಂಕ್ ಗಳು ಅಗತ್ಯ. ಗ್ರಾಮಾಂತರ ಪ್ರದೇಶಗಳಲ್ಲಿ ಅಲ್ಲಿನ ಜನರಿಗೆ ಅನುಕೂಲವಾಗುವಂತಹ ರೀತಿಯಲ್ಲಿ ಸಹಕಾರಿ ಬ್ಯಾಂಕ್ ಗಳು ಕಾರ್ಯಾಚರಿಸುತ್ತಿದೆ . ಇದರಿಂದ ಅಲ್ಲಿನ ಜನ ಸ್ವಾವಲಂಬಿಯಾಗಲು ಸಹಕಾರಿಯಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಸಣ್ಣ ಡೆಪಾಸಿಟ್ ಅನ್ನು ದೊಡ್ಡವರಿಗೆ ಮಾತ್ರ ಕಾಯದೆ ಸಣ್ಣ ಬಂಡವಾಳ ಹೂಡುವವರಿಗೆ ಆದ್ಯತೆ ನೀಡಬಹುದು. ಸರ್ವಧರ್ಮದ ಜನರ ಅನ್ಯೋನ್ಯತೆಯಿಂದ ಬಾಳುವ ದೇರಳಕಟ್ಟೆ ಪ್ರದೇಶದಲ್ಲಿ ಉತ್ತಮ ವ್ಯವಹಾರ ನಡೆಯುವುದರಲ್ಲಿ ಸಂದೇಹವಿಲ್ಲ ಎಂದರು. ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ ಮಾತನಾಡಿ ಸಹಕಾರ ಸಂಘಗಳು ಮತ್ತು ಬ್ಯಾಂಕುಗಳ ವ್ಯತ್ಯಾಸ ಜನರಿಗೆ ಗೊತ್ತಿಲ್ಲ. ಸಮಾನಮನಸ್ಕರಿಂದ ಸ್ಥಾಪನೆಗೊಂಡ ಸಹಕಾರಿ ಸಂಘಗಳು ರಾಜ್ಯ ಸರಕಾರ ಮತ್ತು ರಿಸವ್ ್ ಬ್ಯಾಂಕ್ ಆಫ್ ಇಂಡಿಯಾ ದ ಇಲಾಖೆಗಳಿಂದ ನಿಯಂತ್ರಣಕ್ಕೆ ಒಳಪಟ್ಟ ವ್ಯವಸ್ಥೆಯಾಗಿದೆ. ಜಿಲ್ಲೆಯಾದ್ಯಂತ 840 ಸಹಕಾರಿ ಸಂಸ್ಥೆಗಳು ಕಾರ್ಯಾಚರಿಸುತ್ತಿದೆ. ಗ್ರಾಮಾಂತರ ಭಾಗದಲ್ಲಿ ಡಿಸಿಸಿ ಸೇರಿದಂತೆ ಎಂಟು ಸಹಕಾರಿ ಸಂಘಗಳು ಕಾರ್ಯಾಚರಿಸುತ್ತಿದೆ.
ಸಹಕಾರ ಸಂಘ ಯಶಸ್ವಿಯಾಗಲು ಅಲ್ಲಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ನಂಬಿಕೆ ಮುಖ್ಯವಾಗಿದೆ. ಈವರೆಗೆ ಲೋಪದೋಷಗಳನ್ನು ಹೊಂದದೆ ಶ್ರೀ ಗೋಕರ್ಣನಾಥ ಸಹಕಾರಿ ಸಂಘ ಕಾರ್ಯಾಚರಿಸುತ್ತಿದೆ. ಹೊಸ ಚಿಂತನೆಗಳನ್ನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಳವಡಿಸದೇ ಇದ್ದಲ್ಲಿ ಸ್ಪರ್ಧಾತ್ಮಕ ಯುಗದಲ್ಲಿ ಬ್ಯಾಂಕುಗಳಿಗೆ ಸ್ಥಾನಮಾನ ಸಿಗಲು ಅಸಾಧ್ಯ. ಇಂತಹ ಚಿಂತನೆಗಳನ್ನು ನಿರ್ದೇಶಕರು ಹೊಂದುವುದರ ಜೊತೆಗೆ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕಿದೆ. ದೇರಳಕಟ್ಟೆ ಎಂದರೆ ಹಲವು ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ಪ್ರದೇಶ. ದೇಶದ ವಿವಿಧ ಮೂಲೆಗಳಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸುತ್ತಾರೆ. ಅವರ ಕಾಲಬುಡಕ್ಕೆ ಸೇವೆ ಒದಗಿಸುವ ಪ್ರಯತ್ನ ಶಾಖೆಯಿಂದ ಆರಂಭಿಸಬಹುದು. ವಿದ್ಯಾರ್ಥಿಗಳ ಹೆತ್ತವರ ಜೊತೆಗೆ ಸಂಪರ್ಕಿಸಿ ವಿದ್ಯಾರ್ಥಿಗಳ ಹಾಸ್ಟೆಲ್, ಶಿಕ್ಷಣ ಖರ್ಚು ಕಳುಹಿಸುವುದನ್ನು ತಮ್ಮ ಬ್ಯಾಂಕಿನಲ್ಲಿ ಖಾತೆ ತೆರೆದು ಆರಂಭಿಸಿ, ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಯತ್ನವನ್ನು ಮಾಡಬಹುದು. ಈ ಮೂಲಕ ಖಾತೆದಾರರು ಹೆಚ್ಚಾಗುತ್ತಾರೆ ಎಂದರು.
ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಗೋಪಾಲಕೃಷ್ಣ ಕೋಟ್ಯಾನ್ ಮಾತನಾಡಿ ಬ್ಯಾಂಕಿಂಗ್ ಸೇವೆ ಇಲ್ಲದ ಸಮಯದಲ್ಲಿ ಬಡ ಹಾಗೂ ಕೆಳ ವರ್ಗದ ಜನರಿಗೆ ಅನುಕೂಲವಾಗುವಂತೆ ಅವರಿಗೆ ಸೇವೆಯನ್ನು ಆರಂಭಿಸಿರುವ ಗೋಕರ್ಣನಾಥ ಬ್ಯಾಂಕ್ ಇದೀಗ 93 ವರ್ಷಗಳನ್ನು ಪೂರೈಸಿದೆ. ಪ್ರತಿ ವರ್ಷವೂ ಹಂತಹಂತವಾಗಿ ಬೆಳೆದು ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಆಧುನಿಕ ವ್ಯವಸ್ಥೆಯನ್ನು ಹೊಂದಿರುವ ಬ್ಯಾಂಕಿನಲ್ಲಿ ಸೇಫ್ ಡೆಪಾಸಿಟ್ ಲಾಕರ್, ಮೊಬೈಲ್ ಬ್ಯಾಂಕಿಂಗ್, ಎನ್‍ಟಿಎಫ್‍ಎಸ್ ಇನ್ನಿತರ ಸೇವೆಗಳನ್ನು ಹೊಂದಿದೆ. ಎಟಿಎಂ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ. ಜನರಿಗೆ ಎಲ್ಲಾ ರೀತಿಯಲ್ಲಿ ಸ್ಪಂಧಿಸುವ ಸಿಬ್ಬಂದಿ ವರ್ಗವನ್ನು ಬ್ಯಾಂಕ್ ಹೊಂದಿದೆ . ಜನ ಖಾತೆಗಳನ್ನು ತೆರೆದು ಬ್ಯಾಂಕನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವಂತೆ ಮಾಡಬೇಕಿದೆ ಎಂದರು.
ಬ್ಯಾಂಕ್ ನ ಗಣಕ ಯಂತ್ರಕ್ಕೆ ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಕೃಷ್ಣಪ್ಪ ಚಾಲನೆ ನೀಡಿದರು. ದೇರಳಕಟ್ಟೆ ಶ್ರೀ ಸ್ವಾಮಿ ಅಯ್ಯಪ್ಪ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಅಡ್ಯಂತಾಯ, ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಗ್ರಾಮಚಾವಡಿ ಇಲ್ಲಿನ ಅಧ್ಯಕ್ಷ ಗಂಗಾಧರ ಪೂಜಾರಿ, ಸಿಟಿ ಸೆಂಟರ್ ಕಾಂಪ್ಲೆಕ್ಸ್‍ನ ಮಾಲಕ ಟಿ.ಎಂ. ಸುಹೇಬï ಕಾಸರಗೋಡು, ನಿರ್ದೇಶಕರಾದ ಸಂದ್ಯಾ ಕೆ. ಬಂಗೇರ, ಹೇಮಾ ದಾಮೋದರ ನಿಸರ್ಗ, ರಮಣಿ ಉಮೇಶ್ ಕೆ., ಲತಾ ಯು.ಎಸ್., ಉದಯ ಕುಮಾರ್, ಗಣೇಶ್ ಪೂಜಾರಿ, ಕೆ.ಗೋಪಾಲ ಅಂಚನ್, ಮಹಾಬಲ ಬಂಗೇರ ಎನ್., ರಮಾನಾಥ ಕೋಟೆಕಾರು, ಎಸ್,ಜಿ, ಜೀವನ್‍ದಾಸ್, ರಾಘವ ಸನಿಲ್, ಮಿತ್ರ ಹೆರಾಜೆ, ಜಯರಾಮ ಕಾರಂದೂರು, ಬಿ. ಭಾಸ್ಕರ ಉಪಸ್ಥಿತರಿದ್ದರು.
ಬ್ಯಾಂಕ್‍ನ ಉಪಾಧ್ಯಕ್ಷ ರಾಜೇಶ್ ಕುಮಾರ್ ಜಿ. ಸುವರ್ಣ ಸ್ವಾಗತಿಸಿದರು. ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕ ಭರತ್ ಭೂಷಣ್ ಸುವರ್ಣ ಪ್ರಸ್ತಾವನೆಗೈದರು. ಸಿಬಂದಿ ಚಂದ್ರಶೇಖರ್ ಪುಂಜಂಗೋಡ್ ಕಾರ್ಯಕ್ರಮ ನಿರ್ವಹಿಸಿದರು. ಶಾಖಾಧಿಕಾರಿ ಜಯರಾಮ ಪೂಜಾರಿ ವಂದಿಸಿದರು.