ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಇಂದು ಉಳ್ಳಾಲ ಉರೂಸು ಸಮಾರಂಭಕ್ಕೆ ಭೇಟಿ ನೀಡಲಿರುವ ಮುಖ್ಯಮಂತ್ರಿಗಾಗಿ ಮಂಗಳೂರಿನಿಂದ ಉಳ್ಳಾಲದವರೆಗೆ ನಿನ್ನೆ ಪೊಲೀಸ್ ಇಲಾಖೆ ವತಿಯಿಂದ ನಡೆದ ರಿಹರ್ಸಲ್ ಕಾರ್ಯಕ್ರಮ ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ಕಂಟಕವಾಗಿ ಪರಿಣಮಿಸಿ ಮಧ್ಯಾಹ್ನದಿಂದ ತಡರಾತ್ರಿವರೆಗೂ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕಾಲಿಕವಾಗಿ ಸುರಿದ ಮಳೆಯ ನಡುವೆ ಉಳಿಯುವಂತಾಯಿತು.
ರಸ್ತೆಯುದ್ದಕ್ಕೂ ವಾಹನಗಳ ಸಾಲು. ರಾಷ್ಟ್ರೀಯ ಹೆದ್ದಾರಿಯಲ್ಲಿ ನೇತ್ರಾವತಿ ಸೇತುವೆಯಿಂದ ಕೋಟೆಕಾರು ಬೀರಿ , ಮಂಗಳೂರು ವಿ.ವಿ ರಸ್ತೆಯಲ್ಲಿ ಕುತ್ತಾರಿನವರೆಗೆ, ಉಳ್ಳಾಲ ರಸ್ತೆಯಲ್ಲಿ ಅಬ್ಬಕ್ಕ ಸರ್ಕಲಿನವರೆಗೂ ವಾಹನಗಳು ಸರತಿ ಸಾಲಿನಲ್ಲಿ ನಿಂತಿತ್ತು. ಮಧ್ಯಾಹ್ನ ವೇಳೆ ದಿಢೀರನೆ ಪೊಲೀಸ್ ವಾಹನ, ಆಂಬ್ಯುಲೆನ್ಸ್, ಅಗ್ನಿ ಶಾಮಕ ವಾಹನ ಕೊಣಾಜೆ ಕಡೆಗೆ ತೆರಳಿ ವಾಪಸ್ಸಾದರೆ ಮತ್ತೆ ಸಂಜೆ ಹೊತ್ತಿಗೆ ಮತ್ತೆ ಅದೇ ವಾಹನಗಳ ಸಾಲು ಮಂಗಳೂರಿನಿಂದ ಉಳ್ಳಾಲ ತಲುಪಿತು. ಕಂಡವರೆಲ್ಲರೂ ಮುಖ್ಯಮಂತ್ರಿ ಉಳ್ಳಾಲಕ್ಕೆ ಬಂದರಂತೆ, ಆದಕಾರಣ ವಾಹನಗಳನ್ನು ನಿಲ್ಲಿಸಿದ್ದಾರೆ ಅನ್ನುತ್ತಿದ್ದರೆ, ವಾಸ್ತವವಾಗಿ ಅಲ್ಲಿ ನಡೆಯುತ್ತಿದ್ದುದು ಮುಖ್ಯಮಂತ್ರಿ ಭೇಟಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ರಿಹರ್ಸಲ್. ಇದರಿಂದ ಕೆಲಸದಿಂದ ಮನೆಗೆ ತಲುಪಬೇಕಾದವರು , ಪರೀಕ್ಷೆ ಮುಗಿಸಿ ತೆರಳುವ ವಿದ್ಯಾರ್ಥಿಗಳು, ಉರೂಸು ಸಮಾರಂಭಕ್ಕೆ ಹೋಗಬೇಕಾದವರು , ರೈಲು, ವಿಮಾನ ನಿಲ್ದಾಣ ಹೋಗಬೇಕಾದವರು ಗಂಟೆಗಳ ಕಾಲ ರಸ್ತೆಯಲ್ಲೇ ಉಳಿದರು.
ತುಂಬಿ ತುಳುಕುತ್ತಿದ್ದ ಬಸ್ಸುಗಳು :
ಸಂಜೆ ವೇಳೆ ಮನೆಗೆ ಹೋಗುವವರು, ಉರೂಸು ತೆರಳುವವರು ಬಸ್ಸುಗಳಲ್ಲಿ ತುಂಬಿದ್ದರಿಂದ ಬಸ್ಸೊಳಗಡೆ ಗಂಟೆಗಳ ಕಾಲ ಪ್ರಯಾಣಿಕರು ಪರದಾಡುವಂತಾಯಿತು. ಬಸ್ಸೊಳಗಡೆ ನಿಂತ ಪ್ರಯಾಣಿಕರು ಅತ್ತ ನಿಲ್ಲಲೂ ಆಗದೆ, ಕುಳಿತುಕೊಳ್ಳಲು ಸಾಧ್ಯವಾಗದೆ ಮುಖ್ಯಮಂತ್ರಿ ರಿಹರ್ಸಲ್ ಗಾಗಿ ನರಕಯಾತನೆ ಅನುಭವಿಸಬೇಕಾಯಿತು. ಇಂತಹ ದುಸ್ತರ ಸ್ಥಿತಿಯಲ್ಲಿ ಮುಖ್ಯಮಂತ್ರಿ ಭೇಟಿ ಹಲವರು ಹಿಡಿಶಾಪ ಹಾಕುವಂತಾಯಿತು.









