UN NETWORKS
ಹರೇಕಳ: ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ವಿನೂತನವಾಗಿ “ಚಿಣ್ಣರ ನಡಿಗೆ ವಿದ್ಯಾದೇಗುಲ ಕಡೆಗೆ” ಎನ್ನುವ ಶೀರ್ಷಿಕೆ ಅಡಿಯಲ್ಲಿ ಆಚರಿಸಲ್ಪಡಲಾಯಿತು.
ಎಂಟನೇಯ ತರಗತಿಗೆ ನೂತನವಾಗಿ ಸೇರ್ಪಡೆಗೊಂಡ 88 ವಿದ್ಯಾರ್ಥಿಗಳನ್ನು ಮಾವಿನ ಎಲೆ ತೋರಣ ಮತ್ತು ಬಾಳೆಗಿಡಗಳಿಂದ ಶೃಂಗರಿಸಲ್ಪಟ್ಟ ಸ್ವಾಗತ ಕಮಾನುನಲ್ಲಿ ಬ್ಯಾಂಡ್ ಸೆಟ್ ವಾದ್ಯ ಘೋಷಗಳೊಂದಿಗೆ ಶಾಲಾ ಸಭಾಂಗಣದ ಕಡೆ ಬರಮಾಡಿಕೊಳ್ಳಲಾಯಿತು.
ಮೊದಲಿಗೆ ಶಾಲಾ ಶಿಕ್ಷಕಿ ವೃಂದದವರಾದ ಉಷಾಲತ, ಮೋಹಿನಿ, ಕುಮುದ, ಸ್ಮಿತಾ, ನೂತನ ಇವರುಗಳು ನೂತನ ಮಕ್ಕಳನ್ನು ಆರತಿ ಬೆಳಗಿ, ಹಣೆಗೆ ಕುಂಕುಮವನ್ನಿಟ್ಟು ಸ್ವಾಗತಿಸಿದರು. ನಂತರ ವಿದ್ಯಾರ್ಥಿಗಳು ತಮ್ಮ ಪೋಷಕರ ಪಾದ ಮುಟ್ಟಿ ಆಶೀರ್ವಾದ ತೆಗೆದುಕೊಂಡಾಗ ಮಕ್ಕಳಿಗೆ ಅಕ್ಷತೆ ಮತ್ತು ಹೂವನ್ನು ಹಾಕಿ ಗೌರವಿಸಲಾಯಿತು. ಅದರಂತೆ ಹೆತ್ತವರು ಶಿಕ್ಷಕ ವೃಂದದವರಿಗೆ ಗುರುದಕ್ಷಿಣೆಯನ್ನು ನೀಡಿ ಗೌರವ ಸಲ್ಲಿಸಿದರು.
ತದ ನಂತರ ನಡೆದ ಸೊಗಸಾದ ಸಭಾ ಕಾರ್ಯಕ್ರಮವನ್ನು ಹಿಂಗಾರವನ್ನು ಅರಳಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಸಾವಿತ್ರಿ ಎಸ್.ರಾವ್‍ರವರು ಮಕ್ಕಳು ಅತ್ಯಧಿಕ ಅಂಕಗಳನ್ನು ಪಡೆದ ಮಾತ್ರಕ್ಕೆ ಪ್ರತಿಭಾವಂತ ಮಕ್ಕಳಾಗಲು ಸಾಧ್ಯವಿಲ್ಲ. ಅಂಕಗಳೊಂದಿಗೆ ಪಠ್ಯೇತರ ಚಟುವಟಿಕೆ ಹಾಗೂ ಜೀವನದ ಪ್ರತಿಯೊಂದು ಹಂತದಲ್ಲೂ ಸಂಸ್ಕಾರವನ್ನು ಅಳವಡಿಸಿಕೊಳ್ಳುವುದರೊಂದಿಗೆ ಹಿರಿಯರಿಗೆ, ಗುರುಗಳಿಗೆ, ತಂದೆ ತಾಯಿಯವರಿಗೆ ಮತ್ತು ಈ ಭೂಮಿಗೆ ಋಣಿಯಾಗಿರಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈಯವರು ವಹಿಸಿ “ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕೆಂದರೆ, ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ಹಮ್ಮಿಕೊಂಡು ಅವುಗಳನ್ನು ಅನುಷ್ಠಾನಕ್ಕೆ ತರುವುದು ಪ್ರಾಮುಖ್ಯವಾಗಿರುತ್ತದೆ. ಈ ನೆಲೆಯಲ್ಲಿ ನಮ್ಮ ವಿದ್ಯಾಸಂಸ್ಥೆ ಮುಂಚೂಣಿಯಲ್ಲಿದ್ದುದರಿಂದ ಈ ವರ್ಷ ಮಕ್ಕಳ ಸಂಖ್ಯೆಯು ವೃದ್ಧಿಯಾಗಿರುತ್ತದೆ” ಎಂದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಲಾಯಿತು. ಸರಕಾರದಿಂದ ನೀಡಲ್ಪಡುವ ಪಠ್ಯ ಪುಸ್ತಕವನ್ನು ನೀಡಲಾಯಿತು. ಶಿಕ್ಷಕ ರವಿಶಂಕರ್ ಪ್ರಾರ್ಥನೆ ಗೈದರು. ಕೃಷ್ಣಶಾಸ್ತ್ರಿ ವಂದಿಸಿದರು. ಶಿಕ್ಷಕ ಶಿವಕುಮಾರ್ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ನಿರೂಪಿಸಿದರು.


