UN NETWORKS
ಉಳ್ಳಾಲ: ನಾಯಿಯೊಂದು ಅಡ್ಡಬಂದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಮುನ್ನೂರು ಗ್ರಾಮದ ರಾಣಿಪುರ ಸಮೀಪ ಸೋಮವಾರ ತಡರಾತ್ರಿ ನಡೆದಿದೆ.
ರಿಕ್ಷಾ ಚಾಲಕ ಮದಕ ನಿವಾಸಿ ಮಹಮ್ಮದ್ ಆಲಿ (50) ಮೃತ ದುರ್ದೈವಿ. ಕುತ್ತಾರು ಸಮೀಪ ರಿಕ್ಷಾ ನಿಲ್ಲಿಸುತ್ತಿದ್ದ ಇವರು ಕೆಲಸ ಮುಗಿಸಿ ಕುತ್ತಾರಿನಿಂದ ರಾತ್ರಿ 10.30 ಸುಮಾರಿಗೆ ಮದಕ ಸಮೀಪ ಮನೆಗೆ ತೆರಳುತ್ತಿದ್ದ ಸಂದರ್ಭ ರಾಣಿಪುರ ಇಳಿಜಾರು ಪ್ರದೇಶದಲ್ಲಿ ನಾಯಿಯೊಂದು ರಸ್ತೆಗೆ ಅಡ್ಡವಾಗಿ ದಾಟಿತ್ತು. ಅದರ ಪ್ರಾಣ ಉಳಿಸಲೆಂದು ರಿಕ್ಷಾ ತಿರುಗಿಸಿದ ಪರಿಣಾಮ ರಿಕ್ಷಾ ಅಡ್ಡಬಿದ್ದು, ಕೆಳಗಿನ ಕಂದಕಕ್ಕೆ ಉರುಳಿಬಿದ್ದಿದೆ. ಘಟನೆಯಲ್ಲಿ ಅಡ್ಡಬಂದ ನಾಯಿಯೂ ಸಹ ಮೃತಪಟ್ಟಿದೆ. ಎದೆಯ ಭಾಗಕ್ಕೆ ಹೊಡೆದ ಗಾಯವಾಗಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಾದವರು ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾಗಿರುವ ಮಹಮ್ಮದ್ ಆಲಿ ಮನೆಯಲ್ಲಿ ಬಡತನ ಹಾಗೂ ಪತ್ನಿಯೂ ಅನಾರೋಗ್ಯದಿಂದ ಇದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ರಿಕ್ಷಾ ಕೂಡಾ ಸಂಪೂರ್ಣ ನುಜ್ಜುಗುಜ್ಜಾಗಿದೆ.


