UN NETWORKS
ಕೊಣಾಜೆ: ಮಕ್ಕಳಿಗೆ ಶಾಲಾ ಪರಿಕರಗಳನ್ನು ನೀಡುವ ಸಂದರ್ಭ ಅದರ ಮೇಲಿನ ಜವಾಬ್ದಾರಿಯನ್ನೂ ತಿಳಿಸುವ ಕಾರ್ಯ ಆದಾಗ ಮಕ್ಕಳಿಗೆ ಅದರ ಮೌಲ್ಯದ ಅರಿವಾಗುತ್ತದೆ ಎಂದು ಮಂಗಳೂರು ವಿವಿ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ| ಬೋಜ ಪೂಜಾರಿ ಅಭಿಪ್ರಾಯಪಟ್ಟರು.
ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದಿಂದ ರವಿವಾರ ನಡೆದ ಉಚಿತ ಪುಸ್ತಕ ವಿತರಣೆ ಹಾಗೂ ಭವಿಷ್ಯ ನಿರ್ಮಾಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಹಿಂದಿನ ಕಾಲದಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಅಪರೂಪಕ್ಕೆ ಒಂದರಂತೆ ಪೆನ್ಸಿಲ್ ಸೇರಿದಂತೆ ಶಾಲಾ ಪರಿಕರಗಳನ್ನು ನೀಡುತ್ತಿದ್ದರು. ಆದರೆ ಇಂದು ದಿನಕ್ಕೊಂದು ಪೆನ್ಸಿಲ್ ಸೇರಿದಂತೆ ಶಾಲಾ ಪರಿಕರಗಳ ಮೇಲೆ ಮಕ್ಕಳಿಗೆ ಜವಾಬ್ದಾರಿ ಮತ್ತು ಮೌಲ್ಯದ ಅರಿವಿರುವುದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಿಗೆ ಯಾವುದೇ ವಸ್ತು ನೀಡಿದಾಗ ಅದರ ಮೌಲ್ಯವನ್ನು ತಿಳಿಸುವ ಕಾರ್ಯ ಆಗಬೇಕು ಎಂದ ಅವರು ಇಂದಿನ ವಿದ್ಯಾರ್ಥಿಗಳು ಚುರುಕಾಗಿದ್ದು, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯ ಬಳಿಕ ಯಾವ ಕೋರ್ಸು ಆಯ್ಕೆ ಮಾಡಬೇಕು ಎನ್ನುವ ಗೊಂದಲ ನಿವಾರಣೆಗೆ ಇಂತಹ ಕಾರ್ಯಾಗಾರಗಳು ಪೂರಕ ಎಂದರು.
ಎಂಆರ್ ಪಿ ಎಲ್ ನ ಸಹಾಯಕ ವ್ಯವಸ್ಥಾಪಕ ಸತೀಶ್ ಪಾವೂರು ಭಂಡಾರಮನೆ ಮಾತನಾಡಿ ವಿದ್ಯಾರ್ಥಿಗಳು ಅನುಸರಿಸುವ ದಾರಿ ನೇರವಾಗಿದ್ದರೆ ಗುರಿಯೂ ಸುಲಭವಾಗುತ್ತದೆ. ಕಂಪ್ಯೂಟರ್, ಮೊಬೈಲ್, ಅಂತರ್ಜಾಲ ಇಂದಿನ ಜೀವನದ ಅವಿಭಾಜ್ಯ ಅಂಗವಾದರೂ ಅದರ ಮಹತ್ವ ಅರಿತು ಬಳಕೆ ಮಾಡಿದರೆ ಉತ್ತಮ ಎಂದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಗಂಗಾಧರ ಪೂಜಾರಿ ಸುದರ್ಶನ ನಗರ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ತರಬೇತುದಾರ ಜೆ.ಸಿ.ರಾಜೇಂದ್ರ ಭಟ್ ಹಾಗೂ ಯುವ ವಾಹಿನಿ ವಿದ್ಯಾನಿಧಿ ಟ್ರಸ್ಟ್ ನ ಗೌರವಾಧ್ಯಕ್ಷ ಚಂದ್ರಶೇಖರ್ ಎಸ್.ಎಡಪದವು ಸಂಪನ್ಮೂಲ ವ್ಯಕ್ತಿಯಗಳಾಗಿದ್ದರು. ಉದ್ಯಮಿ ಮೋಹನ್‍ದಾಸ್ ಕುಂಟಲ ಲಚ್ಚಿಲು, ಮಹಿಳಾ ವಿಭಾಗದ ಅಧ್ಯಕ್ಷೆ ಬಬಿತಾ ಬಾನಬೆಟ್ಟು ಹಾಗೂ ಮಂದಿರದ ಪ್ರಧಾನ ಅರ್ಚಕ ದೇವಪ್ಪ ಶಾಂತಿ ಮುಖ್ಯ ಅತಿಥಿಗಳಾಗಿದ್ದರು.
ಪ್ರಧಾನ ಕಾರ್ಯದರ್ಶಿ ದಾಮೋದರ ಕುಂದರ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಶ್ರೀನಿವಾಸ ಇನೋಳಿ ವಂದಿಸಿದರು. ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.


