UN NETWORKS
ದೇರಳಕಟ್ಟೆ: ನಿಟ್ಟೆ ವಿವಿ ಸಾರ್ವಜನಿಕ ಆರೋಗ್ಯ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಯುನೈಟೆಡ್ ಸ್ಟೇಟ್ಸ್‍ನ ಮಿನ್ನೇಸೋಟ ವಿಶ್ವವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆರೋಗ್ಯ ವಿಚಾರದಲ್ಲಿ ಮೂರು ವಾರಗಳ ನಡೆಯಲಿರುವ ಬೇಸಿಗೆ ಶಿಕ್ಷಣ ತರಭೇತಿಯಲ್ಲಿ ಭಾಗವಹಿಸಲಿದ್ದಾರೆ.
ನಿಟ್ಟೆ ವಿಶ್ವವಿದ್ಯಾನಿಲಯ ಮತ್ತು ಯು.ಎಸ್.ನ ಮಿನ್ನೆಸೋಟ ವಿಶ್ವವಿದ್ಯಾನಿಲಯ ಶೈಕ್ಷಣಿಕ ಒಡಂಬಡಿಕೆಯಂತೆ ವಿವಿಯ ಸಾರ್ವಜನಿಕ ಆರೋಗ್ಯ ವಿಭಾಗದ ವಿದ್ಯಾರ್ಥಿಗಳ ನಾಲ್ಕನೇ ಬ್ಯಾಚ್ ಮೇ 21 ರಿಂದ ಜೂನ್ 9ರವರೆಗೆ ನಡೆಯುವ ತರಭೇತಿಯಲ್ಲಿ ಭಾಗವಹಿಸಲಿದ್ದಾರೆ.
ಸಾರ್ವಜನಿಕ ಆರೋಗ್ಯದ ವಿಭಾಗದ ಡಾ| ಸುಗಂಧ ಬಿ.ಕೆ, ಡಾ| ನಿವೇದಿತಾ ಲೈಮಾಯಂ ಮತ್ತು ಡಾ| ಸುನೀಲಾ ದೀಕ್ಷಿತ್ ಅವರು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ಮಾನ್ಯತೆಯ ವಿಚಾರ ಮತ್ತು ತಂತ್ರಜ್ಞಾನದ ಬಳಕೆ, ಜಾಗತಿಕ ಆಹಾರ ವ್ಯವಸ್ಥೆಗಳ ಬಗ್ಗೆ ಮಂಡಿಸಿದ ಅಧ್ಯಯನಕ್ಕೆ ವಿದ್ಯಾರ್ಥಿವೇತನದಲ್ಲಿ ತರಭೇತಿಯನ್ನು ಪಡೆಯಲು ತೆರಳಲಿದ್ದು, ಮಿನ್ನೆಸೋಟ ವಿದ್ಯಾರ್ಥಿಗಳು ಚಳಿಗಾಲದ ಸಂದರ್ಭದಲ್ಲಿ ಮಂಗಳೂರಿನ ನಿಟ್ಟೆ ವಿವಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿದ್ದಾರೆ.
ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ, ಕುಲಸಚಿವೆ ಡಾ| ಅಲ್ಕಾ ಕುಲಕರ್ಣಿ, ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿ ಡೀನ್ ಡಾ| ಪಿ.ಎಸ್.ಪ್ರಕಾಶ್ ಮತ್ತು ಸಾರ್ವಜನಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.


