UN NETWORKS
ಉಳ್ಳಾಲ: ಹೆತ್ತವರು ಮಕ್ಕಳನ್ನು ಸಮಾಜದೊಂದಿಗೆ ಬೆರೆಯಲು ಬಿಡದ ಕಾರಣ ಮಕ್ಕಳಿಗೆ ಸಮಾಜದ ಮೇಲೆ ಅಭಿಮಾನ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಮಕ್ಕಳನ್ನು ಸಮಾಜದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಅವರಿಗೆ ಸಂಸ್ಕಾರ ನೀಡುವ ಕಾರ್ಯ ಮಾಡಬೇಕು ಎಂದು ಕರ್ನಾಟಕ ಸರಕಾರಿ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಇಲ್ಲಿನ ನಿವೃತ್ತ ವ್ಯವಸ್ಥಾಪಕ ಹಾಗೂ ಬೆಂಗಳೂರು ಬಿಲ್ಲವ ಅಸೋಸಿಯೇಷನ್‍ನ ಖಜಾಂಚಿ ಮಾಚ ಬಿಲ್ಲವ ಅಭಿಪ್ರಾಯಪಟ್ಟರು.
ಅವರು ಬಿಲ್ಲವ ಸೇವಾ ಸಮಾಜ ಕೊಲ್ಯ ಸೋಮೇಶ್ವರ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕೊಲ್ಯ ಇಲ್ಲಿ ಏರ್ಪಡಿಸಿದ್ದ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಕ್ಕಳು ಪುಸ್ತಕ ವಿದ್ಯಾರ್ಥಿವೇತನ ಪಡೆದರೆ ಸಾಲದು ತಾವು ಸಮಾಜದಿಂದ ಪಡೆದ ಈ ಶೈಕ್ಷಣಿಕ ಕೊಡುಗೆಯನ್ನು ಜ್ಞಾಪಕದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸದೃಡರಾದಾಗ ಉಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಂಘಕ್ಕೆ ಸಹಕಾರ ನೀಡುವ ಕಾರ್ಯ ಮಾಡಬೇಕು. ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ಬಿಲ್ಲವ ಸಮಾಜ ಪ್ರತೀ ವರ್ಷ ಒರ್ವ ಇಂಜಿನಿಯರ್ ಮತ್ತು ವೈದ್ಯ ವಿದ್ಯಾರ್ಥಿಯನ್ನು ದತ್ತು ತೆಗೆದುಕೊಳ್ಳುವ ಕಾರ್ಯವನ್ನು ನಡೆಸುತ್ತಾ ಬರುತ್ತಿದೆ ಇಂತಹ ಕಾರ್ಯ ಅಲ್ಲಿನ ದಾನಿಗಳಿಂದ ಸಾಧ್ಯವಾಗಿದೆ ಎಂದರು.
ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕೇಂದ್ರ ಸಮಿತಿ ತೊಕ್ಕೊಟ್ಟು ಇದರ ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿ ಬೇಡದ ವಿಚಾರದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಬೇಡಿ, ಶೈಕ್ಷಣಿಕವಾಗಿ ವಲಿಷ್ಠರಾಗಿ ತಮಗೆ ಸಹಕಾರ ನೀಡಿದ ಸಂಘ ಸಂಸ್ಥೆಗಳ ನೆನಪನ್ನು ಮಾಡುವ ಕಾರ್ಯ ಮಾಡಬೇಕು ಎಂದರು.
ಕುಂಪಲ ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದ ಪ್ರದಾನ ಅರ್ಚಕ ಭವಾನಿಶಂಕರ ಶಾಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಮಂಗಳೂರು ಯುವವಾಹಿನಿ ಮಹಿಳಾ ಘಟಕದ ನಿಕಟಪೂರ್ವ ಅಧ್ಯಕ್ಷೆ ಸುಪ್ರಿತಾ ಕುಮಾರಿ, ದಸ್ತಾವೇಜು ಬರಹಗಾರ ಸುಧೀರ್ ಬಬ್ಬುಕಟ್ಟೆ, ಸಿವಿಲ್ ಗುತ್ತಿಗೆದಾರ ಚಂದ್ರಹಾಸ ಮೂರುಕಟ್ಟ , ಬಂಟಪ್ಪ ಪೂಜಾರಿ ಮುಂಬೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. , ಬ್ರಹ್ಮಶ್ರೀ ನಾರಾಯಣ ಮಹಿಳಾ ಸಂಘದ ಅಧ್ಯಕ್ಷೆ ಹೇಮಲತಾ ಎಸ್. ಕರ್ಕೇರ, ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷ ಕುಸುಮಾಕರ್ ಕುಂಪಲ ಉಪಸ್ಥಿತರಿದ್ದರು.
ಬಿಲ್ಲವ ಸೇವಾ ಸಮಾಜ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷ ಈಶ್ವರ್ ಸುವರ್ಣ ಕನೀರುತೋಟ ಸ್ವಾಗತಿಸಿದರು ವಿದ್ಯಾರ್ಥಿ ವೇತನ ಮತ್ತು ಫಲಾನುಭವಿಗಳ ವಿವರವನ್ನು ಸಂಘದ ಕಾರ್ಯದರ್ಶಿ ವೇಣುಗೋಪಾಲ್ ಕೊಲ್ಯ ನೀಡಿದರು. ಕೋಶಾಧಿಕಾರಿ ಸೀತಾರಾಮ ಕರ್ಕೇರ ವಂದಿಸಿದರು. ಜೈಕುಮಾರ್ ಪರ್ಯತ್ತೂರು ಕಾರ್ಯಕ್ರಮ ನಿರ್ವಹಿಸಿದರು.














































































