UN NETWORKS
ಉಳ್ಳಾಲ: ಕೇರಳದಿಂದ ಗಾಂಜಾವನ್ನು ಅಕ್ರಮವಾಗಿ ತಂದು ಮಂಗಳೂರು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಕಾರು ಸಮೇತ ಸಿಸಿಬಿ ಪೊಲೀಸರು ತಲಪಾಡಿ ಟೋಲ್ ಗೇಟ್ ಸಮೀಪ ಭಾನುವಾರ ಬಂಧಿಸಿದ್ದಾರೆ.
ಕಾಟಿಪಳ್ಳ ಕೃಷ್ಣಾಪುರದ ಕೇಶವ ಸನಿಲ್ (47) ಬಂಧಿತ ಆರೋಪಿ. ಕಾರಿನಲ್ಲಿ ಗಾಂಜಾ ತಂದು ಮಂಗಳೂರು ನಗರದಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿರುವ ಖಚಿತ ಮಾಹಿತಿ ಪಡೆದ ಸಿಸಿಬಿ ತಂಡ ತಡೆಹಿಡಿದು ಬಂಧಿಸಿದ್ದಾರೆ.
ಬಂಧಿತನಿಂದ 1.830 ಕೆಜಿ ಗಾಂಜಾ, ಮೊಬೈಲ್ ಫೋನ್ ಹಾಗೂ ಹುಂಡೈ ಇಯಾನ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ.2,85,500 ಎಂದು ಅಂದಾಜಿಸಲಾಗಿದೆ. ಈತ ಕೇರಳ ಮೂಲದ ವ್ಯಕ್ತಿಯಿಂದ ಗಾಂಜಾ ಖರೀದಿಸಿ ಮಂಗಳೂರು ನಗರದಲ್ಲಿ ಮಾರಾಟಕ್ಕೆ ತಂದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದು, ಹೆಚ್ಚಿನ ತನಿಖೆಗಾಗಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಲಾಗಿದೆ.
ಈತನ ವಿರುದ್ಧ ಮುಲ್ಕಿ ಠಾಣೆಯಲ್ಲಿ ಕೊಲೆಯತ್ನ, ಸುರತ್ಕಲ್ ಠಾಣೆಯಲ್ಲಿ ಕೊಲೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಒಟ್ಟು 12 , ಪಣಂಬೂರು ಠಾಣೆಯಲ್ಲಿ ಕೊಲೆಯತ್ನ, ಉಡುಪಿ ಜಿಲ್ಲೆಯ ಕಾರ್ಕಳ ಠಾಣೆಯಲ್ಲಿ ಗಾಂಜಾ ಸೇರಿದಂತೆ ಒಟ್ಟು 15 ಪ್ರಕರಣಗಳು ಈತನ ಮೇಲೆ ಇದೆ.


