UN NETWORKS
ಅತ್ತಾವರ: ಹೆಚ್ಚಿನ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ನಡೆಯದಿರುವುದು ಕ್ರೀಡಾ ಕ್ಷೇತ್ರಕ್ಕೆ ದೊಡ್ಡ ಹಿನ್ನಡೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಕ್ರೀಡಾ ಮನೋಭಾವ ಬೆಳೆಸದೇ ಇದ್ದಲ್ಲಿ ದೇಶ ಈ ಕ್ಷೇತ್ರದಲ್ಲಿ ಪೈಪೋಟಿ ಮಾಡಲು ಅಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ್ ಆಳ್ವ ಅಭಿಪ್ರಾಯಪಟ್ಟರು.ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಮಂಗಳೂರು ದಕ್ಷಿಣ ವಲಯ ವತಿಯಿಂದ ಅತ್ತಾವರ ಮಧುಸೂದನ ಕುಶೆ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಾಗಾರ ಮತ್ತು ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ ಜೊತೆ ಕ್ರೀಡೆ ಕಡ್ಡಾಯವಾಗಿರಬೇಕು ಎಂದು ಎಲ್ಲರೂ ವೇದಿಕೆಯಲ್ಲಿ ಹೇಳುತ್ತಾರೆಯೇ ಹೊರತು, ಕಾರ್ಯರೂಪಕ್ಕೆ ತರುವುದಿಲ್ಲ.ಎಂದ ಅವರು ವಲಯ ಮಟ್ಟದ ಕ್ರೀಡೋತ್ಸವದಿಂದ ರಾಷ್ಟ್ರಮಟ್ಟದ ಕ್ರೀಡೆ ತನಕ ಪೂರಕ ಬಜೆಟನ್ನು ಸರಕಾರ ಇಡಬೇಕು ಎಂದರು.
ಅಧ್ಯಕ್ಷೀಯ ವಾರ್ತಾ ಪತ್ರಿಕೆ ಕ್ರೀಡಾ ಸಿಂಚನವನ್ನು ಬಿಡುಗಡೆಗೊಳಿಸಿದ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ ಶಿವರಾಮಯ್ಯ ಮಾತನಾಡಿ ಇಂದಿನ ಶೈಕ್ಷಣಿಕ ಜೀವನದಲ್ಲಿ ಅದೆಷ್ಟೋ ಮಕ್ಕಳು ನಡೆಯುವ ಅಭ್ಯಾಸವನ್ನೇ ಮರೆತು ಬಿಟ್ಟಿರುತ್ತಾರೆ. ತಜ್ಞ ವೈದ್ಯರ ಪ್ರಕಾರ ಮಕ್ಕಳು ದಿನಕ್ಕೆ ಒಂದು ಕಿಲೋ ಮೀಟರ್‍ನಷ್ಟು ನಡೆಯಬೇಕು ಅಥವಾ ಅಷ್ಟೇ ಪ್ರಮಾಣ ದೈಹಿಕ ವ್ಯಾಯಾಮವನ್ನು ಕಡ್ಡಾಯವಾಗಿ ಮಾಡಬೇಕು. ಇಲ್ಲದಿದ್ದಲ್ಲಿ 16 ವರ್ಷವಾಗುವಾಗಲೇ ಗಂಭೀರ ಕಾಯಿಲೆಗೆ ತುತ್ತಾಗಬಹುದು ಎನ್ನುವ ಅಭಿಪ್ರಾಯದಂತೆ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಕನಿಷ್ಟ ಒಂದರಿಂದ ಎರಡು ಕಿ. ಮೀ.ನಷ್ಟು ನಡೆಯುವಂತೆ ಪ್ರೇರೇಪಿಸಬೇಕು. ಇದರಿಂದ ಯುವ ಶಕ್ತಿ ಬೆಳೆಯುತ್ತದೆ. ಮಾನವ ಸಂಪನ್ಮೂಲ ಗಟ್ಟಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗುರುನಾಥ ಬಾಗೇವಾಡಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಲೋಕನಾಥ ರೈ, ಡೋಲ್ಪಿ ಸಿಕ್ವೇರಾ, ಅಬ್ದುಲ್ ರಹಿಮಾನ್ ಇವರನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟ ಮತ್ತು ರಾಷ್ಟ್ರಮಟ್ಟದಲ್ಲಿ ವಿಜೇತ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು. ಮಾಸ್ಟರ್ ಅಥ್ಲೇಟಿಕ್ಸ್‍ನಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ದೈಹಿಕ ಶಿಕ್ಷಣ ಶಿಕ್ಷಕರುಗಳನ್ನು ಗೌರವಿಸಲಾಯಿತು
ಹಾಗೂ ವಿವಿಧ ಕ್ರೀಡಾಕೂಟ ಮತ್ತು ಪಂದ್ಯಾಟವನ್ನು ಸಂಘಟಿಸಿದ ಶಾಲೆಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಪುರಸ್ಕರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ರಾಧಕೃಷ್ಣ ಶೆಟ್ಟಿ ಅಭಿನಂದನಾ ಭಾಷಣಗೈದರು.
ಮುಖ್ಯ ಅತಿಥಿಗಳಾಗಿ ಸರೊಜಿನಿ ಮಧುಸೂದನ ಕುಶೆಯ ಸಂಚಾಲಕ ಅಕ್ಷಯ್ ಅಡ್ಯಂತಾಯ, ಪ್ರಾಂಶುಪಾಲ ಕೆ.ಕೆ.ಉಪಧ್ಯಾಯ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ರಘುನಾಥ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್.ನಾಯಕ್, ಕಾರ್ಯದರ್ಶಿ ಶೇಖರ್ ಕಡ್ತಲ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್, ಮಂಗಳೂರು ಉತ್ತರ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರುಗಳಾದ ಅಶೋಕ್ ಕುಮಾರ್ ಶೆಟ್ಟಿ, ಪಿ.ಡಿ.ಶೆಟ್ಟಿ, ಕೆ.ಎಂ.ಕೆ. ಮಂಜಿನಾಡಿ, ಜಗದೀಶ್ ಶೆಟ್ಟಿ, ಎಂ.ಎಚ್.ಮಲಾರ್ ಉಪಸ್ಥಿತರಿದ್ದರು.
ಲ್ಯಾನ್ಸಿ ಸಿಕ್ವೇರ, ಪ್ರಮೋದ್ ಕುಮಾರ್, ದಿಲೀಪ್ ಕುಮಾರ್, ಮೋಹನ್, ಪ್ರೀತಂ,ಸಿಲ್ವಿಯಾ ರುತು ಇವರುಗಳು ಸನ್ಮಾನಿತರ ಮತ್ತು ಪ್ರಶಸ್ತಿ ವಿಜೇತ ಪಟ್ಟಿ ವಾಚಿಸಿದರು.
ತಾಲೂಕು ಸಂಘದ ಅಧ್ಯಕ್ಷ ತ್ಯಾಗಂ ಹರೇಕಳ ಸ್ವಾಗತಿಸಿ ಪ್ರಸ್ತಾವನೆಗೈದರು. ಲಿಲ್ಲಿ ಪಾಯಸ್ ವಂದಿಸಿದರು. ರಾಜೀವ್ ನಾಯಕ್ ಮತ್ತು ಹರ್ಷಲ್ ಸ್ಮಿತಾ ಕಾರ್ಯಕ್ರಮ ನಿರ್ವಹಿಸಿದರು.


