UN NETWORKS
ಕೊಣಾಜೆ: ಕೇವಲ ಶಾಸನ, ಲಿಪಿ, ಹಳೆಯ ಸಾಹಿತ್ಯದ ಮೂಲಕವೇ ನಾವು ಭಾಷೆಯೊಂದರ ಚರಿತ್ರೆಯನ್ನು ಕಟ್ಟುವ ಪ್ರಯತ್ನವನ್ನು ಮಾಡಲು ಸಾಧ್ಯವಿಲ್ಲ. ಕನ್ನಡದ ಒಳನುಡಿಗಳನ್ನು ಸಾಮಾಜಿಕ ಬಾಷಾ ವಿಜ್ಞಾನದ ನೆಲೆಯಿಂದ ಮಾತ್ರವಲ್ಲದೆ ಅಧ್ಯಯನದ, ಚಾರಿತ್ರಿಕ ನೆಲೆಯಿಂದಲೂ ನೋಡಬೇಕಾಗುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಡಾ.ಶಶಿಕಲಾ ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ವಿವಿಯ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಯುಜಿಸಿ ಸ್ಯಾಪ್ ಯೋಜನೆ ಇದರ ಆಶ್ರಯದಲ್ಲಿ `ಕರಾವಳಿಯ ಬಹುಭಾಷಿಕತೆ, ಸಾಹಿತ್ಯಕ, ಸಾಂಸ್ಕೃತಿಕ ಅಧ್ಯಯನದ ವೈಧಾನಿಕತೆ’ ಎಂಬ ವಿಷಯದಲ್ಲಿ ನಡೆಯುತ್ತಿರುವ ವಿಚಾರಸಂಕಿರಣದಲ್ಲಿ `ಭಾಷಾ ಚರಿತ್ರೆಯ ಪುನರ್ ರಚನೆಯಲ್ಲಿ ಒಳನುಡಿಗಳ ಪಾತ್ರ’ ವಿಷಯದಲ್ಲಿ ಶನಿವಾರ ಉಪನ್ಯಾಸ ನೀಡಿದರು.
ಒಂದು ಕಡೆಯ ಜನರು ಬೇರೆ ಬೇರೆ ಕಡೆ ತೆರಳಿ ಅಲ್ಲಿಯ ಭಾಷೆಯೊಂದಿಗೆ ಬೆರೆತಾಗ ಭಾಷೆಯ ಧ್ವನಿಯಲ್ಲಿ ವ್ಯತ್ಯಾಸಗಳಾಗಿರುವುದನ್ನು ನಾವು ಗಮನಿಸಬಹುದು. ಕನ್ನಡದಲ್ಲಿಯೂ ಈ ರೀತಿಯ ವ್ಯತ್ಯಾಸಗಳಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಕರಾವಳಿಯಲ್ಲಿಯೂ ಹಿಂದೆ ಸಮುದ್ರ ಮಾರ್ಗದ ಮೂಲಕ ಬೇರೆ ಬೇರೆ ಭಾಗದ ಜನರು ಇಲ್ಲಿ ಬಂದು ವಾಸಿಸಿದ ಪರಿಣಾಮ ಇಲ್ಲಿ ಬಹುಭಾಷಾ ಸಂಸ್ಕೃತಿ, ಬಹುತ್ವದ ವಿಭಿನ್ನ ನೆಲೆಗಳು ಸೃಷ್ಟಿಯಾದವು. ಇದು ಅಧ್ಯಯನಕ್ಕೆ ಪೂರಕವಾಗಿದೆ.
ಇಂದು ಅಳಿಯುತ್ತಿರುವ ಭಾಷೆಗಳ ಬಗ್ಗೆ ವಿಶ್ವವಿದ್ಯಾಲಯಗಳು ಹೆಚ್ಚಿನ ಸಂಶೋಧನೆಯನ್ನು ನಡೆಸುವುದರ ಮೂಲಕ ಆ ಭಾಷೆಯ ಉಳಿವಿಗಾಗಿಯೂ ಪ್ರಯತ್ನಗಳನ್ನು ನಡೆಸಬೇಕಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ ಅವರು ಬಹುಭಾಷಿಕ ಅಧ್ಯಯನದ ತಾತ್ವಿಕತೆ ಮತ್ತು ವಿಧಾನಗಳು ಹಾಗೂ ಕಾಸರಗೋಡಿನ ಪ್ರೊ.ಮಹೇಶ್ವರಿ ಯು.ಅವರು ಭಾಷಿಕ ಸಮುದಾಯಗಳು, ವೃತ್ತಿ ಮತ್ತು ಸಂಸ್ಕೃತಿ ವಿಷಯದಲ್ಲಿ ಉಪನ್ಯಾಸವನ್ನು ನೀಡಿದರು.
ಗೋಷ್ಠಿಯ ಸಂಯೋಜನೆಯನ್ನು ಮಂಗಳೂರು ವಿವಿಯ ಡಾ.ರಾಜಶ್ರೀ ಅವರು ನಡೆಸಿಕೊಟ್ಟರು.


